More

    ಜಿಪಂ, ತಾಪಂ ಟಿಕೆಟ್ ಖಾತ್ರಿಗೆ ದುಂಬಾಲು!

    ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಧುಮುಕಿರುವ ಅಭ್ಯರ್ಥಿಗಳು ಗೆಲ್ಲಲು ನಾನಾ ಕಸರತ್ತು ನಡೆಸುತ್ತಿದ್ದರೆ, ಇತ್ತ ಆಯಾ ಪಕ್ಷದ ಸ್ಥಳೀಯ ಮುಖಂಡರು, ಬೆಂಬಲಿಗರು ಇದೇ ಅವಕಾಶ ಬಳಿಸಿಕೊಂಡು ಜಿಪಂ ಹಾಗೂ ತಾಪಂ ಟಿಕೆಟ್ ಖಾತ್ರಿಗಾಗಿ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ.

    ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ ಕ್ಷೇತ್ರ ಮರು ವಿಂಗಡಣೆ, ಮೀಸಲಾತಿ ಪಟ್ಟಿ ಪ್ರಕಟಿಗೊಂಡಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಚುನಾವಣೆ ಪ್ರಚಾರಕ್ಕಾಗಿ ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುತ್ತಿರುವ ಕಾಂಗ್ರೆಸ್, ಬಿಜೆಪಿಯ ಅಭ್ಯರ್ಥಿಗಳು ಮತ್ತು ಪಕ್ಷದ ನಾಯಕರಿಗೆ ಜಿಪಂ, ತಾಪಂ ಟಿಕೆಟ್ ಆಕಾಂಕ್ಷಿಗಳು ವಿವಿಧ ಆಮಿಷವೊಡ್ಡುತ್ತಿದ್ದಾರೆ.

    ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ‘ನಾವು ಗ್ರಾಪಂ ಸದಸ್ಯರ ಮನವೊಲಿಸಿ ನಿಮ್ಮನ್ನು ಗೆಲ್ಲಿಸುತ್ತೇವೆ. ನಮ್ಮನ್ನು ಜಿಪಂ, ತಾಪಂ ಸದಸ್ಯರಾಗಿ ಆಯ್ಕೆ ಮಾಡಬೇಕು’ ಎಂಬ ಬೇಡಿಕೆ ಮುಂದಿಡುತ್ತಿದ್ದಾರೆ. ಕೆಲವೆಡೆ ಸ್ಥಳೀಯ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ನಾಯಕರ ಮುಂದೆ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಈ ಬೆಳವಣಿಗೆ ಅಭ್ಯರ್ಥಿಗಳಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

    ಈಗಾಗಲೇ ಭೂ ವಿಸ್ತೀರ್ಣ ಹಾಗೂ ಜನಸಂಖ್ಯೆ ಆಧಾರದ ಮೇಲೆ ರಾಜ್ಯ ಚುನಾವಣೆ ಆಯೋಗವು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಕ್ಷೇತ್ರ ಮರು ವಿಂಗಡಣೆ ಮಾಡಿ ಜಿಪಂ-91, ತಾಪಂ 345 ಸ್ಥಾನಕ್ಕೆ ಏರಿಕೆ ಮಾಡಿದೆ. ಈ ಪೈಕಿ ಮಹಿಳೆಯರಿಗೆ ಶೇ.50 ಸ್ಥಾನ ಮೀಸಲಿಡಲಾಗಿದೆ. ಅಲ್ಲದೆ, ಹಳೆಯ ಜಿಪಂ ಕ್ಷೇತ್ರಗಳನ್ನು ವಿಂಗಡಣೆ ಜತೆಗೆ ಮೀಸಲಾತಿ ಬದಲಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಪಂ ಮಾಜಿ ಸದಸ್ಯರು ಹಾಗೂ ಪಕ್ಷದ ಯುವಕ ಘಟಕದ ಕಾರ್ಯಕರ್ತರು ಟಿಕೆಟ್ ಗಿಟ್ಟಿಸಿಕೊಳ್ಳಲು ಪಕ್ಷದ ನಾಯಕರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ತಮಗಿರುವ ಜಾತಿ ಬೆಂಬಲವನ್ನೂ ಆಕಾಂಕ್ಷಿಗಳು ಪ್ರದರ್ಶಿಸುತ್ತಿದ್ದಾರೆ.

    ಹಳ್ಳಿ ರಾಜಕೀಯ ಕರಾಮತ್ತು: ವಿಧಾನಸಭೆ ಚುನಾವಣೆ ಮುಗಿದ ಬಳಿಕ ಜಿಪಂ ಹಾಗೂ ತಾಪಂ ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು ಈಗಿನಿಂದಲೇ ತಾಲೀಮು ಆರಂಭಿಸಿದ್ದಾರೆ. ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಆಗಮಿಸುತ್ತಿರುವ ಪಕ್ಷದ ಹಿರಿಯ ನಾಯಕರನ್ನು ತಾವು ಪ್ರತಿನಿಧಿಸುವ ಜಿಪಂ, ತಾಪಂ ಕ್ಷೇತ್ರಗಳಲ್ಲಿ ಕರೆದುಕೊಂಡು ಹೋಗುತ್ತಿರುವುದರಿಂದ ಈ ಬಾರಿ ಜಿಪಂ ಚುನಾವಣೆ ಮಹತ್ವ ಪಡೆದುಕೊಂಡಿದೆ. ಕೆಲ ಜಿಪಂ ಕ್ಷೇತ್ರಗಳ ಹಾಲಿ ಸದಸ್ಯರು ಸ್ಪರ್ಧಿಸಲು ಮತ್ತೊಂದು ಅವಕಾಶ ಕಲ್ಪಿಸುವ ಭರವಸೆ ನೀಡುವಂತೆ ಶಾಸಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಜಾತಿ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಸಮುದಾಯಗಳ ಮುಖಂಡರ ಮನವೊಲಿಸುವ ಸಭೆಗಳು ಪ್ರಾರಂಭವಾಗಿವೆ.

    ಜುಲೈನಲ್ಲಿ ಚುನಾವಣೆ?

    ಈ ಹಿಂದೆ 90 ಸದಸ್ಯರ ಬಲ ಹೊಂದಿರುವ ಜಿಪಂನಲ್ಲಿ ಕಾಂಗ್ರೆಸ್-29, ಬಿಜೆಪಿ-54, ಜೆಡಿಎಸ್-1,ಇನ್ನಿತರ 6 ಸ್ಥಾನಗಳು ಹಾಗೂ ಹತ್ತು ತಾಪಂನ 345 ಸದಸ್ಯರ ಪೈಕಿ ಬಿಜೆಪಿ-165, ಕಾಂಗ್ರೆಸ್-120, ಇತರ 60 ಸ್ಥಾನಗಳನ್ನು ಹೊಂದಿದ್ದರು. 2016 ಫೆಬ್ರವರಿಯಲ್ಲಿ ಜರುಗಿದ ಜಿಪಂ, ತಾಪಂ ಚುನಾವಣೆಯಲ್ಲಿ ಆಯ್ಕೆಗೊಂಡಿರುವ ಸದಸ್ಯರ ಅಧಿಕಾರ ಅವಧಿ 2021 ಮೇ ತಿಂಗಳಲ್ಲಿ ಪೂರ್ಣಗೊಂಡು ಎರಡು ವರ್ಷ ಕಳೆದಿದೆ. 2023 ಜುಲೈನಲ್ಲಿ ಜಿಪಂ, ತಾಪಂ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರು ತಿಳಿಸಿದ್ದಾರೆ

    ಕ್ಷೇತ್ರದಲ್ಲಿ ಆಮಿಷಗಳ ಸುರಿಮಳೆ

    ಈಗಾಗಲೇ ಜಿಲ್ಲೆಯ 484 ಗ್ರಾಪಂಗಳಿಗೆ ಆಯ್ಕೆಗೊಂಡಿರುವ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ಜಿಪಂ, ತಾಪಂ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ಆಮಿಷ ನೀಡುತ್ತಿದ್ದಾರೆ. ಗೋಕಾಕ, ಮೂಡಲಗಿ, ರಾಮದುರ್ಗ, ಬೆಳಗಾವಿ ಗ್ರಾಮೀಣ, ಖಾನಾಪುರ, ಹುಕ್ಕೇರಿ, ಚಿಕ್ಕೋಡಿ, ಕಾಗವಾಡ ಹಾಗೂ ಅಥಣಿ ತಾಲೂಕುಗಳ ವ್ಯಾಪ್ತಿಯ ತಮ್ಮ ಕ್ಷೇತ್ರದಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ಹಾಕಿಸಲು ಮತದಾರರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಕೆಲವರಿಗೆ ಪ್ರವಾಸ ಭಾಗ್ಯ ಇನ್ನೂ ಕೆಲವರಿಗೆ ಸೈಟ್‌ಗಳ ಆಮಿಷ ಒಡ್ಡುವ ಮೂಲಕ ಮತ ಬ್ಯಾಂಕ್ ಗಟ್ಟಿಗೊಳಿಸುತ್ತಿರುವುದು.

    | ಮಂಜುನಾಥ ಕೋಳಿಗುಡ್ಡ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts