More

    ಅಕಾಲಿಕ ಮಳೆ ತಂದ ಇಕ್ಕಟ್ಟು

    ಹುಬ್ಬಳ್ಳಿ: ಈ ಬಾರಿ ಮಳೆಗಾಲದಲ್ಲಿ ಸಂಭವನೀಯ ಅಪಾಯ ತಪ್ಪಿಸಲು ಕೆಲ ದಿನಗಳ ಹಿಂದಿನಿಂದ ನಗರದಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಆರಂಭಿಸಲಾಗಿತ್ತು. ಪ್ರಮುಖ ರಸ್ತೆಗಳ ಗಟಾರಗಳ ಸ್ವಚ್ಛತೆ ಸಹ ಮಾಡಲಾಗುತ್ತಿದೆ. ಹೀಗೆ ಮುಂಚಿತವಾಗಿ ಕ್ರಮ ಕೈಗೊಂಡರೂ ಶನಿವಾರ ಸಂಜೆ ಅಬ್ಬರಿಸಿದ ಮಳೆ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿತು.

    ರಭಸದಿಂದ ಸುರಿದ ಮಳೆಯೊಂದಿಗೆ ಬಲವಾಗಿ ಗಾಳಿ ಬೀಸಿದ್ದರಿಂದ ನಗರದಲ್ಲಿ ನೂರಕ್ಕೂ ಹೆಚ್ಚು ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದವು. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದವು. ರಸ್ತೆಯ ಮೇಲೆ ಗಟಾರದ ಹೊಲಸು, ಕಸ ಕಡ್ಡಿ ರಾಶಿ ರಾಶಿಯಾಗಿ ಹರಡಿಕೊಂಡಿದ್ದವು. ಈಗಷ್ಟೇ ಮಳೆಗಾಲದ ಪೂರ್ವ ತಯಾರಿ ಕೆಲಸಗಳನ್ನು ಆರಂಭಿಸಿದ್ದ ಹು-ಧಾ ಮಹಾನಗರ ಪಾಲಿಕೆಗೆ ಅಕಾಲಿಕ ಮಳೆ, ‘ಎಚ್ಚೆತ್ತುಕೊಳ್ಳಿ…’ ಎಂದು ಸೂಚಿಸಿದೆ.

    ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿರುವ ಪಾಲಿಕೆ ರಸ್ತೆ ಬದಿಯ ಗಿಡ ಮರಗಳ ರೆಂಬೆ ಕೊಂಬೆಗಳನ್ನು ಕಡಿಯುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ಮಳೆಗಾಲಕ್ಕೆ ಇನ್ನೂ ಬಹಳ ದಿನವಿದೆಯೆಂಬ ಕಾರಣಕ್ಕೊ, ಕರೊನಾ ಲಾಕ್​ಡೌನ್ ಎಂಬ ಕಾರಣಕ್ಕೊ ವಿಳಂಬವಾಗಿದೆ. ಕೆಲವೆಡೆ ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದು ವಿದ್ಯುತ್ ಕಂಬಗಳು ನೆಲಸಮಗೊಂಡಿವೆ. ನಗರದಲ್ಲಿ ಕೆಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಶನಿವಾರ ರಾತ್ರಿಯಿಂದಲೇ ಹೆಸ್ಕಾಂ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದರು.

    ಧಾರವಾಡದಲ್ಲಿ ಮರದ ರೆಂಬೆ ಕೊಂಬೆಗಳನ್ನು ಕಡಿಯುವ ಕೆಲಸವನ್ನು ಅರಣ್ಯ ಇಲಾಖೆಗೆ, ಪಾಲಿಕೆ ಗುತ್ತಿಗೆ ನೀಡುತ್ತದೆ. ಹುಬ್ಬಳ್ಳಿಯಲ್ಲಿ ಈ ಕೆಲಸವನ್ನು ಪಾಲಿಕೆಯೇ ನಿರ್ವಹಿಸುತ್ತದೆ. ಸಿಬ್ಬಂದಿಯನ್ನು ಕೂಡಿಸಿಕೊಂಡು ಈ ಕೆಲಸ ಮಾಡಬೇಕಿತ್ತು. ಈ ಬಾರಿ ಇಲ್ಲಿಯವರೆಗೂ ಮಾಡಿರಲಿಲ್ಲ. ಹಾಗಾಗಿ ಸಾಕಷ್ಟು ಗಿಡ ಮರಗಳ ರೆಂಬೆ ಕೊಂಬೆಗಳು ಮುರಿದು ರಸ್ತೆ, ಮನೆ, ವಾಹನಗಳ ಮೇಲೆ ಬಿದ್ದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡ ಹಲವಾರು ದೂರುಗಳನ್ನು ಹೆಸ್ಕಾಂ ನಿಭಾಯಿಸಬೇಕಾಯಿತು. ಪಾಲಿಕೆಯವರು ಬಿದ್ದಿರುವ ಮರಗಳನ್ನು ಬೇಗನೆ ತೆರವುಗೊಳಿಸಿ ಕೊಟ್ಟರೆ ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ಕಲ್ಪಿಸಲಾಗುವುದು ಎಂದು ಹೆಸ್ಕಾಂ ತನ್ನ ಗ್ರಾಹಕರಿಗೆ ಉತ್ತರಿಸಿದೆ. ಒಂದೆಡೆ ಭಾನುವಾರದ ರಜೆ, ಇನ್ನೊಂದೆಡೆ ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲಸಗಾರರ ಕೊರತೆಯಿಂದ ಪಾಲಿಕೆಯ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

    ಕಳೆದ ವರ್ಷ ದಾಖಲೆಯ ಮಳೆಗೆ ನಾಲಾ ಉಕ್ಕೇರಿ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಈ ಬಾರಿ ಹಾಗೆ ಆಗದಂತೆ ಪಾಲಿಕೆ ನಾಲಾ ಹೂಳೆತ್ತುವ ಕೆಲಸ ಆರಂಭಿಸಿದೆ. ಟಾಟಾ ಹಿತಾಚಿ ನೆರವಿನೊಂದಿಗೆ 1 ತಿಂಗಳು ಈ ಕೆಲಸ ನಡೆಯಲಿದೆ.

    25 ವಿದ್ಯುತ್ ಕಂಬಗಳು, 2 ಟಿಸಿಗೆ ಹಾನಿ: ಹುಬ್ಬಳ್ಳಿಯಲ್ಲಿ ಶನಿವಾರ ಸಂಜೆ ಅಬ್ಬರದ ಗಾಳಿ-ಮಳೆಗೆ 25 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿದ್ಯಾನಗರ ಶಿರೂರ ಪಾರ್ಕ್ ಹಾಗೂ ಕೇಶ್ವಾಪುರದಲ್ಲಿನ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿವೆ. ಹಾನಿ ಅಂದಾಜು ಮಾಡಿಲ್ಲ. ಸದ್ಯ ವಿದ್ಯುತ್ ಸಂಪರ್ಕ ಪುನರ್ ಕಲ್ಪಿಸಲು ಆದ್ಯತೆ ನೀಡಿದ್ದೇವೆ ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಸಂತ ನಗರದಲ್ಲಿ ಎಂಟು ಕಡೆ ಮರದ ಟೊಂಗೆಗಳು ಮುರಿದುಬಿದ್ದಿದ್ದು, ಶನಿವಾರದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭಾನುವಾರ ಸಂಜೆವರೆಗೂ ದುರಸ್ತಿಯಾಗಿಲ್ಲ. ಹೆಸ್ಕಾಂ ಅಧಿಕಾರಿಗಳು ಬೆಳಗ್ಗೆ ಸ್ಥಳಕ್ಕೆ ಬರುವುದಾಗಿ ಹೇಳಿದ್ದರು. ಸಂಜೆವರೆಗೂ ಬರಲಿಲ್ಲ. ಪುನಃ ಸಂರ್ಪಸಿದಾಗ, ಪಾಲಿಕೆಯವರು ಮರದ ಟೊಂಗೆ ತೆರವುಗೊಳಿಸಿಕೊಟ್ಟರೆ ತಾವು ವಿದ್ಯುತ್ ಸಂಪರ್ಕ ಕೊಡುತ್ತೇವೆ ಎಂದು ಹೇಳಿದರು. ಆದರೆ, ಸಂಜೆ ವೇಳೆಗೆ ಪಾಲಿಕೆಯವರು ಸಂಪರ್ಕಕ್ಕೇ ಸಿಗಲಿಲ್ಲ. ಇದರಿಂದಾಗಿ ನಿರಂತರ ಎರಡು ರಾತ್ರಿ ವಿದ್ಯುತ್ ಇಲ್ಲದೇ ಕಳೆಯುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ರಸ್ತೆ ಬದಿಯ ಮರಗಳ ರೆಂಬೆ ಕೊಂಬೆಗಳನ್ನು ಕಡಿಯುವ ಕಾಮಗಾರಿ ನಿರ್ವಹಿಸುವಂತೆ ಅರಣ್ಯ ಇಲಾಖೆಯನ್ನು ಕೋರಲಾಗಿತ್ತು. ಆದರೆ, ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕಾರ್ವಿುಕರ ಕೊರತೆಯಿಂದ ನಮ್ಮಿಂದ ಮರಗಳ ರೆಂಬೆ ಕೊಂಬೆಗಳನ್ನು ಕಡಿಯುವ ಕೆಲಸ ಮಾಡಲು ಸಾಧ್ಯವಾಗಿಲ್ಲ. | ಡಾ. ಸುರೇಶ ಇಟ್ನಾಳ, ಆಯುಕ್ತರು, ಹುಧಾಮಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts