More

    ಅಂತಾರಾಜ್ಯ ಗಾಂಜಾ ದಂಧೆಕೋರರ ಸೆರೆ, ಒಡಿಶಾ ಟು ಆಂಧ್ರಪ್ರದೇಶ ಟು ತ್ಯಾಮಗೊಂಡ್ಲು ಸಾಗಾಟ, ಲಾರಿ ಚಾಲಕರಿಗೆ ಮಾರುತ್ತಿದ್ದ ಬಂಧಿತರು

    ತ್ಯಾಮಗೊಂಡ್ಲು: ಒಡಿಶಾ ಗಡಿಯಲ್ಲಿ ಬೆಳೆದಿರುವ ಗಾಂಜಾವನ್ನು ಆಂಧ್ರಪ್ರದೇಶದ ಮೂಲಕ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವರೆಗೆ ತಂದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಹಾಗೂ ತ್ಯಾಮಗೊಂಡ್ಲು ಠಾಣೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವ ಜತೆಗೆ 53 ಕೆಜಿ ಗಾಂಜಾ, ಮಾರುತಿ 800 ಕಾರು, ಮೊಬೈಲ್ ೆನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    ತ್ಯಾಮಗೊಂಡ್ಲು ಹೋಬಳಿಯ ಕುಲವನಹಳ್ಳಿ ಮೂಲದ ಉಮೇಶ್ (40) ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯ ವಿಶಾಖಪಟ್ಟಣಂನ ರಾಮ್‌ಪ್ರಸಾದ್ (39) ಬಂಧಿತರು. ರಾಯಚೂರು ಮೂಲದ ಸಲೀಂ ಪಾಷಾ ಎಂಬಾತ ತಪ್ಪಿಸಿಕೊಂಡಿದ್ದಾನೆ. ರಾಮ್‌ಪ್ರಸಾದ್ ಒಡಿಶಾದ ಗಡಿಯಿಂದ ಗಾಂಜಾ ಪಡೆದು, ಆಂಧ್ರಪ್ರದೇಶದ ಮೂಲಕ ತ್ಯಾಮಗೊಂಡ್ಲುವರೆಗೆ ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಹೆಚ್ಚಾಗಿತ್ತು ಗಾಂಜಾ ಘಾಟು: ಇತ್ತೀಚೆಗೆ ನೆಲಮಂಗಲ ತಾಲೂಕಿನಾದ್ಯಂತ ಗಾಂಜಾ ಮಾರಾಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ನೆಲಮಂಗಲ ಸಿಪಿಐ ರಾಜೀವ್ ನೇತೃತ್ವದಲ್ಲಿ ನೆಲಮಂಗಲ ಗ್ರಾಮಾಂತರ ಹಾಗೂ ತ್ಯಾಮಗೊಂಡ್ಲು ಠಾಣೆ ಸಿಬ್ಬಂದಿ ತಂಡ ಜಂಟಿ ಕಾರ್ಯಾಚರಣೆಗೆ ಮುಂದಾಗಿತ್ತು. ಕಳಲುಘಟ್ಟ ಗ್ರಾಮದ ಗೋಡೌನ್‌ಗಳಿಗೆ ಸರಕು ತರುತ್ತಿದ್ದ ಲಾರಿ ಚಾಲಕರಿಗೆ ಕುಲುವನಹಳ್ಳಿಯ ಉಮೇಶ್ ಗಾಂಜಾ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ತಂಡ ಆತನನ್ನು ಬಂಧಿಸಲು ಮುಂದಾಗಿತ್ತು.

    ಕಾರಿನಲ್ಲಿ 53 ಕೆಜಿ ಗಾಂಜಾ: ಹರಿವೆಸಂದ್ರ ಗ್ರಾಮದ ಬಳಿಯ ಡಿಬಿ ಶಂಕರ್ ಗೋಡೌನ್ ಬಳಿಯ ಲಾರಿ ನಿಲುಗಡೆ ತಾಣದಲ್ಲಿ ಉಮೇಶ್ ಮಂಗಳವಾರ ಬೆಳಗ್ಗೆ ಗಾಂಜಾ ಮಾರಾಟ ಮಾಡುತ್ತಿದ್ದುದನ್ನು ಪೊಲೀಸ್ ತಂಡ ಗಮನಿಸಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹತ್ತಿರದಲ್ಲೇ ನಿಲ್ಲಿಸಿದ್ದ ಮಾರುತಿ 800 ವಾಹನದತ್ತ ಕೈತೋರಿದ್ದ. ವಾಹನ ಪರಿಶೀಲಿಸಿದಾಗ ರಾಮ್‌ಪ್ರಸಾದ್ ಸಿಕ್ಕಿಬಿದ್ದರೆ, ವಾಹನದಲ್ಲಿದ್ದ ಮತ್ತೊಬ್ಬ ತಪ್ಪಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ನೂರಾರು ಎಕರೆ ಬೆಳೆ ಕಂಡು ದಂಗಾದ ಪೊಲೀಸರು: ಬಂಧಿತ ರಾಮ್‌ಪ್ರಸಾದ್ ವಾಸವಾಗಿರುವ ವಿಶಾಖಪಟ್ಟಣಂ ಬಳಿಯ ಕೊಟ್ಟಾತೊಟ್ಟಿ ಗ್ರಾಮ ಬಹುತೇಕ ಒಡಿಶಾ ಗಡಿಗೆ ಅಂಟಿಕೊಂಡಿದೆ. ಇದು ನಕ್ಸಲ್ ಪೀಡಿತ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ೆನ್ ಮಾಡಬೇಕಾದರೆ, ಬೆಟ್ಟದ ಎತ್ತರವಾದ ಪ್ರದೇಶಕ್ಕೆ ಹೋಗಬೇಕಾಗುತ್ತದೆ. ಇಂಥ ಪ್ರದೇಶದಲ್ಲಿ ನೂರಾರು ಎಕರೆ ಪ್ರದೇಶದಲ್ಲಿರುವ ಗಾಂಜಾ ತೋಟವನ್ನು ಕಂಡು ಪೊಲೀಸ್ ತಂಡವೇ ದಂಗಾಗಿದೆ.

    ಸ್ಥಳದಲ್ಲೇ ಹದ ಮಾಡಿ, ಪ್ಯಾಕಿಂಗ್: ತೋಟದಲ್ಲಿರುವ ಗಾಂಜಾ ಸೊಪ್ಪನ್ನು ಸ್ಥಳದಲ್ಲೇ ಒಣಗಿಸುತ್ತಿದ್ದ ಆರೋಪಿಗಳು, ಅದನ್ನು ಹದ ಮಾಡಿ, ಗ್ರಾಂ ಲೆಕ್ಕದಲ್ಲಿ ಪ್ಯಾಕಿಂಗ್ ಮಾಡಿ ರವಾನಿಸುತ್ತಿದ್ದರು. ಈ ದಂಧೆ ಹಲವು ವರ್ಷಗಳಿಂದ ನಡೆಯುತ್ತಿತ್ತು. ಆದರೆ, ಇದು ನಕ್ಸಲ್ ಪೀಡಿತ ಪ್ರದೇಶ ಎಂಬ ಕಾರಣಕ್ಕಾಗಿ ಸ್ಥಳೀಯ ಪೊಲೀಸರೂ ಈ ಪ್ರದೇಶಕ್ಕೆ ಹೋಗಲು ಹೆದರುತ್ತಿದ್ದರು. ಇದರಿಂದಾಗಿ ಇದು ಯಾರ ಗಮನಕ್ಕೂ ಬಂದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಗಾಂಜಾವೇ ಆದಾಯ ಮೂಲ: ಕೊಟ್ಟಾತೊಟ್ಟಿ ಗ್ರಾಮದಲ್ಲಿ ಬಹುತೇಕ ಎಲ್ಲ ಜನರು ಗಾಂಜಾ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಇದುವೇ ಅವರಿಗೆ ಆದಾಯ ಮೂಲವಾಗಿದೆ. ಬೇಗೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ರಾಯಚೂರು ಮೂಲದ ಸಲೀಂ ಪಾಷಾ ತ್ಯಾಮಗೊಂಡ್ಲು ಭಾಗದಲ್ಲಿ ಗಾಂಜಾ ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ ಎನ್ನಲಾಗಿದೆ. ಈತನಲ್ಲದೆ, ಇನ್ನೂ ಹಲವರು ದಂಧೆಯಲ್ಲಿ ತೊಡಗಿರುವ ಮಾಹಿತಿ ಇದೆ. ಅವರೆಲ್ಲರ ಬಂಧನಕ್ಕೆ ಬಲೆ ಬೀಸಲಾಗಿದೆ.

    4 ವರ್ಷಗಳಿಂದ ಕೃತ್ಯ: ಉಮೇಶ್ ಮತ್ತು ರಾಮ್‌ಪ್ರಸಾದ್ 4 ವರ್ಷಗಳಿಂದ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಕಾಲೇಜು ವಿದ್ಯಾರ್ಥಿಗಳು ಮತ್ತು ಲಾರಿ ಚಾಲಕರಿಗೆ ಗಾಂಜಾ ಮಾರುತ್ತಿದ್ದರು. ಆಂಧ್ರಪ್ರದೇಶದಿಂದ ಸರಕು ಸಾಗಿಸುತ್ತಿದ್ದ ಲಾರಿಗಳಲ್ಲಿ ಬರುತ್ತಿದ್ದ ಗಾಂಜಾವನ್ನು ಕುಲುವನಹಳ್ಳಿಯ ತನ್ನ ಮನೆಯಲ್ಲಿ ಉಮೇಶ್ ದಾಸ್ತಾನು ಮಾಡಿಕೊಂಡು, ಕಾರಿನಲ್ಲಿ ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಅತ್ಯಂತ ಕ್ಲಿಷ್ಟಕರ ಕಾರ್ಯಾಚರಣೆ ನಡೆಸಿದ ಎರಡೂ ಪೊಲೀಸರ ತಂಡದ ನೇತೃತ್ವ ವಹಿಸಿದ್ದ ಸಿಪಿಐ ರಾಜೀವ್, ತ್ಯಾಮಗೊಂಡ್ಲು ಪಿಎಸ್‌ಐ ಡಿ. ಚಿಕ್ಕನರಸಿಂಹಯ್ಯ, ಸಿಬ್ಬಂದಿ ನಾರಾಯಣರಾವ್, ಶಂಕರಲಿಂಗ, ರಂಗನಾಥ್, ರಘು, ಅಕ್ಷಯ್ ಕುಮಾರ್, ಬೈರೇಶ್, ಮಂಜು ಅವರನ್ನು ಎಸ್‌ಪಿ ಡಾ. ವಂಶಿಕೃಷ್ಣ ಪ್ರಶಂಸಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts