More

    ಅಕ್ರಮ ದಂಧೆಕೋರರ ಹೊಸ ಐಡಿಯಾ!

    ರಾಣೆಬೆನ್ನೂರ: ಅಕ್ರಮವಾಗಿ ಮರಳು ಸಾಗಿಸಲು ದಂಧೆಕೋರರು ಲಾರಿ, ಮಜಡಾ, ಟ್ರ್ಯಾಕ್ಟರ್, ಎತ್ತಿನ ಬಂಡಿ ಕೈ ಬಿಟ್ಟು ಇದೀಗ ಬೈಕ್ ಬಳಸತೊಡಗಿದ್ದಾರೆ. ಈ ಮೂಲಕ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ.

    ಮೂರ್ನಾಲ್ಕು ಚೀಲದಲ್ಲಿ ಮರಳನ್ನು ತುಂಬಿ ಬೈಕ್ ಮೂಲಕ ನದಿಪಾತ್ರದಿಂದ ಬೇರೆಡೆ ಸಾಗಿಸಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಹಗಲೂರಾತ್ರಿ ಮರಳನ್ನು ಲೂಟಿ ಮಾಡಲಾಗುತ್ತಿದೆ. ಆದರೆ, ಇಂಥ ದಂಧೆಕೋರರನ್ನು ಮಟ್ಟಹಾಕಬೇಕಾದ ತಹಸೀಲ್ದಾರರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಕುಂಟು ನೆಪದಲ್ಲಿ ದಂಧೆ: ಬೈಕ್ ಮೇಲೆ ಅಕ್ರಮವಾಗಿ ಮರಳನ್ನು ಸಾಗಿಸುತ್ತಿರುವ ಕುರಿತು ದಂಧೆಕೋರರು ಪೊಲೀಸ್ ಅಥವಾ ಸಂಬಂಧಿಸಿದ ಇಲಾಖೆಯವರು ಕೇಳಿದರೆ, ‘ಸರ್, ಮನೆ ಕಟ್ಟೆ ಒಡೆದಿದೆ. ಗೋಡೆ ಬಿರುಕು ಬಿಟ್ಟಿದೆ. ಶೌಚಗೃಹ ನಿರ್ವಣಕ್ಕೆ ಸ್ವಲ್ಪ ಮರಳು ಕಡಿಮೆ ಬಿದ್ದಿತ್ತು. ಮನೆ ಮುಂದಿನ ಗಟಾರು ರಿಪೇರಿ ಇದೆ’… ಹೀಗೆ ಕುಂಟು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಆದರೆ, ನಿತ್ಯವೂ ಬೈಕ್ ಮೇಲೆ ಮರಳು ತೆಗೆದುಕೊಂಡು ಹೋಗುತ್ತಿರುವ ದಂಧೆಕೋರರು ಹೇಳುತ್ತಿರುವುದು ಸತ್ಯವೋ, ಸುಳ್ಳೋ ಎಂಬುದನ್ನು ಈವರೆಗೂ ಅಧಿಕಾರಿಗಳು ಪರಿಶೀಲಿಸಲು ಮುಂದಾಗಿಲ್ಲ.

    ಸಮರ್ಪಕ ಮರಳು ದೊರೆಯುವಂತಾಗಲಿ: ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಮರಳು ತೆಗೆದ ಆರೋಪದಡಿ ಹಾವೇರಿ ಜಿಲ್ಲೆಯಲ್ಲಿ ಕೆಲ ಮರಳಿನ ಬ್ಲಾಕ್​ಗಳನ್ನು ಬಂದ್ ಮಾಡಲಾಗಿದೆ. ಆದರೆ, ಗುತ್ತಿಗೆದಾರರಿಂದ ದಂಡ ಕಟ್ಟಿಸಿಕೊಂಡು ಮರು ಆರಂಭಿಸಬೇಕಾದ ಅಧಿಕಾರಿಗಳು ತಮಗೂ, ಗುತ್ತಿಗೆದಾರರಿಗೂ ಸಂಬಂಧವೇ ಇಲ್ಲದಂತೆ ಉಳಿದುಕೊಂಡಿದ್ದಾರೆ. ಇದರಿಂದ ತಾಲೂಕಿನಲ್ಲಿ ಸಮರ್ಪಕವಾಗಿ ಮರಳು ದೊರೆಯುತ್ತಿಲ್ಲ. ಇದು ಅಕ್ರಮ ದಂಧೆಕೋರರಿಗೆ ವರದಾನವಾಗಿದೆ. ಹಗಲಿನಲ್ಲಿ ಬೈಕ್ ಮೂಲಕ ಮರಳು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ರಾತ್ರಿ ಸಮಯದಲ್ಲಿ ಮಜಡಾ ಮೂಲಕ ಮಾರಾಟ ಮಾಡುತ್ತಿದ್ದಾರೆ.

    ಸ್ಥಳೀಯ ಶಾಸಕ ಅರುಣಕುಮಾರ ಪೂಜಾರ ಕೂಡಲೆ ಸೂಕ್ತ ಕ್ರಮ ಕೈಗೊಂಡು ಸಮರ್ಪಕವಾಗಿ ಮರಳು ದೊರೆಯುವಂತೆ ಮಾಡಬೇಕಿದೆ ಎಂದು ಜನ ಆಗ್ರಹಿಸುತ್ತಿದ್ದಾರೆ.

    ನಿದ್ದೆಯಲ್ಲಿದೆ ಅಕ್ರಮ ಮರಳು ತಡೆ ಸಮಿತಿ: ಅಕ್ರಮವಾಗಿ ಮರಳು ಸಾಗಿಸುವವರ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿ ಒಳಗೊಂಡ ಅಕ್ರಮ ಮರಳು ತಡೆ ಸಮಿತಿ ರಚಿಸಲಾಗಿದೆ. ನಿತ್ಯವೂ ಒಂದೊಂದು ಇಲಾಖೆಯ ಸಿಬ್ಬಂದಿಯನ್ನು ನಿಗಾ ವಹಿಸಲು ನೇಮಕ ಮಾಡಲಾಗಿದೆ. ಆದರೆ, ಈ ಅಧಿಕಾರಿಗಳ ಕಣ್ಣಿಗೆ ಬೈಕ್ ಮೇಲೆ ಮರಳು ಸಾಗಿಸುವವರು ಕಾಣಿಸುತ್ತಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಪರವಾನಗಿ ಇಲ್ಲದೆ ಯಾವ ರೀತಿ ಮರಳನ್ನು ಸಾಗಿಸಿದರೂ ಅಪರಾಧ. ಯಾವ ಭಾಗದಲ್ಲಿ ಬೈಕ್ ಮೇಲೆ ಮರಳು ಸಾಗಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಲಾಗುವುದು. ಚೆಕ್​ಪೋಸ್ಟ್​ಗಳನ್ನು ಪುನಃ ಆರಂಭಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಸರಿಪಡಿಸಲಾಗುವುದು.
    | ಬಸವರಾಜ ಕೋಟೂರು, ತಹಸೀಲ್ದಾರ್ ರಾಣೆಬೆನ್ನೂರ

    ಮರಳು ವಿತರಣೆಯಲ್ಲಿ ಸಮಸ್ಯೆ ಆಗಿರುವುದು ಗಮನಕ್ಕೆ ಇದೆ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಜನತೆಗೆ ಸರಳ ರೀತಿಯಲ್ಲಿ ಮರಳು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಲಾಗುವುದು.
    | ಅರುಣಕುಮಾರ ಪೂಜಾರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts