More

    ಅಗ್ನಿ ಪರೀಕ್ಷೆ ಎದುರಿಸಿ ಬಂದಿರುವೆ

    ನಿಪ್ಪಾಣಿ: ಮಾಡದ ತಪ್ಪಿಗೆ ಅಗ್ನಿ ಪರೀಕ್ಷೆ ಎದುರಿಸಿ ಬಂದಿದ್ದೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಭಾವುಕರಾಗಿ ನುಡಿದರು.

    ನಿಪ್ಪಾಣಿ ಕ್ಷೇತ್ರಕ್ಕೆ ಸಚಿವರಾಗಿ ಮೊದಲ ಬಾರಿಗೆ ಆಗಮಿಸಿ ಪಕ್ಷದ ಕಚೇರಿಗೆ ಭೇಟಿ ಮಾಡಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಅದ್ದೂರಿ ಸತ್ಕಾರ ಮಾಡಿದ್ದೀರಿ. ನಾನು ಇದನ್ನು ಯಾವತ್ತೂ ಮರೆಯುವುದಿಲ್ಲ. ನಮ್ಮೆಲ್ಲರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಕರೊನಾ ಮೂರನೇ ಅಲೆ ತಡೆಗೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಿದ್ದರಿಂದ ನಾವೆಲ್ಲ ಸಚಿವರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

    ನಾನು ಇಷ್ಟು ದೊಡ್ಡ ಸ್ಥಾನಕ್ಕೇರಲು ಕ್ಷೇತ್ರದ ಜನರ ಸಹಕಾರ, ಪಕ್ಷದ ನಾಯಕರ ಬೆಂಬಲ ಹಾಗೂ ಕಾರ್ಯಕರ್ತರ ಶ್ರಮ ಕಾರಣ. ಸರ್ಕಾರ ಹಾಗೂ ಪಕ್ಷದ ನಾಯಕರು ನನ್ನ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಎಲ್ಲ ಕೆಲಸವನ್ನು ನಾನೊಬ್ಬಳೇ ಮಾಡಲು ಸಾಧ್ಯವಿಲ್ಲ. ಎಲ್ಲ ಕಾರ್ಯಕರ್ತರ ಸಹಕಾರವೂ ಬೇಕಾಗುತ್ತದೆ ಎಂದು ಹೇಳಿದರು.

    ನಾನು ತಪ್ಪು ಮಾಡಿಲ್ಲ: ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಶತ್ರುಗಳು ಇರುತ್ತಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಈ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಲಿ. ನಾನು ಅದನ್ನು ಎದುರಿಸಲು ಸಿದ್ದಳಿದ್ದೇನೆ. ನನ್ನ ಮೇಲೆ ಬಂದಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಬಿಜೆಪಿ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಮತ್ತೆ ಮಂತ್ರಿ ಸ್ಥಾನ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ನಾಳೆಯಿಂದ ವಿಜಯಪುರಕ್ಕೆ ಭೇಟಿ ನೀಡಿ ಮುದ್ದೇಬಿಹಾಳ ಮತ್ತು ನಿಡಗುಂದಿ ತಾಲೂಕಿನಲ್ಲಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ನಾನು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಉಂಟಾದ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಇಲಾಖೆ ವತಿಯಿಂದ ಅಗತ್ಯ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಈ ಇಲಾಖೆ ಮೊದಲು ಪೋಷಣ ಅಭಿಯಾನ ಯೋಜನೆಯಲ್ಲಿ ರಾಜ್ಯ 15ನೇ ಸ್ಥಾನದಲ್ಲಿತ್ತು. ಆದರೆ, ನನ್ನ ಅವಧಿಯಲ್ಲಿ ನಿರಂತರ ಪರಿಶ್ರಮ ಹಾಗೂ ಅಧಿಕಾರಿಗಳ ಸಹಕಾರದೊದಿಗೆ 2ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದೇನೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ 26ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ತರಲಾಗಿದೆ. ರಾಜ್ಯದಲ್ಲಿ ಅಪೌಷ್ಟಿಕತೆ ಪ್ರಮಾಣವು ಶೇ. 0.3ರಷ್ಟಿತ್ತು. ನಾನು ಅಧಿಕಾರ ಸ್ವೀಕರಿಸಿದ ಮೇಲೆ ಎರಡು ವರ್ಷಗಳಲ್ಲಿ ಶೇ 0.1ಕ್ಕೆ ಇಳಿಸಲಾಗಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts