More

    ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಟ್ಟೆ ಏಟು!

    ಶಿರಸಿ: ಅಪೌಷ್ಟಿಕತೆ ದೂರ ಮಾಡಲು ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಮೊಟ್ಟೆ ಭಾಗ್ಯ ಯೋಜನೆಯು ಅಂಗನವಾಡಿ ಕಾರ್ಯಕರ್ತೆಯರನ್ನು ಹೈರಾಣಾಗಿಸಿದೆ. ಪ್ರತಿ ಮೊಟ್ಟೆಗೆ 1ರಿಂದ 2 ರೂಪಾಯಿ ಈ ಸಿಬ್ಬಂದಿಯ ಹೆಗಲೇರಿದೆ.

    ಅಂಗನವಾಡಿ ಕೇಂದ್ರಗಳಲ್ಲಿ ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗೆ ವಾರದಲ್ಲಿ ಎರಡು ದಿನ ಹಾಗೂ ಗರ್ಭಿಣಿ- ಬಾಣಂತಿಯರಿಗೆ ತಿಂಗಳಿಗೆ ತಲಾ 25 ಮೊಟ್ಟೆ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 2,687 ಅಂಗನವಾಡಿ ಕೇಂದ್ರಗಳಿವೆ. ಅಷ್ಟೇ ಪ್ರಮಾಣದಲ್ಲಿ ಸಹಾಯಕಿಯರು, ಕಾರ್ಯಕರ್ತೆಯರು ತಿಂಗಳ ಗೌರವಧನ ಪಡೆದು ಕೆಲಸ ಮಾಡುತ್ತಿದ್ದಾರೆ. ವಿತರಿಸುವ ಪ್ರತಿ ಮೊಟ್ಟೆಗೆ 5 ರೂಪಾಯಿಯನ್ನು ರಾಜ್ಯ ಸರ್ಕಾರ ನೀಡುತ್ತದೆ. ಆದರೆ, ಸದ್ಯ ಮಾರುಕಟ್ಟೆಯಲ್ಲಿ ಸಿಗುವ ಮೊಟ್ಟೆಯ ದರ 6 ರಿಂದ 7 ರೂಪಾಯಿ ಆಗಿದೆ. ಈ ಹೆಚ್ಚುವರಿ ಮೊತ್ತವನ್ನು ಅಂಗನವಾಡಿ ಕಾರ್ಯಕರ್ತೆಯರೇ ಭರಿಸುತ್ತಿದ್ದಾರೆ. ಸಾಮಾನ್ಯವಾಗಿ ಸರ್ಕಾರದ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಇರುವ ಆಹಾರ ವಸ್ತುಗಳನ್ನು ಇಲಾಖೆಯೇ ಪೂರೈಕೆ ಮಾಡುತ್ತದೆ. ಆದರೆ, ಮೊಟ್ಟೆಯನ್ನು ತಂದು ದಾಸ್ತಾನು ಇಡುವುದು ಕಷ್ಟವಾದ ಕಾರಣ, ಅಂಗನವಾಡಿ ಕಾರ್ಯಕರ್ತೆಯರೇ ಒದಗಿಸುವಂತೆ ಇಲಾಖೆ ಸೂಚಿಸಿತ್ತು. ಈ ಕಾರಣ ಸ್ಥಳೀಯವಾಗಿ ಮೊಟ್ಟೆ ಖರೀದಿಸುವ ಜತೆಗೆ ಅದಕ್ಕೆ ಹೆಚ್ಚುವರಿಯಾಗಿ ಬರುವ ಖರ್ಚನ್ನೂ ಇವರೇ ಹಾಕುವಂತಾಗಿದೆ.

    46 ಲಕ್ಷ ರೂ. ಅನುದಾನ: ಜಿಲ್ಲೆಯಲ್ಲಿ ಅಂದಾಜು 47,669 ಮಕ್ಕಳು ಮೂರು ವರ್ಷದಿಂದ ಆರು ವರ್ಷದ ಒಳಗಿನವರು ಮೊಟ್ಟೆ ಪಡೆಯಲು ಅರ್ಹರು. ಅಲ್ಲದೆ, 8,662 ಗರ್ಭಿಣಿಯರು, 8,241 ಬಾಣಂತಿಯರಿಗೂ ಮೊಟ್ಟೆ ವಿತರಣೆ ಆಗುತ್ತಿದೆ. ತಿಂಗಳಿಗೆ 8.03 ಲಕ್ಷ ಮೊಟ್ಟೆ ಯೋಜನೆಗೆ ಬಳಕೆಯಾಗುತ್ತಿದ್ದು, 46 ಲಕ್ಷ ರೂ. ಜಿಲ್ಲೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಈ ಮೊತ್ತವು ಮೊಟ್ಟೆಯ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಕಡಿಮೆ. ಪ್ರತಿ ಮೊಟ್ಟೆಗೆ 1ರಿಂದ 2 ರೂಪಾಯಿ ಹೆಚ್ಚುವರಿ ನೀಡಬೇಕಿದ್ದು, ತಿಂಗಳಿಗೆ ಈ ಮೊತ್ತವೇ ಕನಿಷ್ಠ 8 ಲಕ್ಷ ರೂ.ಗಳಷ್ಟಾಗುತ್ತಿದೆ. ವರ್ಷದಿಂದ ಈ ವ್ಯವಸ್ಥೆ ಇದೇ ರೀತಿ ಇರುವ ಕಾರಣ ಅಂಗನವಾಡಿ ಕಾರ್ಯಕರ್ತೆಯರು ಕಂಗಾಲಾಗಿದ್ದಾರೆ.

    ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮೊಟ್ಟೆಯ ಮೇಲೆ 1ರಿಂದ 2 ರೂಪಾಯಿ ಭರಿಸುತ್ತಿದ್ದಾರೆ. ತಿಂಗಳಿಗೆ 2 ಸಾವಿರ ರೂ. ತನಕ ಕೈನಿಂದ ಹಣ ಹಾಕಿ ಮೊಟ್ಟೆ ವಿತರಿಸುವ ಕಾರ್ಯಕರ್ತೆಯರು ಸಾಕಷ್ಟು ಜನರಿದ್ದಾರೆ. ಸರ್ಕಾರದಿಂದ 10 ಸಾವಿರ ರೂ. ಸಂಬಳ ನೀಡುತ್ತಿದ್ದು, ಇದರಲ್ಲಿ ಶೇ. 20ರಷ್ಟು ಸಂಬಳ ಮೊಟ್ಟೆಗೆ ಖರ್ಚು ಮಾಡುವ ಸ್ಥಿತಿ ಇದೆ. ಪ್ರತಿ ಆರು ತಿಂಗಳಿಗೊಮ್ಮೆ ಮೊಟ್ಟೆಯ ದರ ಪರಿಷ್ಕರಣೆ ಆಗುತ್ತದೆ ಎಂದು ಇಲಾಖೆ ಹೇಳುತ್ತದೆ. ಆದರೆ, ಕಳೆದೊಂದು ವರ್ಷದಿಂದ ದರ ಪರಿಷ್ಕರಣೆಯೇ ಆಗಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮೊಟ್ಟೆಯ ದರ ಪರಿಷ್ಕರಿಸಬೇಕು.
    | ವಿದ್ಯಾ ವೈದ್ಯ, ಅಂಗನವಾಡಿ ಕಾರ್ಯಕರ್ತೆ

    ಮಾರುಕಟ್ಟೆಯಲ್ಲಿ ದರ ಹೆಚ್ಚಿರುವ ಬಗ್ಗೆ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ದರ ಪರಿಷ್ಕರಿಸುವಂತೆ ಇಲಾಖೆ ನಿರ್ದೇಶಕರಿಗೆ ಕೋರಲಾಗಿದೆ.
    | ಪದ್ಮಾವತಿ, ಉಪ ನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts