More

    ಅಂಚೆ ಕಚೇರಿಗೆ ಮಹಿಳೆಯರ ಸಾರಥ್ಯ

    ಕಲಬುರಗಿ: ಜಗತ್ ವೃತ್ತದ ಅಂಚೆ ಕಚೇರಿ ಇನ್ಮುಂದೆ ಮಹಿಳಾ ಸಿಬ್ಬಂದಿ ಹೊಂದಿದ ಕಚೇರಿಯಾಗಲಿದೆ. ವಿಶ್ವ ಮಹಿಳಾ ದಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕಚೇರಿಯಲ್ಲಿರುವ ಎಲ್ಲ ಹುದ್ದೆಗಳನ್ನು ಮಹಿಳೆಯರಿಗೆ ನೀಡುವ ಮೂಲಕ ವಿಶೇಷ ಗೌರವ ಸಲ್ಲಿಸಿ ಆತ್ಮಸ್ಥೈರ್ಯ ತುಂಬಲಾಗಿದೆ.
    ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಹಿಳೆಯರ ನೇತೃತ್ವದಲ್ಲೇ ಕಚೇರಿಯನ್ನು ಉದ್ಘಾಟಿಸಲಾಯಿತು. ಈ ವೇಳೆ ಮಾತನಾಡಿದ ಸ್ಥಾನಿಕ ಸಹಾಯಕ ಅಂಚೆ ಅಧೀಕ್ಷಕ ಸಿ.ಜಿ.ಕಾಂಬ್ಳೆ, ಜಗತ್ ಅಂಚೆ ಕಚೇರಿಯಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿ ಇರಲಿದ್ದಾರೆ. ಇಲ್ಲಿದ್ದ ಪುರುಷ ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸಲಾಗಿದೆ. ಪ್ರಸ್ತುತ ಮಹಿಳೆಯರು ಎಲ್ಲ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಈ ಕಚೇರಿಯನ್ನು ಸಹ ಅವರ ಹಿಡಿತಕ್ಕೆ ನೀಡಲಾಗಿದೆ ಎಂದರು.
    ಸಹಾಯಕ ಅಂಚೆ ಅಧೀಕ್ಷಕ ವಿ.ಎಲ್. ಚಿತ್ಕೊಟೆ ಮಾತನಾಡಿ, ಪ್ರಸ್ತುತ ಎಲ್ಲೆಡೆ ಮಹಿಳೆಯರು ಮೇಲುಗೈ ಸಾಧಿಸುತ್ತಿದ್ದಾರೆ. ಸರ್ಕಾರಗಳು ಮಹಿಳೆಯರಿಗೆ ಹಲವು ಅವಕಾಶಗಳನ್ನು ನೀಡುತ್ತಿದೆ. ಅವರ ಪ್ರತಿಭೆ, ಸಾಮಥ್ರ್ಯವನ್ನು ಹಲವು ಬಾರಿ ಸಾಬೀತುಪಡಿಸಿದ್ದಾರೆ. ಬಾಹ್ಯಾಕಾಶದಿಂದ ಹಿಡಿದು ಅಡುಗೆ ಮನೆಯವರೆಗೆ ಸ್ತ್ರೀಯರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
    ಪ್ರಧಾನ ಅಂಚೆ ಕಚೇರಿ ಸಿಬ್ಬಂದಿ ರಮಾ ಭಟ್ ಮಾತನಾಡಿ, ಪುರುಷರ ಸಹಾಯ, ಸಹಕಾರದೊಂದಿಗೆ ಹೆಣ್ಣುಮಕ್ಕಳು ಕಾರ್ಯನಿರ್ವಹಿಸುತ್ತಾರೆ. ಮಹಿಳೆಯಲ್ಲಿ ಎಷ್ಟೇ ಸಾಮಥ್ರ್ಯ ಇದ್ದರೂ ಪುರುಷರ ಸಹಕಾರ ಬೇಕೇಬೇಕು. ಎಲ್ಲರ ಸಹಕಾರದೊಂದಿಗೆ ನೂತನ ಮಹಿಳಾ ಅಂಚೆ ಕಚೇರಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.
    ಸಿಬ್ಬಂದಿ ಈಶ್ವರಪ್ಪ, ರಾಘವೇಂದ್ರ ರೆಡ್ಡಿ, ಚಂದ್ರಕಾಂತ, ನೀಲಮ್ಮ ಪಾಟೀಲ್, ನಾಗಮ್ಮ, ಅಶ್ವಿನಿ, ಗುರುಬಾಯಿ, ಕವಿತಾ, ಚಂದ್ರಕಲಾ ಇತರರಿದ್ದರು. ಈ ಕಚೇರಿಯಲ್ಲಿ ಸಬ್ ಪೋಸ್ಟ್ ಮಾಸ್ಟರ್ ಒಂದು, ಇಬ್ಬರು ಪೋಸ್ಟಲ್ ಅಸಿಸ್ಟೆಂಟ್, ಇಬ್ಬರು ಗ್ರಾಮೀಣ ಡಾಕ್ ಪ್ಯಾಕೇಜರ್ ಹುದ್ದೆಗಳಲ್ಲಿ ಮಹಿಳೆಯರೇ ಇರುವುದು ವಿಶೇಷ.

    ಅತಿ ಹೆಚ್ಚು ಗ್ರಾಹಕರಿರುವ ಕೇಂದ್ರ
    ಜಗತ್ ಅಂಚೆ ಕಚೇರಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಕೇಂದ್ರ. ಅಂತಲೇ ಈ ಕೇಂದ್ರವನ್ನು ಆಯ್ಕೆ ಮಾಡಿ ಸಹನೆ, ತಾಳ್ಮೆ ಶಕ್ತಿ ಹೊಂದಿರುವ ಮಹಿಳೆಯರನ್ನು ನೇಮಿಸಲಾಗಿದೆ. ಈ ಕಚೇರಿಯಲ್ಲಿದ್ದ ಮೂವರು ಪುರುಷ ಸಿಬ್ಬಂದಿಯನ್ನು ವರ್ಗಾಯಿಸಿ ಅವರ ಸ್ಥಾನಕ್ಕೆ ಮಹಿಳೆಯರನ್ನು ನೇಮಿಸಲಾಗಿದೆ ಎಂದು ಸ್ಥಾನಿಕ ಸಹಾಯಕ ಅಂಚೆ ಅಧೀಕ್ಷಕ ಸಿ.ಜಿ.ಕಾಂಬ್ಳೆ ತಿಳಿಸಿದರು.

    ಮಾರ್ಚ ಅಂತ್ಯಕ್ಕೆ 100
    ಸುಕನ್ಯಾ ಸಮೃದ್ಧಿ ಗ್ರಾಮ
    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸುಕನ್ಯಾ ಸಮೃದ್ಧಿ ಯೋಜನೆ ಗ್ರಾಮೀಣ ಭಾಗದ ಎಲ್ಲ ಮಹಿಳೆಯರಿಗೆ ತಲುಪಿಸಬೇಕು ಎಂಬ ಸದ್ದುದೇಶದಿಂದ ಯಾದಗಿರಿ, ಕಲಬುರಗಿ ಜಿಲ್ಲೆ ಒಳಗೊಂಡ ಕಲಬುರಗಿ ವಿಭಾಗದಲ್ಲಿ ಇದುವರೆಗೆ 44 ಗ್ರಾಮಗಳನ್ನು ಸುಕನ್ಯಾ ಸಮೃದ್ಧಿ ಗ್ರಾಮ ಎಂದು ಘೋಷಿಸಿ ಮಹಿಳೆಯರ ಖಾತೆ ಆರಂಭಿಸಲಾಗಿದೆ. ಇದೀಗ ಮತ್ತೆ 100 ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಮಾರ್ಚ್​ ಅಂತ್ಯದೊಳಗೆ ಎಲ್ಲ ಕಡೆ ಸುಕನ್ಯಾ ಖಾತೆ ತೆರೆಯಲಾಗುವುದು ಎಂದು ಸಹಾಯಕ ಅಂಚೆ ಅಧೀಕ್ಷಕ ವಿ.ಎಲ್.ಚಿತ್ಕೊಟೆ ತಿಳಿಸಿದ್ದಾರೆ.

    ಮಹಿಳಾ ಕಚೇರಿ ಆರಂಭದಿಂದ ಸ್ತ್ರೀಯರು ಯಾವುದೇ ಮುಜುಗರವಿಲ್ಲದೆ ಕಾರ್ಯನಿರ್ವಹಿಸಬಹುದು. ನಮ್ಮ ಸುತ್ತಲೂ ಒಳ್ಳೆಯ ವಾತಾವರಣ ಇರುತ್ತದೆ. ಮಹಿಳೆಯರೇ ಸ್ವತಂತ್ರವಾಗಿ ಒಂದು ಕಚೇರಿ ನಿರ್ವಹಿಸುತ್ತಾರೆ ಎಂಬ ಸಂದೇಶ ಇತರ ಹೆಣ್ಮಕ್ಕಳಿಗೆ ನೀಡುವಂತಾಗಿದೆ.
    | ಗುರುಬಾಯಿ ಸಂಗೋಳಗಿ, ಅಂಚೆ ಸಹಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts