More

    ಅಕ್ಕಿ ಗಿರಣಿಗಳು ಮಂಗಮಾಯ!

    ರಾಜೇಂದ್ರ ಶಿಂಗನಮನೆ ಶಿರಸಿ

    ಭತ್ತಕ್ಕೆ ಅಸ್ಥಿರ ದರ ಹಾಗೂ ಅನ್ನಭಾಗ್ಯ ಯೋಜನೆಯ ಕಾರಣದಿಂದ ಭತ್ತ ಬೆಳೆಯುವವರ ಪ್ರಮಾಣ ಕಡಿಮೆಯಾಗಿದೆ. ಇದನ್ನೇ ನಂಬಿದ್ದ ರಾಜ್ಯದ ಅಕ್ಕಿ ಗಿರಣಿಗಳು ಶೆಟರ್ ಎಳೆಯತೊಡಗಿವೆ.

    ಇಳುವರಿ ಕೊರತೆ ಹಾಗೂ ಅನ್ನಭಾಗ್ಯ ಯೋಜನೆ ವಿಸ್ತರಣೆ ಕಾರಣದಿಂದ ಭತ್ತ ಬೆಳೆಯುವ ಕ್ಷೇತ್ರ ಕುಂಠಿತವಾಗತೊಡಗಿದೆ. ಹೀಗಾಗಿ, ಅಕ್ಕಿ ಗಿರಣಿಗಳಲ್ಲಿ ಭತ್ತದ ಕೊರತೆ ಕಾಣುತ್ತಿದೆ. ಇದರಿಂದ ಈಗಾಗಲೇ ರಾಜ್ಯದ ಸಾವಿರಾರು ಗಿರಣಿಗಳು ಬಾಗಿಲು ಮುಚ್ಚಿದರೆ, ಇರುವ ಗಿರಣಿಗಳು ಇಂದು, ನಾಳೆ ಬಂದಾಗುವ ರೀತಿಯಲ್ಲಿ ಎದೆಯುಸಿರು ಬಿಡುತ್ತಿವೆ. ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 30ಕ್ಕೂ ಹೆಚ್ಚು ಗಿರಣಿ ಬಂದ್ ಆಗಿವೆ.

    ಭತ್ತ ಬೆಳೆಯುವ ಕೆಲಸವು ಹೆಚ್ಚಿನ ಕೂಲಿ ಹಾಗೂ ಶ್ರಮ ಬೇಡುತ್ತದೆ. ಅಲ್ಲದೆ, ನೀರೂ ಹೆಚ್ಚು ಬೇಕು. ಹೀಗಾಗಿ ಬಹುತೇಕ ಭತ್ತದ ಬೆಳೆಗಾರರು ಅಡಕೆ, ಗೋವಿನ ಜೋಳದತ್ತ ಮುಖ ಮಾಡಿದ್ದಾರೆ. ಜತೆಗೆ, ಪಡಿತರ ಅಕ್ಕಿಯನ್ನೂ ಬೇರೆ ಕಡೆಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಸ್ಥಳೀಯ ಅಕ್ಕಿಗೆ ಬೇಡಿಕೆಯಿಲ್ಲದ ಕಾರಣ ಭತ್ತ ಬೆಳೆಗಾರರಲ್ಲಿ ನಿರಾಸಕ್ತಿಗೆ ಕಾರಣವಾಗಿದೆ.

    ಅನ್ನಭಾಗ್ಯ ಯೋಜನೆ ಜಾರಿಯಾದಾಗಿನಿಂದ ಗಿರಣಿಗಳ ಅಕ್ಕಿ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಗಿರಣಿ ನಡೆಸುವುದೇ ಮಾಲೀಕರಿಗೆ ಕಷ್ಟವಾಗಿದೆ. ಈ ಮಧ್ಯೆ ಸರ್ಕಾರವು ಅಕ್ಕಿ ಗಿರಣಿಗಳಿಂದ ಸಂಗ್ರಹಿಸುತ್ತಿರುವ ಲೇವಿಯಿಂದಲೂ ನಷ್ಟ ಉಂಟಾಗುತ್ತಿದೆ.

    ಉ.ಕ. ಜಿಲ್ಲೆಯಲ್ಲಿ ಸುಮಾರು 124 ಅಕ್ಕಿ ಗಿರಣಿಗಳ ಪೈಕಿ ಶೇ. 40ರಷ್ಟು ಗಿರಣಿಗಳು ಈಗಾಗಲೇ ಬಂದ್ ಆಗಿವೆ. ಶಿರಸಿಯೊಂದರಲ್ಲೇ ಕಳೆದೊಂದು ದಶಕದಲ್ಲಿ 8ಕ್ಕೂ ಹೆಚ್ಚು ಗಿರಣಿಗಳು ಬಾಗಿಲು ಹಾಕಿವೆ. ಈ ಹಿಂದೆ ದಿನವೊಂದಕ್ಕೆ ಒಂದು ಗಿರಣಿಗೆ 70-80 ಚೀಲ ಭತ್ತ ಬರುತ್ತಿತ್ತು ಆದರೆ, ಇದೀಗ 25-30 ಚೀಲಗಳಿಗೆ ಕುಸಿದಿದೆ. ಇದನ್ನೇ ನಂಬಿ ಗಿರಣಿ ನಡೆಸುತ್ತಿರುವವರೂ ಗಿರಣಿಯೊಳಗಿನ ಕೆಲಸಗಾರರನ್ನು ಕಡಿಮೆ ಮಾಡಿ ನಷ್ಟ ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಕೆಲಸಗಾರರೂ ದುಡಿಮೆ ಕಳೆದುಕೊಂಡಿದ್ದಾರೆ. ಭತ್ತ ಬೆಳೆಯುವ ಪ್ರದೇಶಗಳಲ್ಲೂ ಕ್ಷೇತ್ರ ಕಡಿಮೆಯಾಗಿದೆ. ಎಲ್ಲರೂ ಅಕ್ಕಿ ಆಮದು ಮಾಡಿಕೊಳ್ಳುತ್ತಿರುವ ಸರ್ಕಾರದ ನಿರ್ಧಾರವನ್ನು ಟೀಕಿಸುತ್ತಿದ್ದಾರೆ.

    ಭತ್ತದ ಕೊರತೆ ಕಾರಣ ಜಿಲ್ಲೆಯಲ್ಲಿ ಒಂದು ಹೊಸ ಅಕ್ಕಿ ಗಿರಣಿ ಕೂಡ ಆರಂಭವಾಗಿಲ್ಲ. ಜತೆಗೆ ಸಹಕಾರಿ ಸಂಸ್ಥೆಗಳು ಗಿರಣಿ ನಡೆಸುತ್ತಿರುವುದು ಖಾಸಗಿ ಗಿರಣಿಗಳಿಗೆ ಹೊಡೆತ ಬೀಳುವಂತಾಗಿದೆ. | ಜಯರಾಮ ನಾಯಕ ಅಕ್ಕಿ ಗಿರಣಿ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts