More

    ಝುಂಡಾ ತಯಾರಿ ಜೋರು

    ಧಾರವಾಡ: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ ಘೊಷಿಸಿದೆ. ಈ ಅಭಿಯಾನ ಬರೀ ಜನರಲ್ಲಿ ದೇಶ ಪ್ರೇಮ ಹೆಚ್ಚಿಸುವ ಅಭಿಯಾನವಾಗದೆ ಸ್ವ-ಸಹಾಯ ಸಂಘಗಳ ಸದಸ್ಯರು ಆರ್ಥಿಕವಾಗಿ ಸಬಲರಾಗಲೂ ಅನುಕೂಲವಾಗಿದೆ.ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಅಭಿಯಾನ ಯಶಸ್ವಿಯಾಗಲು ಲಕ್ಷ ಗಟ್ಟಲೇ ರಾಷ್ಟ್ರ ಧ್ವಜಗಳು ಬೇಕು. ಈ ಕಾರ್ಯಕ್ಕೆ ಜಿಲ್ಲೆಯ ಪ್ರತಿ ತಾಲೂಕಿಗೆ 2ರಂತೆ (ಧಾರವಾಡ ತಾಲೂಕಿನಲ್ಲಿ 4 ಸಂಘ) ಒಟ್ಟು 16 ಸ್ವ-ಸಹಾಯ ಸಂಘಗಳನ್ನು ಗುರುತಿಸಲಾಗಿದೆ. ಹೊಲಿಗೆ ಅರಿತಿರುವ ಸಂಘದ ಸದಸ್ಯರಿಗೆ ಧ್ವಜ ತಯಾರಿಕೆ ಬಗ್ಗೆ ನಗರದ ರುಡ್​ಸೆಟ್​ನಲ್ಲಿ ಒಂದು ದಿನದ ತರಬೇತಿ ನೀಡಿದ್ದಲ್ಲದೆ, ಹುಬ್ಬಳ್ಳಿ ಬೆಂಗೇರಿ ಕೇಂದ್ರಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ನೀಡಿ ಅವರನ್ನು ಅಣಿಗೊಳಿಸಲಾಗಿದೆ.

    ಸಂಘಗಳಿಗೆ ಗ್ರಾಪಂ ಮಟ್ಟದ ಒಕ್ಕೂಟದಿಂದ (ಜಿಪಿಎಲ್​ಎಫ್) ಪ್ರತಿ ಸಂಘಕ್ಕೆ 75,000 ರೂ. ಸಾಲ ಕೊಡಿಸಲಾಗುತ್ತದೆ. ಈ ಹಣದಲ್ಲಿ ಧ್ವಜ ತಯಾರಿಸಲಿದ್ದಾರೆ. ಜಿಲ್ಲೆಯಲ್ಲಿನ 144 ಗ್ರಾಮ ಪಂಚಾಯಿತಿಗಳು ತಲಾ 450 ಧ್ವಜಗಳನ್ನು ಸಂಘಗಳಿಂದ 18 ರೂ.ದಂತೆ ಖರೀದಿಸಿ, ಸರ್ಕಾರಿ ಕಚೇರಿಗಳಿಗೆ ಉಚಿತವಾಗಿ ನೀಡಲಿವೆ. ಜತೆಗೆ ಸಂಘದ ಸದಸ್ಯರು ಇತರ ಕಡೆಗಳಲ್ಲೂ ಧ್ವಜಗಳನ್ನು ಮಾರಬಹುದು.

    ರಾಷ್ಟ್ರ ಧ್ವಜದ ಉದ್ದ ಮತ್ತು ಅಗಲ 3:2 ಅನುಪಾತದಲ್ಲಿರಲಿದ್ದು, ಮೂರು ಬಗೆಯ ಗಾತ್ರದಲ್ಲಿ ತಯಾರಿಸಲು ಸರ್ಕಾರ ಸೂಚಿಸಿದೆ. ಅದರಂತೆ ಜಿಲ್ಲೆಯಲ್ಲಿ 24ಗಿ16 ಅಳತೆ ಧ್ವಜಗಳನ್ನು (ಪಾಲಿಸ್ಟರ್ ಬಟ್ಟೆ) ಹೆಚ್ಚಿನ ಸಂಖ್ಯೆಯಲ್ಲಿ ಸಿದ್ಧ ಪಡಿಸುತ್ತಿದ್ದು, ಅದರ ಜತೆಗೆ 9ಗಿ6 ಅಳತೆಯ ಧ್ವಜಗಳನ್ನೂ ತಯಾರಿಸಲಾಗುತ್ತಿದೆ.

    ಧ್ವಜ ತಯಾರಿಕೆಗೆ ಬೇಕಿರುವ ಅಗತ್ಯ ವಸ್ತುಗಳ ಖರೀದಿ, ಅವುಗಳ ಮಾರಾಟ ಸೇರಿದಂತೆ ಸದಸ್ಯರಿಗೆ ಎಲ್ಲ ರೀತಿಯ ಸಹಕಾರವನ್ನು ಜಿಪಂ ಅಧಿಕಾರಿಗಳು ನೀಡಿದ್ದಾರೆ. ಈಗಾಗಲೇ ಕಚ್ಚಾ ವಸ್ತುಗಳೂ ಅವರಿಗೆ ತಲುಪಿದ್ದು, ಶನಿವಾರ ಸಂಜೆಯಿಂದ ಧ್ವಜ ತಯಾರಿಕೆ ಕಾರ್ಯವೂ ಆರಂಭವಾಗಿದೆ.

    ದರ ಹೆಚ್ಚಳ ಸಾಧ್ಯತೆ: ಗ್ರಾಮ ಪಂಚಾಯಿತಿ 18 ರೂ.ದಂತೆ ಒಂದು ಧ್ವಜ ಖರೀದಿಸಲು ದರ ನಿಗದಿ ಮಾಡಲಾಗಿದೆ. ನಿಗದಿತ ದರ ಕಡಿಮೆಯಾಗಿದೆ ಎಂಬ ಮಾತು ಎಲ್ಲ ಜಿಲ್ಲೆಗಳಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಸರ್ಕಾರ ಇನ್ನೂ ಹೆಚ್ಚಿನ ದರ ನಿಗದಿ ಮಾಡುವ ಸಾಧ್ಯತೆ ಇದೆ.

    ಸ್ವ ಸಹಾಯ ಸಂಘದ ಸದಸ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಸದಸ್ಯರಿಗೆ ಸಾಲ ಸಹಾಯ ಜತೆಗೆ ಕಚ್ಚಾ ವಸ್ತುಗಳ ಖರೀದಿಗೂ ಸಹಕಾರ ನೀಡಲಾಗಿದೆ. ಧ್ವಜ ತಯಾರಿಕೆ ಕುರಿತು ಈಗಾಗಲೇ ಸೂಕ್ತ ತರಬೇತಿ ಕೊಡಿಸಲಾಗಿದೆ. ತಯಾರಿಕೆ ಕಾರ್ಯವೂ ಆರಂಭವಾಗಿದೆ.

    | ಬಿ.ಎಸ್. ಮೂಗನೂರಮಠ, ಯೋಜನಾ ನಿರ್ದೇಶಕ, ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts