More

    ಅಂತರ ಕಡಿಮೆಯಾದರೆ ಅವಾಂತರ!

    ಗದಗ: ಮಹಾಮಾರಿ ಕರೊನಾ ಸೋಂಕಿಗೆ ತುತ್ತಾಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರೂ ಜಿಲ್ಲೆಯ ಜನರಿಗೆ ಇದರ ಬಗ್ಗೆ ಭಯವೇ ಇಲ್ಲದಂತಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ ಪ್ರಮಾಣ ಕಡಿಮೆ ಆಗಿದ್ದರಿಂದ ಜನರು ನಿರ್ಭಯದಿಂದ ಓಡಾಡುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡರೂ ಪ್ರಯೋಜನವಾಗಿಲ್ಲ. ಜನರಿಗೆ ತಿಳಿವಳಿಕೆಯೇ ಬರುತ್ತಿಲ್ಲ, ಮಹಾಮಾರಿಯ ಗಂಭೀರತೆಯೂ ಅರ್ಥವಾಗುತ್ತಿಲ್ಲ. ಮಾಸ್ಕ್ ಧರಿಸಲೂ ಸೋಮಾರಿತನ ತೋರುತ್ತಿರುವುದರಿಂದ ಸೋಂಕು ತಡೆಯಲು ಸಾಧ್ಯವಾಗುತ್ತಿಲ್ಲ.

    ಮುಖಕ್ಕೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿದರೆ ಸೋಂಕು ನಿಯಂತ್ರಿಸಬಹುದು ಎಂದು ಸರ್ಕಾರ ಹೇಳುತ್ತಲೇ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ ವಸೂಲಿ ಮಾಡಲು ಮುಂದಾದರೂ ಜನರು ಕ್ಯಾರೆ ಎನ್ನುತ್ತಿಲ್ಲ. ಜಿಲ್ಲೆಯಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಸೂಲಿ ಮಾಡುವ ಪ್ರಯೋಗವೂ ಸಮರ್ಪಕವಾಗಿ ಜಾರಿಯಾಗಿಲ್ಲ. ಹೀಗಾಗಿ ಅನೇಕರು ಮಾಸ್ಕ್ ಧರಿಸದೆ ಸಂಚರಿಸುವುದು ಸಾಮಾನ್ಯವಾಗಿದೆ. ಅವಳಿನಗರ ಸೇರಿದಂತೆ ಜಿಲ್ಲೆಯ ಅನೇಕ ಸರ್ಕಾರಿ ಕಚೇರಿಗಳ ಸಿಬ್ಬಂದಿ ಮಾಸ್ಕ್ ಧರಿಸದೆ ಕೆಲಸ ಮಾಡುತ್ತಿದ್ದಾರೆ. ಮಾರ್ಕೆಟ್, ಸಂತೆ, ಮಾಲ್​ಗಳು, ಎಪಿಎಂಸಿ ಸೇರಿ ಇತರೆ ಜನಸಂದಣಿ ಇರುವಂತಹ ಸ್ಥಳಗಳಲ್ಲಿ ಜನರು ಮಾಸ್ಕ್ ಮರೆತು ತಿರುಗಾಡುತ್ತಿದ್ದಾರೆ. ಹೀಗಾಗಿ ಜನರಲ್ಲಿ ಜಾಗೃತಿ ಕೊರತೆಯಿಂದ ಅವರಿಗೆ ಭಯ ಇಲ್ಲದಂತಾಗಿದೆ.

    ಇತ್ತೀಚೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕ್ಷೀಣಿಸತೊಡಗಿದ್ದು ಜತೆಗೆ ಸೋಂಕಿನಿಂದ ಗುಣವಾದವರ ಸಂಖ್ಯೆಯೂ ಹೆಚ್ಚಿದ್ದು ಕೊಂಚ ಸಮಾಧಾನ ತಂದಿದೆ. ಏಪ್ರಿಲ್, ಮೇ, ಜೂನ್, ಜುಲೈವರೆಗೂ ನಿತ್ಯ 20-30ರಷ್ಟಿದ್ದ ಸೋಂಕಿನ ಪ್ರಮಾಣ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ನಿತ್ಯ 100ರ ಗಡಿ ದಾಟತೊಡಗಿತ್ತು. ಆದರೆ, ಈಗ ಈ ಸಂಖ್ಯೆ 50 ಕ್ಕಿಂತ ಕಡಿಮೆ ಇದೆ.

    ಪ್ರಸ್ತುತ ಜಿಲ್ಲೆಯಲ್ಲಿ 365 ಜನರು ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 10319 ಜನರಿಗೆ ಸೋಂಕು ದೃಢಪಟ್ಟಿದ್ದು, 9814 ಜನರು ಗುಣವಾಗಿದ್ದಾರೆ. 452 ಜನರ ವರದಿ ಬರಬೇಕಿದ್ದು, 140 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 89853 ಜನರನ್ನು ನಿಗಾದರಲ್ಲಿ ಇರಿಸಲಾಗಿತ್ತು. 92007 ಜನರು ಸೋಂಕಿನ ಪರೀಕ್ಷೆಗೆ ಒಳಗಾಗಿದ್ದಾರೆ. 81236 ಜನರ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಕಳೆದ 20 ದಿನಗಳಿಂದ ಹೊಸ ಪಾಸಿಟಿವ್ ಕೇಸ್​ಗಳ ಸಂಖ್ಯೆ 30-40 ರಷ್ಟು ಇರುವುದು ಸಮಾಧಾನಕರ ಸಂಗತಿಯಾಗಿದೆ. ಜನರಲ್ಲಿ ಈ ಕುರಿತು ಹೆಚ್ಚಿನ ಜಾಗೃತಿ ಮೂಡಬೇಕಿದೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವ ಮೂಲಕ ಪಾಸಿಟಿವ್ ಪ್ರಕರಣಗಳನ್ನು ಇನ್ನಷ್ಟು ಕಡಿಮೆ ಮಾಡಬಹುದು.

    |ಡಾ. ಸತೀಶ ಬಸರೀಗಿಡದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts