More

    ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ

    ಚಿಕ್ಕಮಗಳೂರು: ಕ್ಷೇತ್ರದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

    ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಪಂ, ತಾಪಂಯಿಂದ ಭಾನುವಾರ ಅಂಗನವಾಡಿ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.

    ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸುವಾಗ ಪಾಲಕರು ಸೌಕರ್ಯಗಳ ಬಗ್ಗೆ ಗಮನಿಸುತ್ತಾರೆ. ಹೀಗಾಗಿ ಮೂಲ ಸೌಲಭ್ಯಗಳನ್ನು ಕೇಂದ್ರಕ್ಕೆ ಇಲಾಖಾಧಿಕಾರಿಗಳು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡಬೇಕು. ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಹೇಳಿದರು.
    ಸಿದ್ದರಾಮಯ್ಯ ಪೂರಕ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಘೋಷಣೆಯಾಗದಿದ್ದರು ಮುಂದಿನ ಬಜೆಟ್‌ನಲ್ಲಿ ತಿಂಗಳಿಗೆ 15 ಸಾವಿರ ರೂ. ವೇತನ ನೀಡಲು ಸರ್ಕಾರ ಕ್ರಮಕೈಗೊಳ್ಳಲಿದೆ. ಇಲ್ಲದಿದ್ದಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
    ಗ್ರಾಮೀಣ, ನಗರ, ಪಟ್ಟಣ ಭಾಗದಲ್ಲಿ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅತಿವೃಷ್ಟಿ ಸಂದರ್ಭದಲ್ಲಿ ಸುರಕ್ಷಿತವಾಗಿರುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು. ಕಾರ್ಯಾಗಾರದಲ್ಲಿ ತಹಸೀಲ್ದಾರ್ ವಿನಾಯಕ್ ಸಾಗರ್, ಕಡೂರು ತಾಪಂ ಇಒ ಪ್ರವೀಣ್‌ಕುಮಾರ್, ಶಿಶು ಅಭಿವೃದ್ಧಿ ಅಧಿಕಾರಿಗಳಾದ ಶಿವಕುಮಾರ್, ಚರಣ್ ರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts