More

    ಅಂಗಡಿ ತೆರೆಯಲೂ ಕೈ ಬಿಸಿ ಮಾಡಬೇಕೆ?

    ಹುಬ್ಬಳ್ಳಿ: ಇಲ್ಲಿಯ ಮಿನಿ ವಿಧಾನಸೌಧ, ಮಹಾನಗರ ಪಾಲಿಕೆ ಕಚೇರಿ, ಕೆಲವು ಪೊಲೀಸ್ ಠಾಣೆಗಳ ಆವರಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕೆಲವು ಸಂಘಟನೆಯವರಿಗೆ ಕರೊನಾ ಲಾಕ್​ಡೌನ್ ಕಾರಣದಿಂದ ಒಂದೂವರೆ ತಿಂಗಳ ಕಾಲ ಕೆಲಸವೇ ಇರಲಿಲ್ಲ. ಈಗ ಲಾಕ್​ಡೌನ್ ಸಡಿಲಿಸುತ್ತಿದ್ದಂತೆ ಅವರೆಲ್ಲ ಚುರುಕಾಗಿದ್ದು, ಸಂದರ್ಭದ ದುರುಪಯೋಗ ಪಡೆಯಲು ಪ್ರಯತ್ನಿಸುತ್ತಿರುವುದಾಗಿ ತಿಳಿದುಬಂದಿದೆ.

    ಪರಸ್ಪರ ಅಂತರ ನಿರ್ವಹಣೆ ಸೇರಿ ಅಗತ್ಯ ಸುರಕ್ಷಾ ಕ್ರಮ ಕೈಗೊಂಡು ಸೀಮಿತ ಅವಧಿವರೆಗೆ ನಿರ್ದಿಷ್ಟ ಅಂಗಡಿಗಳನ್ನು ತೆರೆಯಬಹುದು ಎಂದು ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ಅದಾಗುತ್ತಿದ್ದಂತೆ ಸಾವಿರಾರು ಜನರು ಮನೆಯಿಂದ ಹೊರಗೆ ಬರುತ್ತಿದ್ದಾರೆ. ದುರ್ಗದಬೈಲ್ ಸುತ್ತಮುತ್ತಲಿನ ಪ್ರಮುಖ ಭಾಗದಲ್ಲಿಯೂ ಕೆಲವು ಅಂಗಡಿಗಳನ್ನು ಅರ್ಧ ತೆಗೆದು ವಹಿವಾಟು ನಡೆಸಲಾಗುತ್ತಿದೆ. ಇದಕ್ಕೆ ಪೊಲೀಸರು ಅಡ್ಡಿಪಡಿಸದಂತೆ ‘ರಾಜ್ಯಮಟ್ಟದ’ ಎಂದು ಲೆಟರ್ ಹೆಡ್ ಮುದ್ರಿಸಿಕೊಂಡಿರುವ ‘ಹುಬ್ಬಳ್ಳಿಗಷ್ಟೇ ಸೀಮಿತವಾಗಿರುವ’ ವಿವಿಧ ಸಂಘಟನೆ/ವೇದಿಕೆಯವರು ‘ಮಧ್ಯವರ್ತಿ’ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

    ನಿರ್ದಿಷ್ಟ ವಿಧದ ವಸ್ತುಗಳ ವ್ಯಾಪಾರಸ್ಥರ ಸಂಘ/ಕೂಟ ಮಾಡಿಕೊಂಡ ಕೆಲವರು ಸಹ ಇಂಥ ಸಂಘಟನೆಯವರೊಂದಿಗೆ ಕೈ ಜೋಡಿಸುತ್ತಿದ್ದಾರೆ. ತಮ್ಮ ಅಣತಿಗೆ ಸಮ್ಮತಿ ಸೂಚಿಸದ ಅಂಗಡಿಯವರು ಲಾಕ್​ಡೌನ್ ಉಲ್ಲಂಘಿಸುತ್ತಿದ್ದಾರೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಇಂಥವರ ಕೈಗೊಂಬೆಯಂತೆ ವರ್ತಿಸುವ ಕೆಲವು ಪೊಲೀಸರು ತಮ್ಮ ಕೈ ಬಿಸಿ ಮಾಡುವ ವ್ಯಾಪಾರಿಗಳಿಗಷ್ಟೇ ಸಹಕರಿಸಿ, ಉಳಿದವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಈ ಮಧ್ಯೆ, ಹಫ್ತಾ ವಸೂಲಿ ಗ್ಯಾಂಗ್​ಗಳು ಸಹ ಚುರುಕಾಗಿವೆ. ಇವೆಲ್ಲ ತಳಮಟ್ಟದಲ್ಲೇ ನಡೆಯುತ್ತಿದ್ದು ಉನ್ನತ ಅಧಿಕಾರಿಗಳ ಗಮನಕ್ಕೂ ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಈ ಕುರಿತು ಪತ್ರಿಕೆ ಹಿರಿಯ ಅಧಿಕಾರಿಗಳನ್ನು ಕೇಳಿದಾಗ, ಲಾಕ್​ಡೌನ್ ಆದೇಶ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಒಂದುವೇಳೆ ಪೊಲೀಸರಿಗೆ ಆಮಿಷ ಒಡ್ಡಿದರೆ ಮತ್ತು ಪೊಲೀಸರು ಆಮಿಷಕ್ಕೆ ಒಳಗಾದರೆ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದಷ್ಟೆ ಹೇಳಿದರು.

    ಮತ್ತದೇ ದೌರ್ಜನ್ಯ: ಐದಾರು ತಿಂಗಳ ಹಿಂದೆ ಮಹಾನಗರ ಪಾಲಿಕೆ ಪ್ಲಾಸ್ಟಿಕ್ ನಿಷೇಧ ಆದೇಶ ಮಾಡಿದಾಗ, ಕೆಲವು ಸಂಘಟನೆಯವರು ತಾವೇ ಕಾನೂನು ಕೈಗೆ ತೆಗೆದುಕೊಂಡು ಅಂಗಡಿಗಳ ಮೇಲೆ ದಾಳಿ ನಡೆಸಿ ವ್ಯಾಪಾರಿಗಳನ್ನು ಬೆದರಿಸಿದ್ದರು. ಅದು ಹಫ್ತಾ ನಿಗದಿ ಮಾಡಿಕೊಳ್ಳುವ ದೌರ್ಜನ್ಯ ಎಂದು ಆಮೇಲೆ ತಿಳಿದುಬಂದಿತ್ತು. ಈಗ ಲಾಕ್​ಡೌನ್ ಸಡಿಲಿಕೆ ಸಂದರ್ಭದಲ್ಲೂ ಅಂಥದೇ ದೌರ್ಜನ್ಯ ಶುರುವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts