More

    ಫ್ರೆಂಚ್ ಓಪನ್‌ನಲ್ಲಿ ಜೋಕೊವಿಕ್, ಸೆರೇನಾ, ಅಜರೆಂಕಾ ಮುನ್ನಡೆ; ಬೆನ್ಸಿಕ್‌ಗೆ ಶಾಕ್

    ಪ್ಯಾರಿಸ್: ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸುಲಭ ಗೆಲುವಿನ ಆರಂಭ ಪಡೆದಿದ್ದರೆ, 10ನೇ ಶ್ರೇಯಾಂಕಿತೆ ಸ್ವಿಸ್ ಬೆಡಗಿ ಬೆಲಿಂಡಾ ಬೆನ್ಸಿಕ್ ಟೂರ್ನಿಯ 4ನೇ ದಿನದಾಟದಲ್ಲಿ ಹೊರಬಿದ್ದಿದ್ದಾರೆ.

    ಸೆರ್ಬಿಯಾ ತಾರೆ ಜೋಕೊವಿಕ್ 6-2, 6-4, 6-2 ನೇರಸೆಟ್‌ಗಳಿಂದ ಅಮೆರಿಕದ ಟೆನಿಸ್ ಸ್ಯಾಂಡ್‌ಗ್ರೆನ್ ವಿರುದ್ಧ ಜಯಿಸುವ ಮೂಲಕ 2ನೇ ಸುತ್ತಿಗೇರಿದರು. ಈ ಮೂಲಕ ಸಮಕಾಲೀನ ದಿಗ್ಗಜರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರನ್ನು ಹಿಂಬಾಲಿಸಿದರು. ಈ ಮೂವರೂ ಒಂದೇ ಭಾಗದಲ್ಲಿರುವುದು ಈ ಬಾರಿಯ ಡ್ರಾದ ವಿಶೇಷತೆಯಾಗಿದೆ. 19ನೇ ಗ್ರಾಂಡ್ ಸ್ಲಾಂ ಗೆಲುವಿನ ಹಂಬಲದಲ್ಲಿರುವ ಜೋಕೊವಿಕ್, ಈ ಹಿಂದೆ 2016ರಲ್ಲಿ ಒಮ್ಮೆ ರೋಲ್ಯಾಂಡ್ ಗ್ಯಾರಸ್‌ನಲ್ಲಿ ಚಾಂಪಿಯನ್ ಆಗಿದ್ದರು.

    6ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಬುಧವಾರ ನಡೆದ ಪಂದ್ಯದಲ್ಲಿ 7-6, 6-3, 7-6ರಿಂದ ರಷ್ಯಾದ ಸಫಿಯುಲ್ಲಿನ್ ವಿರುದ್ಧ ಜಯ ಸಾಧಿಸಿ 3ನೇ ಸುತ್ತಿಗೇರಿದರು. 5ನೇ ಶ್ರೇಯಾಂಕಿತ ಸ್ಟೆಾನೊಸ್ ಸಿಸಿಪಾಸ್, ಅಮೆರಿಕದ ಜಾನ್ ಐಸ್ನರ್ ಕೂಡ ಮುನ್ನಡೆದರು. ಜಪಾನ್‌ನ ಕಿ ನಿಶಿಕೋರಿ 5 ಸೆಟ್‌ಗಳ ಹೋರಾಟದಲ್ಲಿ ರಷ್ಯಾದ ಕರೆನ್ ಕಚನೋವ್ ವಿರುದ್ಧ 6-4, 2-6, 2-6, 6-4, 6-4ರಿಂದ ಜಯಿಸಿದರು.

    ಬೆನ್ಸಿಕ್‌ಗೆ ಆಘಾತ; ಅಜರೆಂಕಾ, ಸೆರೇನಾ ಮುನ್ನಡೆ
    ಟೂರ್ನಿಯಲ್ಲಿ ಆರಂಭಿಕ ಹಂತಗಳಲ್ಲೇ ಆಘಾತ ಎದುರಿಸಿದ ಶ್ರೇಯಾಂಕಿತರ ಸಾಲಿಗೆ ಬುಧವಾರ ಬೆಲಿಂಡಾ ಬೆನ್ಸಿಕ್ ಕೂಡ ಸೇರ್ಪಡೆಗೊಂಡರು. ಅವರು 2ನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಡರಿಯಾ ಕಸಟ್ಕಿನಾ ವಿರುದ್ಧ 2-6, 2-6 ನೇರಸೆಟ್‌ಗಳಿಂದ ಶರಣಾದರು. 2 ಗ್ರಾಂಡ್ ಸ್ಲಾಂಗಳ ಒಡತಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ 7-5, 6-4ರಿಂದ ಡೆನ್ಮಾರ್ಕ್‌ನ ಕ್ಲಾರಾ ಟೌಸನ್‌ಗೆ ಸೋಲುಣಿಸಿ 3ನೇ ಸುತ್ತಿಗೇರಿದರು. ಅಮೆರಿಕದ ತಾರೆ ಸೆರೇನಾ ವಿಲಿಯಮ್ಸ್ 6-3, 5-7, 6-1ರಿಂದ ರೊಮೇನಿಯಾದ ಬುಜರ್‌ನೆಸ್ಕುಗೆ ಸೋಲುಣಿಸಿ 2ನೇ ಸುತ್ತಿನ ತಡೆ ದಾಟಿದರು.

    ಕ್ಯಾನ್ಸರ್ ಗೆದ್ದ ನವಾರೊ ಪುನರಾಗಮನಕ್ಕೆ ನಿರಾಸೆ
    ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಮರಳಿ ಕಣಕ್ಕಿಳಿದ ಸ್ಪೇನ್ ತಾರೆ ಸ್ಯೂರೆಜ್ ನವಾರೊ ಅವರಿಗೆ ಮೊದಲ ಸುತ್ತಿನಲ್ಲೇ ನಿರಾಸೆ ಎದುರಾಯಿತು. ಅಮೆರಿಕದ ಸ್ಲೋವನ್ ಸ್ಟೀನ್ಸ್ ವಿರುದ್ಧದ ಪಂದ್ಯದಲ್ಲಿ ನವಾರೊ 6-3, 6-7, 4-6ರಿಂದ ಸೋಲು ಅನುಭವಿಸಿದರು. 32 ವರ್ಷದ ನವಾರೊ ವರ್ಷಾಂತ್ಯದಲ್ಲಿ ನಿವೃತ್ತಿಯಾಗುವುದಾಗಿ ಈಗಾಗಲೆ ಪ್ರಕಟಿಸಿದ್ದಾರೆ.

    ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಗಂಗೂಲಿ ದಾಖಲೆ ಮುರಿದ ಡೆವೊನ್​ ಕಾನ್​ವೇ

    ಸರ್ ಏನಾದ್ರೂ ಹೇಳ್ಕಳಿ, ಆರ್‌ಸಿಬಿಗೆ ಕಪ್ ಕೊಡ್ಸಿ; ಮೊಟ್ಟೆ ವಿವಾದದಿಂದ ಕೊಹ್ಲಿ ಮತ್ತೆ ಟ್ರೋಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts