More

    ಹಣ ಬಳಸಿದ್ದಷ್ಟೇ ಜಿಪಂ ಸಾಧನೆ ; ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಯೋಜನೆಗೆ ಗ್ರಹಣ

    ತುಮಕೂರು: ಜಿಲ್ಲೆಯ 37 ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಮೂಲಗಳಿಂದ ತಲಾ 35 ಲಕ್ಷ ರೂ. ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಯೋಜನೆ ಸಂಪೂರ್ಣ ನೆಲಕಚ್ಚಿದೆ.

    ಭಾರತ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಲ್ಲಿ ಸರ್ಕಾರ ನೀಡಿದ 20 ಲಕ್ಷ ರೂ. ಖರ್ಚು ಮಾಡಿ ವಾಹನ ಖರೀದಿ ಮಾಡಿದ್ದಷ್ಟೇ ಜಿಪಂ ಸಾಧನೆಯಾಗಿದ್ದು, ಜಿಲ್ಲೆಯಲ್ಲಿ ಎಲ್ಲಿಯೂ ಕಸ ಸಂಗ್ರಹಿಸುವ ಕೆಲಸವಾಗಿಲ್ಲ. ಪೂರ್ವ ತಯಾರಿ ಇಲ್ಲದೆ ಯೋಜನೆಯಲ್ಲಿರುವ ಹಣ ಬಳಸಿಕೊಳ್ಳಲಷ್ಟೆ ನಿರ್ಧಾರ ತೆಗೆದುಕೊಂಡು ತರಾತುರಿಯಲ್ಲಿ ಆರಂಭಿಸಿದ್ದ ಯೋಜನೆ ವಿಫಲವಾಗಿದ್ದರೂ ಜಿಪಂ ಕಾಗದದಲ್ಲಷ್ಟೇ ಸಾಧನೆ ಹೊಗಳಿಕೊಂಡಿದೆ.

    ಜಿಲ್ಲೆಯಲ್ಲಿ 330 ಗ್ರಾಪಂಗಳಿದ್ದು ಸರ್ಕಾರ 75 ಗ್ರಾಪಂಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಕ್ರಿಯಾ ಯೋಜನೆ (ಡಿಪಿಆರ್) ರೂಪಿಸಿ ಅನುಮೋದನೆ ನೀಡಿದೆ. ಆದರೂ, 37 ಗ್ರಾಪಂಗಳಲ್ಲಿ ಮಾತ್ರ ಅದರ ಅನುಷ್ಠಾನಕ್ಕೆ ಮುಂದಾಗಿದ್ದು, ಅದರಲ್ಲಿಯೂ ಕೆಲ ಗ್ರಾಪಂಗಳು ಇದಕ್ಕೆ ಒಪ್ಪಿಗೆಯನ್ನೇ ಸೂಚಿಸಿಲ್ಲ. ಆದರೂ, 37 ಗ್ರಾಪಂಗಳಲ್ಲಿಯೂ ಕಸ ಸಂಗ್ರಹಿಸಲಾಗುತ್ತಿದೆ ಎಂದು ಸುಳ್ಳು ಮಾಹಿತಿ ಜಿಪಂ ಕಚೇರಿಯಿಂದಲೇ ಬಿಡುಗಡೆಯಾಗಿದೆ. ತಿಪಟೂರು ತಾಲೂಕು ಬಿಳಿಗೆರೆ ಮತ್ತಿತರ ಬೆರಳೆಣಿಕೆ ಗ್ರಾಪಂಗಳನ್ನು ಬಿಟ್ಟು ಉಳಿದೆಲ್ಲೆಡೆ ವಾಹನ ಖರೀದಿಸಿದ್ದೇ ಈವರೆಗಿನ ಸಾಧನೆಯಾಗಿದೆ.

    ಘಟಕ ಸ್ಥಾಪನೆಗೆ ಪೂರ್ವದಲ್ಲಿ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಇತಿಹಾಸ, ಸ್ಥಳ, ಹಳ್ಳಿಗಳ ಸಂಖ್ಯೆ, ಜನಸಂಖ್ಯೆ ಮಾಹಿತಿ ಸಂಗ್ರಹಿಸದೆ, ಘನತ್ಯಾಜ್ಯ ನಿರ್ವಹಣಾ ಮಾಹಿತಿ ಜನರಿಗೆ ತಿಳಿಸದೆ, ಯೋಜನೆ ರೂಪಿಸಲಾಗಿದೆ. ತ್ಯಾಜ್ಯದ ಹರಿವಿನ ಸಮೀಕ್ಷೆ, ಸಮರ್ಪಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಚೌಕಟ್ಟು ರಚನೆಯಾಗದೆ ಘಟಕ ಸ್ಥಾಪನೆಗೆ ಮುಂದಾಗಿದ್ದು, ಕಾರ್ಯಕ್ರಮ ಸಂಪೂರ್ಣ ವಿಫಲವಾಗಲು ಕಾರಣವಾಗಿದೆ.

    10ಕೋಟಿ ರೂ. ನೀರಿನಲ್ಲಿ ಹೋಮ!: 10 ತಾಲೂಕುಗಳಲ್ಲಿ ತಲಾ 5ರಂತೆ 50 ಗ್ರಾಪಂಗಳಲ್ಲಿ ಪ್ರಾಯೋಗಿಕವಾಗಿ ತ್ಯಾಜ್ಯ ಘಟಕ ಸ್ಥಾಪಿಸುವ ಜಿಪಂ ಅವೈಜ್ಞಾನಿಕ ನಿರ್ಧಾರಕ್ಕೆ 10 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿಗೆ ಬಳಕೆಯಾಗಬೇಕಿದ್ದ ಹಣ ಅಧಿಕಾರಿಗಳ ಗುರಿಯಿಲ್ಲದ ಸಲಹೆಗೆ ವ್ಯಯವಾಗುವಂತಾಗಿದೆ. ಈ ಯೋಜನೆ ಬಗ್ಗೆ ಮೊದಲೇ ಅರಿತಿರುವ 13 ಗ್ರಾಪಂಗಳು ಇದಕ್ಕೆ ಅನುಮೋದನೆಯನ್ನೇ ನೀಡಿಲ್ಲ. ಹಾಗಾಗಿ, ಈಗ ಆಡಳಿತಾಧಿಕಾರಿ ಮೂಲಕ ಅದಕ್ಕೆ ಅನುಮೋದನೆ ಪಡೆದು ಹಣ ಖರ್ಚು ಮಾಡಿ ಲೆಕ್ಕ ತೋರಿಸುವ ತರಾತುರಿ ಜಿಪಂ ಆಡಳಿತದ್ದು.

    ಜಿಲ್ಲಾ ಉಸ್ತುವಾರಿ ಸಚಿವರಿಗೆ ತಪ್ಪು ಮಾಹಿತಿ!: ಮೇ 30ರಂದು ನಡೆದ 4ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಪಂ ಸ್ವಚ್ಛ ಭಾರತ್ ಮಿಷತ್ (ಗ್ರಾ) ಯೋಜನೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಜಿಲ್ಲೆಯ 37 ಗ್ರಾಪಂಗಳಲ್ಲಿ ಮನೆಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ ಎಂದು ಲಿಖಿತವಾಗಿ ಮಾಹಿತಿ ನೀಡಿದೆ. ಆದರೆ, ವಾಸ್ತವವಾಗಿ ಯಾವ ಗ್ರಾಪಂನಲ್ಲಿಯೂ ಕಸ ಸಂಗ್ರಹಿಸುತ್ತಿರುವ ಬಗ್ಗೆ ಸ್ಥಳೀಯರಿಗೆ ಮಾಹಿತಿಯೇ ಇಲ್ಲ. ಜಿಪಂ ನೀಡಿದ ಸುಳ್ಳು ಮಾಹಿತಿಯನ್ನೇ ನಂಬಿರುವ ಸಚಿವರು ವಸ್ತುನಿಷ್ಠ ವರದಿ ಪಡೆಯಲು ಉನ್ನತ ಮಟ್ಟದ ತನಿಖೆ ನಡೆಸುವ ಅವಶ್ಯಕತೆಯಿದೆ.

    ಬಿಳಿಗೆರೆ ಗ್ರಾಪಂನಲ್ಲಿ ಆಟೋ ನೀಡಿದ್ದಷ್ಟೇ ಸಾಧನೆಯಾಗಿದೆ. ಈ ಆಟೋ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಅಂಗಡಿಗಳಿಂದ ಕಸ ಸಂಗ್ರಹಿಸಿ ರಸ್ತೆ ಬದಿಗೆ ಸುರಿಯುತ್ತಿದೆ. ವಿಲೇವಾರಿ ಘಟಕವೂ ಇಲ್ಲ, ಉಳಿದ ಹಳ್ಳಿಗಳಿಗೂ ಆಟೋ ದರ್ಶನವನ್ನೂ ನೀಡಿಲ್ಲ.
    ಸುರೇಶ್ ಬಿಳಿಗೆರೆ, ತಿಪಟೂರು ತಾಲೂಕು

    ರಾಜ್ಯದ ಕೆಲವು ಕಡೆ ಯಶಸ್ವಿಯಾಗಿರುವ ಮಾದರಿಯಲ್ಲಿ ಜಿಲ್ಲೆಯಲ್ಲಿಯೂ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗುತ್ತಿದೆ. ಕಸ ವಿಲೇವಾರಿ ಘಟಕ ಸ್ಥಾಪಿಸುವ ಕಾರ್ಯ ಪ್ರಗತಿಗೆ ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
    ಬಸನಗೌಡ
    ನೋಡಲ್ ಅಧಿಕಾರಿ, ಸ್ವಚ್ಛ ಭಾರತ್ ಮಿಷನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts