More

    ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಜ. 20 ರಿಂದ

    ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದ ಕ್ಷಮತಾ ಸಂಸ್ಥೆಯ ಆಶ್ರಯದಲ್ಲಿ ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ-2020ನ್ನು ಇಲ್ಲಿನ ಕುಸುಗಲ್ ರಸ್ತೆ ಆಕ್ಸ್​ಫರ್ಡ್ ಕಾಲೇಜು ಪಕ್ಕದ ಮೈದಾನದಲ್ಲಿ ಜ. 20 ಹಾಗೂ 21ರಂದು ಆಯೋಜಿಸಲಾಗಿದೆ.

    ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಸಂಸ್ಥೆಯ ಟ್ರಸ್ಟಿ ಗೋವಿಂದ ಜೋಶಿ, ಎರಡೂ ದಿನ ಬೆಳಗ್ಗೆ 10 ರಿಂದ ರಾತ್ರಿ 8.30ರವರೆಗೆ ಗಾಳಿಪಟ ಉತ್ಸವ ನಡೆಯಲಿದೆ ಎಂದರು.

    ಜ. 20ರಂದು ಬೆಳಗ್ಗೆ 10.30ಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ಸವ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.

    ಒಟ್ಟು 26 ದೇಶಗಳ 32 ಜನ ಹಾಗೂ ಭಾರತದ 18 ಜನ ಸೇರಿದಂತೆ 50 ಜನ ಗಾಳಿಪಟ ಹಾರಿಸುವ ಪ್ರತಿಭಾವಂತರು ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

    ಮೊದಲ ದಿನದ ಸಂಜೆ ಚಲನಚಿತ್ರ ಹಿನ್ನೆಲೆ ಗಾಯಕರಾದ ವಿಜಯ ಪ್ರಕಾಶ ಹಾಗೂ ಅರ್ಚನಾ ಉಡುಪ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಅಂತಾರಾಷ್ಟ್ರೀಯ ಚಿತ್ರಕಲಾವಿದ ವಿಲಾಸ ನಾಯಕ ಅವರಿಂದ ಸ್ಥಳದಲ್ಲಿಯೇ ಸ್ಪೀಡ್ ಪೇಂಟಿಂಗ್ ಚಿತ್ರ ಬಿಡಿಸುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. 2ನೇ ದಿನ ಹಾಸ್ಯಕಲಾವಿದ ಗಂಗಾವತಿ ಪ್ರಾಣೇಶ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.

    ಡ್ರ್ಯಾಗನ್ ಪತಂಗ ಈ ಬಾರಿಯ ಗಾಳಿಪಟ ಉತ್ಸವದ ವಿಶೇಷ. ಭೂಮಿ ಮೇಲೆ 15 ಕೆಜಿ ಭಾರ ಇರುವ ಈ ಪತಂಗ, ಆಕಾಶದಲ್ಲಿ 150 ಕೆಜಿ ಭಾರವಾಗಿ ಬದಲಾಗುತ್ತದೆ. 2 ದಿನಗಳ ಈ ಉತ್ಸವಕ್ಕೆ ಸುಮಾರು 2.5 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ. ಉತ್ಸವ ವೀಕ್ಷಣೆಗಾಗಿ ಕೋರ್ಟ್ ವೃತ್ತದಿಂದ ವಿಶೇಷ ಬಸ್ ಸೌಕರ್ಯ ಮಾಡಲಾಗಿದೆ ಎಂದರು.

    ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಗಾಳಿಪಟ ಉತ್ಸವ ವೀಕ್ಷಣೆಗೆ ಆಹ್ವಾನಿಸಲಾಗಿದೆ. ಅವರಿಗೆ ಸುಮಾರು 10 ಸಾವಿರ ಗಾಳಿಪಟಗಳನ್ನು ಉಚಿತವಾಗಿ ನೀಡಲಾಗುವುದು. ಆದರೆ ಈ ಬಾರಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಈ ಮೈದಾನದಲ್ಲಿ ಗಾಳಿಪಟ ಹಾರಿಸಲು ಅವಕಾಶ ನೀಡಿಲ್ಲ ಎಂದು ಹೇಳಿದರು.

    ಮಾಜಿ ಮೇಯರ್ ಸುಧೀರ ಸರಾಫ, ಪ್ರಮುಖರಾದ ತಿಪ್ಪಣ್ಣ ಮಜ್ಜಗಿ, ರಾಘವೇಂದ್ರ ರಾಮದುರ್ಗ, ಸಂತೋಷ ಚವ್ಹಾಣ, ನಾಗೇಶ ಕಲಬುರ್ಗಿ, ಮಹೇಂದ್ರ ಕೌತಾಳ, ಉಮೇಶ ದುಶಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts