More

    ಅಂತರ್ಜಲ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ


    ಯಾದಗಿರಿ: ಅಂತರ್ಜಲವು ಅತ್ಯಂತ ಅಮೂಲ್ಯವಾಗಿದ್ದು ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ಅಕಾರಿಗಳಿಗೆ ನಿರ್ದೇಶನ ನೀಡಿದರು.

    ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಜಿಲ್ಲಾ ಮಟ್ಟದ ಅಂತರ್ಜಲ ಸಮಿತಿ ಸಭೆಯಲ್ಲಿ ಮಾತನಾಡಿ, ಜೀವಜಲದ ಮರುಪೂರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಂತರ್ಜಲ ರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕು. ಚಿಕ್ಕ ಮಕ್ಕಳು ಓಡಾಡುವ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತೆರೆದ , ನಿರುಪಯುಕ್ತ ಕೊಳವೆ ಬಾವಿಗಳು ಕಂಡುಬಂದರೆ ತಕ್ಷಣವೇ ಅದನ್ನು ಮುಚ್ಚಿ ಮುಂದಾಗುವ ಅನಾಹುತ ತಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

    ಕೊಳವೆಬಾವಿ ವಿಫಲವಾದಲ್ಲಿ ಚಿಕ್ಕಮಕ್ಕಳು ಬೀಳದಂತೆ ಅದನ್ನು ಕಲ್ಲುಗಳಿಂದ ಸುರಕ್ಷಿತವಾಗಿ ಮುಚ್ಚಬೇಕು. ತಪ್ಪಿದಲ್ಲಿ ಜಮೀನು, ನಿವೇಶನದ ಮಾಲೀಕರು ಅಥವಾ ಸಂಬಂಸಿದವರ ಏಜೆನ್ಸಿಯವರನ್ನೇ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಂತರ್ಜಲ ಮೌಲೀಕರಣ 2020ರ ಪ್ರಕಾರ ಜಿಲ್ಲೆಯ ಸುರಪುರ, ಹುಣಸಗಿ, ಶಹಾಪುರ ಮತ್ತು ವಡಿಗೇರಾ ತಾಲೂಕು ಸುರಕ್ಷಿತವಾಗಿವೆ ಎಂದರು.

    ಯಾದಗಿರಿ ಮತ್ತು ಗುರುಮಿಠಕಲ್ ತಾಲೂಕುಗಳು ಅರೆಕ್ಲಿಷ್ಟಕರ ವರ್ಗದಲ್ಲಿ ಬರುತ್ತವೆ. ಈ ತಾಲೂಕುಗಳಲ್ಲಿ ಅಂತರ್ಜಲವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದೆ. ಜಿಲ್ಲೆಯಲ್ಲಿ 53 ಅಧ್ಯಯನ ಬಾವಿಗಳು ಇದ್ದು, ಅವುಗಳಲ್ಲಿ 21 ಕೊಳವೆಬಾವಿ ಮತ್ತು 32 ತೋಡುಬಾವಿಗಳಿವೆ. ಪ್ರತಿತಿಂಗಳು ಅಂತರ್ಜಲ ಮಟ್ಟವನ್ನು ಅಳತೆ ಮಾಡಲಾಗುತ್ತಿದೆ. 2021 ಮತ್ತು 2022 ಆಗಸ್ಟ್ವರೆಗೆ ಅಂತರ್ಜಲ ಮಟ್ಟ ಏರಿಕೆ ಕಂಡಿದೆ ಎಂದು ಅಕಾರಿಗಳು ಸಭೆಗೆ ಮಾಹಿತಿ ನೀಡಿದರು.

    ಸಾರ್ವಜನಿಕರರಲ್ಲಿ ಅಂತರ್ಜಲ ಸಂರಕ್ಷಣೆ ಮತ್ತು ನಿರ್ವಹಣೆಗೆ ಜನಜಾಗೃತಿ ಶಿಬಿರಗಳನ್ನು ಆಯೋಜಿಸಿ ಜನರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು. ಕೈಗಾರಿಕೆ, ವಾಣಿಜ್ಯ, ಮನೊರಂಜನೆಗಾಗಿ ಮತ್ತು ಮೂಲಭೂತ ಅಭಿವೃದ್ಧಿಗಾಗಿ ಬಳಸಲು ಜಿಲ್ಲಾ ಅಂತರ್ಜಲ ಕಚೇರಿಯಿಂದ ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ಡಿಸಿ ಸ್ನೇಹಲ್ ತಿಳಿಸಿದರು.

    ಜಿಪಂ ಸಿಇಒ ಅಮರೇಶ ಆರ್. ನಾಯ್ಕ್, ಜಿಲ್ಲಾ ಅಂತರ್ಜಲ ವಿಭಾಗದ ಹಿರಿಯ ಭೂವಿಜ್ಞಾನಿ ಕೃಷ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts