More

    ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗ

    ಬೇಲೂರು: ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರೂ ನಮ್ಮಂತೆ ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸುವಂತಾಗಬೇಕು ಎಂದು ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಎಚ್.ಎಂ.ದಯಾನಂದ್ ಆಶಯ ವ್ಯಕ್ತಪಡಿಸಿದರು.

    ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ತಾಲೂಕು ಕಸಾಪ ಮತ್ತು ದಿವ್ಯಾಂಗ ಚೇತನ ಗೆಳೆಯರ ಬಳಗದ ಸಹಯೋಗದಲ್ಲಿ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕುವೆಂಪು ಜನ್ಮ ದಿನಾಚರಣೆ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅಂಗವಿಕಲರು ಸ್ವಾವಲಂಬಿಗಳಾಗಿ ಬದುಕಬೇಕು. ಸವಾಲು ಎದುರಿಸುವ ವಿಶೇಷ ಶಕ್ತಿ, ಆತ್ಮಸ್ಥೈರ್ಯವನ್ನು ಅಂಗವಿಕಲರಿಗೆ ದೇವರು ನೀಡಿದ್ದು, ಅವರಿಗೆ ಛಲ ಮತ್ತು ನಂಬಿಕೆ ಇರಬೇಕು ಎಂದರಲ್ಲದೆ, ಅಂಗವಿಕಲ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಸರ್ಕಾರ ಅಂಗವಿಕಲರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ಪ್ರತಿಯೊಬ್ಬರು ಅರ್ಥಪೂರ್ಣ ಹಾಗೂ ಪರಿಪೂರ್ಣವಾಗಿ ಬದುಕು ನಡೆಸಬೇಕು. ಬೌದ್ಧಿಕ ಹಾಗೂ ಭಾವನಾತ್ಮಕ ಸಂಬಂಧ ಬೆಸೆಯುವ ಕೆಲಸವಾಗಬೇಕು. ಅಂಗವಿಕಲ ಮಕ್ಕಳು ಜನಿಸಿದರೆಂದು ತಂದೆ-ತಾಯಿಗಳು ಕೊರಗದೆ ಅವರಿಗೆ ಸಮಾಜದಲ್ಲಿ ಉತ್ತಮ ವೇದಿಕೆ, ಕೌಶಲ, ಸಹಕಾರ ನೀಡಬೇಕು. ಅವರಿಗೆ ಪ್ರತಿ ಹಂತದಲ್ಲೂ ಪೂರಕ ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ಯಾವ ಕ್ಷೇತ್ರದಲ್ಲಿ ಅಭಿರುಚಿ ಇದೆ ಎಂಬುದನ್ನು ಅರಿತು ಪ್ರೋತ್ಸಾಹಿಸಿದಲ್ಲಿ ಅಸಮಾನ್ಯ ಸಾಧನೆ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.

    ರಾಷ್ಟ್ರಧರ್ಮ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಕೆಂಚಾಂಬ ಮಾತನಾಡಿ, ಅಂಗವಿಕಲರಿಗೆ ಅನುಕಂಪ ಬೇಡ. ನಾವು ಅವರಿಗೆ ನೀಡುವ ನಿಷ್ಕಲ್ಮಶ ಪ್ರೀತಿ, ಸಹಾಯ, ಸಹಕಾರಗಳಿಂದ ಅವರು ಸಮಾಜದ ವಿವಿದ ರಂಗಗಳಲ್ಲಿ ಸಾಧನೆ ಮಾಡುತ್ತಾರೆ ಎಂದರು.

    ಕಸಾಪ ತಾಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕಾರ್ಯಕ್ರಮದಲ್ಲಿ ನೇತೃ ತಜ್ಞ ಡಾ.ಸುರೇಶ್, ಚುಟುಕು ಸಾಹಿತಿ ನಂಜುಂಡಯ್ಯ, ವಿಆರ್‌ಡಬ್ಲುೃ ರತ್ನಮ್ಮ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಕೆ.ಆರ್.ಅನುಪಮಾ, ಕಸಾಪ ಮಾಜಿ ಅಧ್ಯಕ್ಷ ಮಾ.ಶಿವಮೂರ್ತಿ, ತಾಲೂಕು ದಿವ್ಯಾಂಗ ಚೇತನರ ಗೆಳೆಯರ ಬಳಗದ ಅಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಗೀರಿಶ್, ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜು, ಅಂಗವಿಕಲ ಇಲಾಖೆಯ ಬಿ.ವಿ.ಹರೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts