More

    ಅಂತ್ಯಕ್ರಿಯೆಗೆ ತೆರಳಲು ಸುತ್ತಬೇಕು ಊರು!

    ಗದಗ: ಈ ಊರಲ್ಲಿ ಯಾರಾದರೂ ಮೃತಪಟ್ಟರೆ ಅವರ ಅಂತ್ಯಕ್ರಿಯೆ ಮಾಡುವುದೇ ಒಂದು ದೊಡ್ಡ ಸವಾಲು. ಏಕೆಂದರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಯ ನೀರು ರುದ್ರಭೂಮಿಗೆ ತೆರಳುವ ಮಾರ್ಗದಲ್ಲಿ ರಭಸವಾಗಿ ಹರಿಯುತ್ತಿದ್ದು, ಇದರಿಂದ ಪಾರ್ಥಿವ ಶರೀರವನ್ನು ಹೆಗಲ ಮೇಲೆ ಹೊತ್ತುಕೊಂಡು ರುದ್ರಭೂಮಿಗೆ ತೆರಳುವುದು ದುಸ್ಸಾಹಸವಾಗಿದೆ. ಹೀಗಾಗಿ ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ಬರೋಬ್ಬರಿ ಒಂದೂವರೆ ಕಿಮೀ ದಾರಿ ಕ್ರಮಿಸಿ ಅಂತ್ಯಕ್ರಿಯೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
    ಹೌದು, ಜಿಲ್ಲಾ ಕೇಂದ್ರ ಗದಗದಿಂದ ಕೇವಲ ನಾಲ್ಕು ಕಿಮೀ ಅಂತರದಲ್ಲಿರುವ ತಾಲೂಕಿನ ಸಂಭಾಪೂರ ಗ್ರಾಮದ ಜನರು ಕಳೆದ ಹಲವಾರು ವರ್ಷಗಳಿಂದ ಇಂಥದೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಹುಟ್ಟು ಸಾವು ಸಹಜ ಪ್ರಕ್ರಿಯೆ. ಆದರೆ, ಈ ಊರಲ್ಲಿ ಯಾಕಾದರೂ ಸಾವು ಸಂಭವಿಸುತ್ತದೆ ಎಂದು ಇಲ್ಲಿನ ಜನರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಗದಗ ತಾಲೂಕಿನ ಹಾತಲಗೇರಿ ಗ್ರಾಪಂ ವ್ಯಾಪ್ತಿಯ ಸಂಭಾಪೂರ ಗ್ರಾಮದಲ್ಲಿ ನರಗುಂದ ವಿಧಾನಸಭೆ ಕ್ಷೇತ್ರಕ್ಕೆ ಒಳಪಡುತ್ತದೆ. ಇಲ್ಲಿ ಅಂದಾಜು 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ.
    ಏನಿದು ಸಮಸ್ಯೆ?: ಸಂಭಾಪೂರ ಗ್ರಾಮದ ಹೊಲವಲಯದ ಕೂಗಳತೆಯ ದೂರದಲ್ಲಿ ರುದ್ರಭೂಮಿ ಇದೆ. ಈ ರುದ್ರಭೂಮಿಗೆ ತೆರಳುವ ಮಾರ್ಗದಲ್ಲಿ ಸಿಂಗಟಾಲೂರು ಏತ ನೀರಾವರಿಯ ಕಾಲುವೆಯ ನೀರು ಬಳಸಿಕೊಂಡು ಸ್ಥಳೀಯ ರೈತರು ನೀರಾವರಿ ಮಾಡಿಕೊಂಡಿದ್ದಾರೆ. ಈ ಕಾಲುವೆಯ ನೀರು ಹರಿದು ನೀರು ಹಳ್ಳ ಸೇರುತ್ತದೆ. ಈ ನೀರಿನಿಂದ ಸುಮಾರು 200-300 ಎಕರೆ ಪ್ರದೇಶ ನೀರಾವರಿಯಾಗಿದೆ. ಈ ಕಾಲುವೆ ನೀರು ಬಳಕೆಗೆ ಸಂಬಂಧಿಸಿದ ಇಲಾಖೆಯ ಅನುಮತಿ ಇರುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇದರಿಂದ ರೈತರಿಗೆ ಕೊಂಚ ಅನುಕೂಲವಂತೂ ಆಗಿದೆ. ಆದರೆ, ರುದ್ರಭೂಮಿಗೆ ತೆರಳುವ ಮಾರ್ಗ ಮಧ್ಯದಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಇದರಿಂದ ನೇರವಾಗಿ ರುದ್ರಭೂಮಿಗೆ ತೆರಳಿ ಮೃತರ ಅಂತ್ಯಕ್ರಿಯೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾರ್ಗದಲ್ಲಿ ಹರಿಯುತ್ತಿರುವ ನೀರು ದಾಟುವುದು ಕಷ್ಟವಾಗಿದ್ದರಿಂದ ಒಂದೂವರೆ ಕಿಮೀ ಸುತ್ತು ಹಾಕಿ ರುದ್ರಭೂಮಿಗೆ ತೆರಳಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ ಎಂದು ಗ್ರಾಮದ ರೈತ ರಾಮನಗೌಡ ತಮ್ಮನಗೌಡ ವಿವರಿಸುತ್ತಾರೆ.

    ಕಳೆದ ಹಲವಾರು ವರ್ಷಗಳಿಂದ ರುದ್ರಭೂಮಿಗೆ ತೆರಳುವ ದಾರಿಯಲ್ಲಿ ಹಳ್ಳ ಹರಿಯುತ್ತದೆ. ಗ್ರಾಮದಲ್ಲಿ ಸಾವು ಸಂಭವಿಸಿದರೆ ಅಂತ್ಯಕ್ರಿಯೆ ಮಾಡಲು ಹರಸಾಹಸ ಪಡಬೇಕಾಗಿದೆ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಪರಿಶೀಲಿಸಿ ಪರಿಹರಿಸಬೇಕು.
    | ರಾಮನಗೌಡ ತಮ್ಮನಗೌಡ್ರ, ಸಂಭಾಪೂರ ಗ್ರಾಮಸ್ಥ

    ಗದಗ ತಾಲೂಕಿನ ಸಂಭಾಪೂರದ ರುದ್ರಭೂಮಿ ದಾರಿಯಲ್ಲಿ ಉಂಟಾಗಿರುವ ಸಮಸ್ಯೆ ಕುರಿತು ಪರಿಶೀಲಿಸಿ, ವಾಸ್ತವಾಂಶ ತಿಳಿದುಕೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    | ಕಿಶನ್ ಕಲಾಲ, ತಹಸೀಲ್ದಾರ್ ಗದಗ

    ಕಾಲುವೆ ಕಾಮಗಾರಿ ಅಪೂರ್ಣಗೊಂಡಿದ್ದು ಹೀಗಾಗಿ ಈ ನೀರನ್ನು ಹಳ್ಳಕ್ಕೆ ತಿರುಗಿಸಿಕೊಳ್ಳಲಾಗಿದೆ. ಹೀಗಾಗಿ ಕಾಲುವೆ ನೀರು ಬಿಟ್ಟಾಗ ರುದ್ರಭೂಮಿಗೆ ತೆರಳುವ ದಾರಿ ಬಹುತೇಕ ಬಂದ್ ಆಗುತ್ತದೆ. ಈ ಸಮಸ್ಯೆ ಬಗೆಹರಿಸಲು ಎನ್​ಆರ್​ಇಜಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ನೀರು ಸರಾಗವಾಗ ಹರಿಯಲು ಪೈಪ್ ಅಳವಡಿಸಲು ಚಿಂತಿಸಲಾಗುತ್ತಿದೆ.
    | ರಾಯಪ್ಪ ಬಂಡಿ, ಸದಸ್ಯ, ಹಾತಲಗೇರಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts