More

    ಅಕ್ರಮ ಚಟುವಟಿಕೆ ತಾಣ ಗಾಂಧಿ ಭವನ!

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳಿಗಾಗಿ ನಿರ್ವಿುಸಿದ ಪಟ್ಟಣದ ಗಾಂಧಿ ಭವನ ನಿರ್ವಹಣೆ, ಸೌಲಭ್ಯಗಳ ಕೊರತೆಯಿಂದ ಹಾಳು ಕೊಂಪೆಯಾಗಿದ್ದು, ಅಕ್ರಮ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ.

    ಗಾಂಧಿ ಭವನದ ಅವ್ಯವಸ್ಥೆಯಿಂದ ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಕಾರ್ಯಕ್ರಮವೂ ನಡೆದಿಲ್ಲ. ಮಳೆಗಾಲದಲ್ಲಿ ರೈತರು ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಬಳಸಿಕೊಳ್ಳುತ್ತಾರೆ. ಅದನ್ನು ಬಿಟ್ಟರೆ ಹಗಲು-ರಾತ್ರಿ ಅಕ್ರಮ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತವೆ.

    ಭವನದ ಒಂದು ಕೊಠಡಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ವಿಶ್ರಾಂತಿ ಗೃಹಕ್ಕಾಗಿ ಹಾಗೂ ಇನ್ನೊಂದು ಕೊಠಡಿ ಮಾಜಿ ಸೈನಿಕರ ಸಂಘದ ಕಾರ್ಯಾಲಯಕ್ಕಾಗಿ ಬಳಕೆಯಾಗುತ್ತಿವೆ. ವಿಶಾಲ ಬಯಲು ಹೊಂದಿರುವ ಗಾಂಧಿ ಭವನ ಸೂಕ್ತ ಜಾಗದಲ್ಲಿದ್ದರೂ ಸದ್ಬಳಕೆ ಆಗದಿರುವುದು ವಿಪರ್ಯಾಸ.

    ಮದ್ಯ ವ್ಯಸನಿಗಳ ಅಡ್ಡೆ: ಮಹಾತ್ಮಾ ಗಾಂಧೀಜಿ 1934ರ ಮಾರ್ಚ್ 3ರಂದು ರೋಣ ತಾಲೂಕಿನ ಜಕ್ಕಲಿ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯದ ನರೇಗಲ್ಲನಲ್ಲಿ ಕೆಲಕಾಲ ನಿಂತು ಹೋಗಿದ್ದರು. ಅದರ ಸವಿನೆನಪಿಗಾಗಿ ಧಾರವಾಡ ಸಂಸದ ಐ.ಜಿ. ಸನದಿ ಅವರ ಸಂಸದರ ನಿಧಿಯಿಂದ 2 ಲಕ್ಷ ರೂ. ಅನುದಾನದಲ್ಲಿ 2000ರಲ್ಲಿ ಮಹಾತ್ಮ ಗಾಂಧಿ ಸಾಂಸ್ಕೃತಿಕ ಭವನ ನಿರ್ವಿುಸಲಾಯಿತು.

    ರಾತ್ರಿಯಾಯಿತೆಂದರೆ ಗಾಂಧಿ ಭವನವೋ ಅಥವಾ ಕುಡುಕರ ತಾಣವೋ ಎಂಬುದು ಗೊತ್ತಾಗುವುದಿಲ್ಲ. ರಾತ್ರಿ ವೇಳೆ ಹಂದಿ, ನಾಯಿ, ಬಿಡಾಡಿ ದನಗಳು ಇಲ್ಲಿಯೇ ವಾಸ್ತವ್ಯ ಹೂಡುತ್ತವೆ. ಮೂಲ ಸೌಕರ್ಯಗಳಿಂದ ವಂಚಿತವಾದ ಈ ಭವನದ ಆವರಣ ಮಲ, ಮೂತ್ರ ವಿಸರ್ಜನೆಯ ತಾಣವಾಗಿದೆ. ದುರ್ವಾಸನೆಯಿಂದ ಸುತ್ತಮುತ್ತಲಿನ ಪರಿಸರ ಮಲಿನವಾಗಿದೆ.

    ಗಾಂಧಿ ಭವನಕ್ಕೆ ಹಾಕಲಾದ ನೆಲಹಾಸು ಸಂಪೂರ್ಣ ಕಿತ್ತು ಹೋಗಿದೆ. ಮೇಲ್ಛಾವಣಿಯ ಸಿಮೆಂಟ್​ನ ತಗಡು ಒಡೆದು ಹೋಗಿದ್ದರಿಂದ ಅನೇಕರು ಇಲ್ಲಿ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಪಪಂ ಅಧಿಕಾರಿಗಳ ಜಾಣ ಕುರುಡುತನ: ನರೇಗಲ್ಲ ಪಪಂ ಕಚೇರಿ ಪಕ್ಕದಲ್ಲೇ ಇರುವ ಗಾಂಧಿ ಭವನಕ್ಕೂ ತಮಗೂ ಸಂಬಂಧವಿಲ್ಲದಂತೆ ಪಪಂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ನಿರ್ವಹಣೆ ಕೊರತೆಯಿಂದ ಇದು ಹಾಳು ಕೊಂಪೆಯಾಗಿದೆ. ಇನ್ನಾದರೂ ಪಪಂನವರು ಇತ್ತ ಗಮನ ಹರಿಸಿ ಗಾಂಧಿ ಭವನದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ನರೇಗಲ್ಲನ ಗಾಂಧಿ ಭವನ ಪಪಂ ಅಧಿಕಾರಿಗಳ ನಿರ್ಲಕ್ಷ್ಯಂದ ಹಾಳಾಗಿದೆ. ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕಿದ್ದ ಭವನ ಇಂದು ಅಕ್ರಮ ಚಟುವಟಿಕೆ ತಾಣವಾಗಿರುವುದು ಪಪಂ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಪಪಂ ಅಧಿಕಾರಿಗಳು ಗಾಂಧಿ ಭವನವನ್ನು ಅಭಿವೃದ್ಧಿಪಡಿಸಬೇಕು. | ಮಹಾದೇವಪ್ಪ ಬೇವಿನಕಟ್ಟಿ, ಕಜಾಪ ಗಜೇಂದ್ರಗಡ ತಾಲೂಕಾಧ್ಯಕ್ಷ

    ಗಾಂಧಿ ಭವನದ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಅನೂಮೋದನೆ ಬಂದ ತಕ್ಷಣ ಗಾಂಧಿ ಭವನವನ್ನು ಅಭಿವೃದ್ಧಿ ಮಾಡಲಾಗುವುದು. | ಎಂ.ಎ. ನೂರುಲ್ಲಾಖಾನ್, ನರೇಗಲ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts