More

    ಅಕಾಲಿಕ ಮಳೆ ಮಾವು ಇಳುವರಿಗೆ ಬರೆ

    ಮಂಜುನಾಥ ಅಂಗಡಿ ಧಾರವಾಡ

    ಜಿಲ್ಲೆಯ ರೈತರನ್ನು ಅತಿವೃಷ್ಟಿ, ಅನಾವೃಷ್ಟಿ ಬೆಂಬಿಡದಂತೆ ಕಾಡುತ್ತಲೇ ಬಂದಿದೆ. ಪ್ರಸಕ್ತ ವರ್ಷ ಅಕಾಲಿಕ ಮಳೆ, ನಂತರ ದಟ್ಟವಾದ ಇಬ್ಬನಿ, ಮತ್ತೊಮ್ಮೆ ಅಕಾಲಿಕ ಗಾಳಿ- ಮಳೆ ರೈತರ ನಿರೀಕ್ಷೆಗಳನ್ನು ಹುಸಿ ಮಾಡಿದೆ. ಹಿಂಗಾರು ಫಸಲುಗಳ ಒಕ್ಕಣೆ ಮಾಡುವ ಸಂದರ್ಭದಲ್ಲೇ ಬಂದೆರಗಿದ ಮಳೆ ಮತ್ತು ಬಿರುಸಿನ ಗಾಳಿ ಮಾವು ಬೆಳೆಗಾರರ ನಿರೀಕ್ಷೆಗೆ ಕೊಳ್ಳಿ ಇಟ್ಟಿದೆ.

    ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್​ನಲ್ಲಿ 2 ಬಾರಿ ಅಕಾಲಿಕ ಮಳೆ ಸುರಿದಿತ್ತು. ಇದರಿಂದ ಹಿಂಗಾರು ಬೆಳೆಗಳಾದ ಜೋಳ, ಗೋಧಿ, ಕಡಲೆ, ಹತ್ತಿ, ಗೋವಿನಜೋಳ ಬೆಳೆಗಳಿಗೆ ಹಾನಿಯಾಗಿತ್ತು. ಜಿಲ್ಲೆಯಲ್ಲಿ ಏಪ್ರಿಲ್ 2ನೇ ವಾರದವರೆಗೆ ಹಿಂಗಾರು ಬೆಳೆಗಳ ಒಕ್ಕಣೆ ಸಾಮಾನ್ಯ. ಈ ಸಂದರ್ಭದಲ್ಲಿ ಶುಕ್ರವಾರ ಜಿಲ್ಲೆಯ ವಿವಿಧೆಡೆ ಮತ್ತೆ ವಿಪರೀತ ಗಾಳಿ, ಅಕಾಲಿಕ ಮಳೆ ಸುರಿದಿದೆ. ಪರಿಣಾಮ ಒಕ್ಕಣೆಗೂ ಸಮಸ್ಯೆಯಾಗಿದೆ. ಅಲ್ಲದೆ, ರೈತರು ಜಾನುವಾರುಗಳಿಗೆ ವರ್ಷವಿಡಿ ಆಗುವಷ್ಟು ಮೇವು, ಹೊಟ್ಟಿನ ಬಣವೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಅಕಾಲಿಕ ಮಳೆಯಿಂದಾಗಿ ಜಮೀನಿನಲ್ಲಿದ್ದ ಮೇವು, ಹೊಟ್ಟು ತೋಯ್ದು ಕಪ್ಪು ಬಣ್ಣಕ್ಕೆ ತಿರುಗಿ, ಗುಣಮಟ್ಟ ಕ್ಷೀಣಿಸಿದೆ.

    ರಾಜ್ಯದಲ್ಲಿ ಅತಿ ಹೆಚ್ಚು ಅಲ್ಪೋನ್ಸೊ ಮಾವು ಉತ್ಪಾದಿಸುವ ಜಿಲ್ಲೆ ಧಾರವಾಡ. ಜೊತೆಗೆ ಗುಟ್ಲಿ, ಮಲ್ಲಿಕಾ, ಹುಳಿಮಾವು ಸೇರಿದಂತೆ ವಿವಿಧ ತಳಿಗಳ ಮಾವು ಬೆಳೆಯನ್ನು ಸುಮಾರು 8,450 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ 2019ರಲ್ಲಿ 87,000 ಟನ್, 2020ರಲ್ಲಿ 90,000 ಟನ್ ಮಾವು ಉತ್ಪಾದನೆಯಾಗಿತ್ತು. 2021ರಲ್ಲಿ 1 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆ ಇತ್ತು. ಆದರೆ, ಮಾವು ಬೆಳೆ ಇನ್ನಷ್ಟೇ ಕೈಗೆಟುವ ಕಾಲದಲ್ಲಿ ಬಂದೆರಗಿದ ಇಬ್ಬನಿ, ಗಾಳಿ- ಅಕಾಲಿಕ ಮಳೆಯಿಂದ ಅಲ್ಲಲ್ಲಿ ಹಾನಿಯಾಗಿದೆ. ಡಿಸೆಂಬರ್- ಜನವರಿಯಲ್ಲಿ ಹೂ ಬಿಟ್ಟಿದ್ದ ಮಾವು ಬೆಳೆ ಮುಂದಿನ ದಿನಗಳಲ್ಲಿ ಇಬ್ಬನಿ ಕಾಟ ಎದುರಿಸಿತ್ತು. ಕಾಯಿ ಕಟ್ಟುವ ಹಂತದಲ್ಲಿ ಸಣ್ಣ ಮಿಡಿಗಳು ಉದುರಿಬಿದ್ದಿದ್ದವು. 8-10 ಕಾಯಿ ಕಟ್ಟುತ್ತಿದ್ದ ಮಾವಿನ ಗೊಂಚಲಿನಲ್ಲಿ ಕೇವಲ 2-3 ಕಾಯಿಗಳು ಉಳಿದಿದ್ದವು. ಕಳೆದ ವರ್ಷ ಕರೊನಾದಿಂದ ನರಳಿದ್ದ ಬೆಳೆಗಾರರು ಈ ಬಾರಿಯೂ ಅಂತಾರಾಜ್ಯ ವ್ಯಾಪಾರಸ್ಥರು ಬಾರದೆ ಇಕಟ್ಟಿಗೆ ಸಿಲುಕುವಂತಾಗಿದೆ. ಪ್ರತಿ ಬಾರಿ ಜಿಗಿ ರೋಗ, ಹವಾಮಾನ ವೈಪರೀತ್ಯದಿಂದ ಮಾವು ಬೆಳೆಗಾರ ಪರಿತಪಿಸುವುದು ಮಾತ್ರ ತಪ್ಪುತ್ತಿಲ್ಲ.

    ಅಕಾಲಿಕ ಮಳೆ ಮತ್ತು ಇಬ್ಬನಿಯಿಂದ ಈ ಹಂಗಾಮಿನಲ್ಲಿ ಮಾವು ಬೆಳೆಗಾರರು ಈಗಾಗಲೇ ಒಮ್ಮೆ ಸಂಕಷ್ಟ ಅನುಭವಿಸಿದ್ದಾರೆ. ಹವಾಮಾನ ವೈಪರೀತ್ಯದಿಂದ ಬೇಸಿಗೆಯಲ್ಲಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ಹಾನಿ ಸಾಮಾನ್ಯವಾಗಿದೆ. ಸದ್ಯಕ್ಕೆ ಭಾರಿ ಪ್ರಮಾಣದ ಹಾನಿಯಾಗಿಲ್ಲ. ಫಸಲು ಕೈಗೆಟುವವರೆಗೆ ಮಳೆಯಾಗದಿದ್ದರೆ ಉತ್ತಮ. | ಮಹಾಂತೇಶ ಹಳಿಯಾಳ ದೇವರಹುಬ್ಬಳ್ಳಿ ಮಾವು ಬೆಳೆಗಾರ

    ಮಾವು ಬೆಳೆ ಹೂ ಬಿಡುವ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದ ಸಂಕಷ್ಟ ಎದುರಿಸಿತ್ತು. ಈಗ ಜಿಲ್ಲೆಯ ಅಲ್ಲಲ್ಲಿ ಮಳೆಯಾಗಿದೆ. ಕೇವಲ ಮಳೆಯಾದರೆ ಫಸಲಿಗೆ ಹಾನಿಯಾಗದು. ಆಲಿಕಲ್ಲು ಮಳೆ ಅಥವಾ ರಭಸದ ಗಾಳಿ ಬೀಸಿದರೆ ಕಾಯಿಗಳು ನೆಲಕ್ಕುರುಳುತ್ತವೆ. ಮಳೆ ಹಾನಿಯ ಬಗ್ಗೆ ಪರಿಶೀಲಿಸಲಾಗುವುದು. | ಕಾಶಿನಾಥ ಭದ್ರಣ್ಣವರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts