More

    ಅಕ್ರಮ ಕೆಂಪುಕಲ್ಲು ಕ್ವಾರಿ

    ಶಿರಸಿ: ತಾಲೂಕಿನ ಬಿಸಲಕೊಪ್ಪ ಭಾಗದ ಸರ್ಕಾರಿ ಮಾಲೀಕತ್ವದ ಬೆಟ್ಟ ಭೂಮಿಯಲ್ಲಿ ಕೆಂಪುಕಲ್ಲು ಕ್ವಾರಿ ಅಕ್ರಮವಾಗಿ ನಡೆಯುತ್ತಿದ್ದು, ಎಗ್ಗಿಲ್ಲದೆ ಕಲ್ಲು ಮಾರಾಟವೂ ನಡೆದಿದೆ.

    ತಾಲೂಕಿನ ಬನವಾಸಿ ಅರಣ್ಯ ವಲಯವಾದ ಬಿಸಲಕೊಪ್ಪದ ಬೆಟ್ಟ ಸರ್ವೆ ನಂಬರ್ 159/3ರಲ್ಲಿ 2013ರಲ್ಲಿ ಅಕ್ರಮ ಕೆಂಪು ಕಲ್ಲು ಕ್ವಾರಿ ನಡೆಯುತ್ತಿದ್ದಾಗ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿ ವೆಂಕಟರಮಣ ಮಂಜುನಾಥ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ವೇಳೆ ಆರೋಪಿ ನಾಪತ್ತೆಯಾಗಿದ್ದು, ಹುಡುಕುವ ಪ್ರಕ್ರಿಯೆ ನಡೆದಿತ್ತು. ಅದಾದ ನಂತರ ಕೆಲ ತಿಂಗಳು ಸುಮ್ಮನಿದ್ದ ಆರೋಪಿ ವರ್ಷಗಳ ಹಿಂದೆ ಮತ್ತೆ ಕ್ವಾರಿ ಆರಂಭಿಸಿ ಇಡೀ ಬೆಟ್ಟವನ್ನು ಕಬಳಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ರಸ್ತೆಯ ಇಕ್ಕೆಲಗಳಲ್ಲಿ ಕಲ್ಲು: ಈ ಭಾಗದಲ್ಲಿ ಮೂರ್ನಾಲ್ಕು ಕೆಂಪು ಕಲ್ಲು ಕ್ವಾರಿಗಳಿದ್ದು, ಕೆಲವು ಸ್ಥಗಿತವಾಗಿದ್ದರೆ ಒಂದೆರಡು ಈಗಲೂ ಕಲ್ಲು ತೆಗೆಯುವ ಕೆಲಸ ಮಾಡುತ್ತಿವೆ. ಯಂತ್ರಗಳ ಮೂಲಕ ಭೂಮಿ ಅಗೆದು ಕೆಂಪು ಕಲ್ಲುಗಳನ್ನು ರಾಶಿ ಹೊಡೆಯಲಾಗಿದೆ. ಪ್ರಸ್ತುತ 10 ಸಾವಿರಕ್ಕೂ ಹೆಚ್ಚಿನ ಕಲ್ಲುಗಳನ್ನು ಸ್ಥಳದಿಂದ ತೆಗೆದು ಮಾರಲಾಗಿದ್ದರೆ, ಸಾವಿರಾರು ಕಲ್ಲುಗಳನ್ನು ರಸ್ತೆಯ ಪಕ್ಕದಲ್ಲಿಯೇ ಶೇಖರಿಸಿ ಇಡಲಾಗಿದೆ. ಈ ಕಲ್ಲುಗಳ ಸಾಗಾಟಕ್ಕೆ ಬೃಹತ್ ವಾಹನಗಳು ಗ್ರಾಮದ ರಸ್ತೆಯಲ್ಲಿ ಅಡ್ಡಾಡುತ್ತಿರುವ ಕಾರಣ ರಸ್ತೆ ಕೂಡ ಸಂಪೂರ್ಣ ಹಾಳಾಗಿದೆ. ಸಮೀಪವೇ ಅರಣ್ಯ ಇಲಾಖೆಯ ಎಕ್ಕಂಬಿ ಚೆಕ್ ಪೋಸ್ಟ್ ಇದ್ದರೂ ಯಾರ ಭಯವಿಲ್ಲದೇ ಅರಣ್ಯ ಇಲಾಖೆಯ ಆಸ್ತಿಯಾಗಿರುವ ಬೆಟ್ಟವನ್ನು ಮೊಗೆದು ವಾಹನಗಳ ಮೂಲಕ ರವಾನಿಸಲಾಗುತ್ತಿದೆ. ಇಲಾಖೆಯ ಅಧಿಕಾರಿಗಳು ಏನೂ ಮಾಡದೇ ಸುಮ್ಮನೆ ಕುಳಿತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

    ಕಠಿಣ ಕ್ರಮ ಅಗತ್ಯ: ಕೆಲ ದಿನಗಳ ಹಿಂದೆ ತಾಲೂಕಿನ ಮಂಜುಗುಣಿಯ ಮಾಲ್ಕಿ ಜಾಗದಲ್ಲಿ ಕ್ವಾರಿ ನಡೆಯುತ್ತಿದ್ದರೂ ಅನುಮತಿಯಿಲ್ಲದ ಕಾರಣ ಕ್ವಾರಿಯನ್ನು ಬಂದ್ ಮಾಡಿಸಲಾಗಿತ್ತು. ಇದೇ ರೀತಿ ಕೊಪ್ಪ, ಹರೀಶಿ ಭಾಗದಲ್ಲಿಯೂ ಸಾಕಷ್ಟು ಅಕ್ರಮ ಕ್ವಾರಿಗಳು ನಡೆಯುತ್ತಿವೆ. ಕಲ್ಲು ಗಾಡಿಗಳಿಂದ ಸಾಕಷ್ಟು ಅಪಘಾತಗಳೂ ಸಂಭವಿಸಿದೆ. ಕಾರಣ ಅಧಿಕಾರಿಗಳು ಎಚ್ಚೆತ್ತುಕೊಳ್ಳಲು ಇದು ಸಕಾಲವಾಗಿದ್ದು, ಎಲ್ಲ ಅನಧಿಕೃತ ಕ್ವಾರಿ ಬಂದ್ ಮಾಡಿಸಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹ.

    ಕ್ವಾರಿ ನಡೆಸುವವರು ಪ್ರಭಾವಿ ವ್ಯಕ್ತಿಯಾಗಿದ್ದು, ತನ್ನ ಪ್ರಭಾವವನ್ನು ಬಳಸಿಕೊಂಡು ಬೆಟ್ಟದಲ್ಲಿಯೇ ರಸ್ತೆ ಪಕ್ಕದಲ್ಲಿ ಕಲ್ಲುಗಳನ್ನು ಶೇಖರಿಸಿ ಇಟ್ಟಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದು, ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. | ಪಾಂಡುರಂಗ ನಾಯ್ಕ ಸ್ಥಳೀಯ ನಿವಾಸಿ

    ಬಿಸಲಕೊಪ್ಪದ ಒಳಭಾಗದ ಬೆಟ್ಟಗಳಲ್ಲಿ ಅನಧಿಕೃತವಾಗಿ ಕೆಂಪುಕಲ್ಲು ಕ್ವಾರಿ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಸ್ಥಳ ಭೇಟಿ ಮಾಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇವೆ. ಬೆಟ್ಟ ಭೂಮಿಯ ಮಾಲೀಕತ್ವ ರದ್ದುಪಡಿಸಿ ಆದೇಶಿಸುವಂತೆ ತಹಸೀಲ್ದಾರಿಗೆ ಪತ್ರ ಬರೆಯಲಾಗಿದೆ. | ಉಷಾ ಕಬ್ಬೇರ ಆರ್​ಎಫ್​ಒ ಬನವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts