More

    ಯುಗಾದಿ ರಾಶಿಫಲ; ಯಾರಿಗೆ ಏನು?: ಶ್ರೀ ಶೋಭಾಕೃತ ಸಂವತ್ಸರದ ವರ್ಷ ಭವಿಷ್ಯ

    ಯುಗಾದಿ ರಾಶಿಫಲ; ಯಾರಿಗೆ ಏನು?: ಶ್ರೀ ಶೋಭಾಕೃತ ಸಂವತ್ಸರದ ವರ್ಷ ಭವಿಷ್ಯಮೇಷ: ಈ ಸಂವತ್ಸರ ನಿಮ್ಮ ಪಾಲಿಗೆ ಬಹುತೇಕ ಯಶಸ್ಸನ್ನು ತಂದುಕೊಡಲಿದೆ. ನಿರೀಕ್ಷೆಯಲ್ಲಿನ ಬಹುತೇಕ ಕೆಲಸಗಳು ನೆರವೇರುತ್ತವೆ. ವಿದ್ಯಾರ್ಥಿಗಳಿಗೆ, ವ್ಯಾಪಾರಿ ವರ್ಗದವರಿಗೆ ಮತ್ತು ಸ್ವಂತ ಉದ್ದಿಮೆದಾರರಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಶೀಘ್ರವಾಗಿ ಲಭಿಸುವುದು. ಅಡೆತಡೆಗಳು ಹೆಚ್ಚೇನೂ ಇಲ್ಲ. ಆದರೆ ಆರೋಗ್ಯದ ವಿಚಾರದಲ್ಲಿ ಮಾತ್ರ ತುಂಬ ಜಾಗ್ರತೆ ಬೇಕು. ಅಲ್ಲದೆ, ಆಲಸ್ಯ ಭಾವದಿಂದ ಹೊರಬಂದಷ್ಟೂ ಒಳ್ಳೆಯದು. ಏಕೆಂದರೆ ನಿಮ್ಮ ಸೋಮಾರಿತನದಿಂದಾಗಿ, ಬಂದ ಅವಕಾಶಗಳು ಪರರ ಪಾಲಾಗಬಹುದು ಎಂಬ ಎಚ್ಚರಿಕೆಯನ್ನು ಈ ಸಂವತ್ಸರ ನಿಮಗೆ ನೀಡುತ್ತಿದೆ. ದಾನ ಧರ್ಮಗಳಿಂದ ಪುಣ್ಯಫಲ ಹೊಂದುವಿರಿ. ಶುಭಸಂಖ್ಯೆ: 1, 2, 9

    ವೃಷಭ: ಈ ಸಂವತ್ಸರದಲ್ಲಿ ಮಿಶ್ರಫಲಗಳನ್ನು ಅನುಭವಿಸುವಿರಿ. ಹಿತಶತ್ರುಗಳ ತೊಂದರೆಯಿಂದ ನಿಮ್ಮ ಯೋಜನೆಗಳು ವಿಫಲಗೊಳ್ಳುವ ಸಾಧ್ಯತೆಗಳು ಜಾಸ್ತಿ ಇವೆ. ಸದಾ ಸಮಾಧಾನ ಚಿತ್ತರಾಗಿರಿ. ಇಷ್ಟದೇವರ ಸ್ಮರಣೆಯನ್ನು ನಿತ್ಯವೂ ಭಕ್ತಿಯಿಂದ ಮಾಡಿ. ನೀವು ದುಡಿಯುವುದು ಎಷ್ಟು ಮುಖ್ಯವೋ ಗಳಿಸಿದ ಸಂಪತ್ತನ್ನು ಕಾಪಾಡುವುದು ಕೂಡ ಅತಿ ಮುಖ್ಯ. ವಿದ್ಯಾರ್ಥಿಗಳಿಗೆ, ರೈತರಿಗೆ, ವ್ಯಾಪಾರಸ್ಥರಿಗೆ, ವೃತ್ತಿಪರರಿಗೆ ಮಿಶ್ರಫಲಗಳಿರುತ್ತವೆ. ವರ್ಷಾಂತ್ಯದಲ್ಲಿ ಶುಭ ಸಮಾರಂಭಗಳಲ್ಲಿ ಹೆಚ್ಚು ಭಾಗಿಯಾಗುವ ಅವಕಾಶ. ಮಾರ್ಗಶಿರ ಮಾಸದ ನಂತರ ವಿಶೇಷ ಧನಲಾಭವಿದೆ. ಶುಭ ಪ್ರಯಾಣ ಯೋಗಗಳಿಂದ ಸಂತಸ. ಶುಭಸಂಖ್ಯೆ: 8, 2, 3

    ಮಿಥುನ: ನೀವು ಕೈಗೆತ್ತಿಕೊಂಡ ಕೆಲವು ಕೆಲಸಗಳು ಬಹಳ ಬೇಗ ಮುಗಿದು ಸಾರ್ಥಕತೆ ಹೊಂದುವಿರಿ. ಧನ ಸಂಪಾದನೆಯ ಮಾರ್ಗ ಬದಲಾಗಲಿದೆ. ಗೆಳೆಯರೆನಿಸಿಕೊಂಡವರೇ ಅನಗತ್ಯವಾಗಿ ತೊಂದರೆ ಕೊಟ್ಟ ಪರಿಣಾಮ, ಆರ್ಥಿಕ ಹಿನ್ನಡೆ ಸಂಭವ. ಜಾಣ್ಮೆಯಿಂದ ನಿಭಾಯಿಸಿ. ಉನ್ನತ ಹುದ್ದೆ ಹೊಂದಿದವರು ಕೆಲಸ ಬಿಟ್ಟು ಸ್ವಂತ ಉದ್ಯೋಗ ಮಾಡುವ ಸಾಧ್ಯತೆ. ಈ ರಾಶಿಯ ಎಲ್ಲರಿಗೂ ಮತ್ತು ಉದ್ಯೋಗದಲ್ಲಿರುವವರಿಗೂ ಯಶಸ್ಸು ನಿರಂತರವಾಗಿರುವ ಸಂವತ್ಸರ ಇದಾಗಿದೆ. ಕಾರ್ತಿಕ ಮಾಸದ ನಂತರ ಸ್ವಲ್ಪ ಪ್ರಮಾಣದ ಆರ್ಥಿಕ ಕುಸಿತ ಕಾಣಲಿದ್ದೀರಿ. ಧೃತಿಗೆಡುವ ಅಗತ್ಯ ಇಲ್ಲ. ಸತತ ದೇವತಾರಾಧನೆ ನಡೆದು ಒತ್ತಡದ ಜೀವನದಿಂದ ಹೊರಬರಲಿದ್ದೀರಿ. ಶುಭಸಂಖ್ಯೆ: 6, 3, 9

    ಕರ್ಕಾಟಕ: ನಿಮ್ಮ ಪ್ರಯತ್ನಕ್ಕೆ ತಕ್ಕುದಾದ ಪ್ರತಿಫಲ ಖಂಡಿತ ಸಿಗಲಿದೆ. ದೂರದೃಷ್ಟಿ ಯೋಜನೆಗಳ ಪ್ರಯತ್ನ ಫಲಿಸಲಿದೆ. ಕರಕುಶಲ ವರ್ಗದವರು, ವೃತ್ತಿಪರರು, ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ತಕ್ಕ ಪ್ರತಿಫಲ ದೊರೆಯಲಿದೆ. ಯಾವುದೇ ರೀತಿಯ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡದೆ ವೈದ್ಯರ ಸಲಹೆ ಪಡೆದು ಮುನ್ನಡೆಯಬೇಕು. ಇಷ್ಟದೇವರನ್ನು ಭಕ್ತಿಯಿಂದ ಭಜಿಸಿದರೆ ಮಾನಸಿಕ ಸಮಾಧಾನವೂ ಇರಲಿದೆ. ಒಟ್ಟಾರೆ ಈ ಸಂವತ್ಸರದುದ್ದಕ್ಕೂ ಸಮತೋಲನದ ಫಲಿತಾಂಶ ನಿಮ್ಮದಾಗಲಿದೆ. ಸಂವತ್ಸರದ ಅಂತ್ಯದಲ್ಲಿ ಅನಿರೀಕ್ಷಿತವಾಗಿ ಅಪಾರ ಧನಪ್ರಾಪ್ತಿ ಯೋಗವೂ ಇದೆ. ಶುಭಸಂಖ್ಯೆ: 1, 9, 5

    ಸಿಂಹ: ಹೊಸ ಸಂವತ್ಸರದಲ್ಲಿ ನಿರೀಕ್ಷೆಗೆ ತಕ್ಕ ಫಲ ದೊರೆತು ಸಂತುಷ್ಟರಾಗುವಿರಿ. ಕೃಷಿಕರಿಗೆ, ವ್ಯಾಪಾರಸ್ಥರಿಗೆ ನಿರೀಕ್ಷಿತ ಯಶಸ್ಸು. ಸಮಾಜದಲ್ಲಿ ಉನ್ನತ ಸ್ಥಾನಮಾನ, ಗೌರವ ಪ್ರಾಪ್ತಿ. ಗೆಳೆಯರು, ಬಂಧುಗಳು ಮೋಸ ಮಾಡುವ ಸಾಧ್ಯತೆ ಇದೆ. ಸದಾ ಒಂದು ಕಣ್ಣು ಇಟ್ಟಿರಿ. ಆರೋಗ್ಯದ ಕಡೆ ಗಮನ ಕೊಡಲೇಬೇಕು. ಕಾಲಕಾಲಕ್ಕೆ ವೈದ್ಯರ ಸಲಹೆ ಪಡೆಯಿರಿ. ವ್ಯಾಪಾರಸ್ಥರ ವ್ಯಾಪಾರ ವಿಸ್ತರಣೆಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ವಿದೇಶ ಅಧ್ಯಯನಕ್ಕೆ ಅವಕಾಶ ದೊರೆಯಬಹುದು. ನಿಮ್ಮನ್ನು ಅವಲಂಬಿಸುವವರ ಸಂಖ್ಯೆ ಜಾಸ್ತಿ ಆಗುವುದು. ಕಳೆದ ವರ್ಷಕ್ಕಿಂತ ಒಟ್ಟಾರೆಯಾಗಿ ಉನ್ನತಿ ಹೊಂದುವಿರಿ. ಶುಭಸಂಖ್ಯೆ: 6, 3, 2

    ಕನ್ಯಾ: ನೀವು ಹಿಂದೆ ಮಾಡಿದ ಪ್ರಯತ್ನಗಳಿಗೆ ಸ್ವಲ್ಪಮಟ್ಟಿಗೆ ಫಲಿತಾಂಶಗಳು ಈ ಸಂವತ್ಸರದಲ್ಲಿ ನಿಧಾನವಾಗಿ ಕಾಣಲು ಆರಂಭಿಸುತ್ತವೆ. ಕೆಲವೊಮ್ಮೆ ತಾನೊಂದು ಬಗೆದರೆ ದೈವ ಬೇರೊಂದು ಬಗೆದಂತೆ ಎನ್ನುವ ಅನುಭವ ನೀಡುವಂಥ ಫಲವೂ ಸಿಗಬಹುದು. ಕಚೇರಿಯಲ್ಲಿ ಅನವಶ್ಯಕ ಕಿರುಕುಳ ಎದುರಿಸಬೇಕಾಗುವುದು. ಬಂಧುಬಾಂಧವರಿಂದ ಅವಮಾನ ಸಾಧ್ಯತೆ. ವ್ಯಾಪಾರಸ್ಥರಿಗೆ ಮಧ್ಯಮ ರೀತಿಯ ಫಲಗಳು ಲಭಿಸುತ್ತವೆ. ಬಹುಕಾಲದಿಂದ ಶತ್ರುಗಳಾಗಿದ್ದವರು ಮಿತ್ರರಾಗುವರು. ಕೃಷಿಕ್ಷೇತ್ರದಲ್ಲಿ ಉತ್ತಮ ಇಳುವರಿ ದೊರೆತು ಲಾಭ ಸಿಗಲಿದೆ. ಬಹುಕಾಲದಿಂದ ಅಂದುಕೊಂಡ ಕೆಲಸದಲ್ಲಿ ಅನಿರೀಕ್ಷಿತ ತಿರುವು ದೊರೆಯುವುದು. ಶುಭಸಂಖ್ಯೆ: 8, 2, 5

    ತುಲಾ: ಧೈರ್ಯದಿಂದ ಮುನ್ನುಗ್ಗುತ್ತಿರುವ ನಿಮಗೆ ಕೆಲವೊಮ್ಮೆ ನಿಮ್ಮ ನಿರ್ಧಾರಗಳೇ ತೊಂದರೆಗೆ ಸಿಲುಕುವಂತೆ ಮಾಡುತ್ತವೆೆ. ಹೀಗಾಗಿ ಸಾರಾಸಾರ ಯೋಚಿಸಿ. ಈ ವರ್ಷ ಸುಖ- ಕಷ್ಟ, ಲಾಭ- ನಷ್ಟಗಳು ಸಮಾನವಾಗಿ ತೂಗಲಿವೆ. ಪೂರ್ವಯೋಜಿತ ಕೆಲಸಗಳು ಸಂವತ್ಸರದ ಆರಂಭದಲ್ಲಿ ಮಂದಗತಿಯಲ್ಲಿ ಸಾಗುತ್ತವೆ. ವರ್ಷದ ಮಧ್ಯಭಾಗದಲ್ಲಿ ಉತ್ತಮ ಪ್ರಗತಿ ಇದೆಯಾದರೂ ಚೋರ ಭಯವೂ ಇದೆ. ಅಪಘಾತ ಭಯದಿಂದ ಪಾರಾಗಲು ಶಕ್ತಿಯನ್ನು ಆರಾಧಿಸಿ. ಕುಟುಂಬ ಸದಸ್ಯರ ಕೆಟ್ಟ ನಿರ್ಧಾರದಿಂದ ಹಿನ್ನಡೆ ಸಾಧ್ಯತೆ. ಭಾದ್ರಪದ ಮಾಸದ ನಂತರ ಹೊಸ ಯೋಜನೆ, ಉದ್ಯಮ ಪ್ರಾರಂಭಿಸಿ. ವಿದ್ಯಾರ್ಥಿಗಳು, ವೃತ್ತಿಪರರು, ವ್ಯಾಪಾರಸ್ಥರಿಗೆ ನಿರೀಕ್ಷಿತ ಬಲ ದೊರೆಯಲಿದೆ. ಶುಭಸಂಖ್ಯೆ: 5, 7, 6

    ವೃಶ್ಚಿಕ: ಈ ಸಂವತ್ಸರದಲ್ಲಿ ನೀವು ಹೆಚ್ಚು ಅಧ್ಯಾತ್ಮ ಚಿಂತನೆ, ಯೋಗ, ಧ್ಯಾನ ಅಳವಡಿಸಿಕೊಂಡು ಒತ್ತಡದಿಂದ ಹೊರಬನ್ನಿ. ಕೆಲವು ಆತುರದ ನಿರ್ಣಯಗಳು ಕಷ್ಟಕ್ಕೆ ಕಾರಣ ಆಗಲಿವೆೆ. ಹೀಗಾಗಿ ಯೋಚಿಸಿ ಮುನ್ನಡೆಯಿರಿ. ಆತ್ಮೀಯರೇ ವಂಚಿಸುವ ಸಾಧ್ಯತೆ. ಆದರೂ ಅಪರಿಚಿತರ ಸಹಕಾರ ಒದಗಲಿದೆ. ಆರೋಗ್ಯದಲ್ಲಿ ಅನಿರೀಕ್ಷಿತ ಏರುಪೇರು. ಉದ್ಯೋಗದಲ್ಲಿ ನಷ್ಟ ವಿಚಲಿತರಾಗುವಂತೆ ಮಾಡುತ್ತದೆ. ವಿದ್ಯಾರ್ಥಿಗಳು, ವೃತ್ತಿಪರರಿಗೆ ಉತ್ತಮ ಫಲಿತಾಂಶವಿದೆ. ದೀಪಾವಳಿ ನಂತರ ಹೊಸ ಯೋಜನೆಗಳಿಗೆ ಚಾಲನೆ. ಕೃಷಿ ಉತ್ಪನ್ನಗಳು ಹೆಚ್ಚು ಮಾರಾಟವಾಗಿ ಉತ್ತಮ ಲಾಭ ಸಿಗಲಿದೆ. ಕುಲದೇವರ ಆರಾಧನೆಯಿಂದ ಯಶಸ್ಸು. ಶುಭಸಂಖ್ಯೆ: 8, 4, 2

    ಧನು: ಚಂಚಲತೆಯನ್ನು ಸೃಷ್ಟಿಸದಿರುವಂತಹ ಮನೋನಿಗ್ರಹ ಈ ರಾಶಿಯ ಎಲ್ಲರಿಗೂ ಈ ಸಂವತ್ಸರದಲ್ಲಿ ಅತಿ ಮುಖ್ಯ. ಧ್ಯಾನ, ಪ್ರಾಣಾಯಾಮದಿಂದ ಏಕಾಗ್ರತೆ ಹಾಗೂ ಸಂಯಮ ಪಡೆದುಕೊಳ್ಳಲು ಪ್ರಯತ್ನಿಸಿ. ಕೆಲವೊಮ್ಮೆ ಅಸಾಧ್ಯ ಕೆಲಸಗಳನ್ನು ನಿರ್ವಹಿಸಿ ಪ್ರಶಂಸೆ ಪಡೆದುಕೊಳ್ಳುವಿರಿ. ಕೃಷಿ, ಕೈಗಾರಿಕೆ, ವ್ಯಾಪಾರ, ಸ್ವಂತ ಉದ್ಯೋಗದಲ್ಲಿ ಯಶವಿದೆ. ನೌಕರರು ಮೇಲಧಿಕಾರಿಗಳಿಂದ ಪ್ರಶಂಸೆ ಗಳಿಸುವರು. ಬಂಧುಮಿತ್ರರ ಸಮಾಗಮ ಸಂತಸ ಪಸರಿಸಲಿದೆ. ಪದೋನ್ನತಿ ಅವಕಾಶವೂ ಸ್ಪಷ್ಟವಾಗಿ ಇದೆ. ತೀರ್ಥಯಾತ್ರೆ, ವಿದೇಶ ಪ್ರವಾಸ ಯೋಗಗಳಿವೆ. ಸಂವತ್ಸರದ ಕೊನೆಯಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಫಲಿತಾಂಶಗಳು ದೊರೆಯುತ್ತವೆ. ಒಟ್ಟಾರೆಯಾಗಿ ಧನುರಾಶಿಯವರಿಗೆ ಧನಾತ್ಮಕ ಫಲಗಳೇ ಜಾಸ್ತಿ. ಶುಭಸಂಖ್ಯೆ: 1, 9, 5

    ಮಕರ: ಗ್ರಹಗಳ ಸ್ಥಾನಪಲ್ಲಟವು ಋಣಾತ್ಮಕ ಫಲಿತಾಂಶ ಕೊಡಲಿದೆ. ದೈವಬಲ ಸಂಪಾದಿಸಲು ಇಂದಿನಿಂದಲೇ ಮುಂದಾಗಿ. ದೈವಬಲವಿದ್ದರೆ ಎಷ್ಟೋ ಕಷ್ಟಗಳು ಕಳೆದು ನಿರಾಳವಾಗುವುದು. ಹೆಚ್ಚು ಶ್ರಮ ವಹಿಸಿ ಮಾಡಿದ ಕೆಲಸಗಳಲ್ಲಿ ಒಳ್ಳೆಯ ಫಲಿತಾಂಶವೇ ದೊರೆಯಲಿದೆ. ನಿರೀಕ್ಷಿತ ಯೋಜನೆಗಳು ಯಶದ ಹಾದಿಯಲ್ಲಿ ಸಾಗಲಿವೆ. ವ್ಯಾಪಾರ ವಹಿವಾಟಿನಲ್ಲಿ ಸ್ಪರ್ಧೆ ಎದುರಿಸಲು ಶ್ರಮ ಪಡಬೇಕಾಗುತ್ತದೆ. ನೀರಿನಂತೆ ಹಣ ಖರ್ಚಾದರೂ ಆದಾಯದ ಮೂಲವೂ ಪ್ರಬಲವಾಗಿರುವುದರಿಂದ ಯೋಚನೆ ಮಾಡಬೇಡಿ. ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಿ. ದುಡುಕಿನ ನಿರ್ಧಾರ ಬೇಡ. ಒಟ್ಟಾರೆಯಾಗಿ ಮಿಶ್ರಫಲಗಳು ಹೆಚ್ಚಾಗಿ ಕಂಡುಬರುತ್ತವೆ. ಶುಭಸಂಖ್ಯೆ: 4, 6, 9

    ಕುಂಭ: ಈ ವರ್ಷ ವಿಶೇಷ ಫಲಗಳು ಉತ್ತಮವಾಗಿ ಸಿಗದಿದ್ದರೂ ದೇವತಾರಾಧನೆ ನಿಮ್ಮ ಕಷ್ಟಗಳನ್ನು ಪರಿಹರಿಸುತ್ತದೆ. ಗ್ರಹಗಳ ಬದಲಾವಣೆ, ಚಲನೆಯಿಂದ ಅನಿರೀಕ್ಷಿತ ಫಲಿತಾಂಶಗಳು ಸಿಗಲಿವೆ. ಪ್ರಯತ್ನದಲ್ಲಿ ಉನ್ನತಿಯತ್ತ ಸಾಗಿದರೂ ನಿಮಗಿಂತ ಕೆಳಗಿರುವವರನ್ನು ತಿರಸ್ಕಾರದಿಂದ ಕಾಣಬೇಡಿ. ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ. ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಿ. ಇಲ್ಲವಾದರೆ ಅದರಿಂದಾಗಿಯೇ ಸಿಗುವ ಯಶಸ್ಸಿನ ಸಂತಸದಿಂದ ವಂಚಿತರಾಗುವಿರಿ. ಯಶಸ್ಸಿನ ತುದಿಗೆ ತಲುಪುವಷ್ಟರಲ್ಲಿ ಅವಕಾಶಗಳು ಬೇರೆಯವರ ಪಾಲಾಗುವ ಸಾಧ್ಯತೆ ಇರುತ್ತದೆ. ಆದರೂ ಸಂವತ್ಸರದ ಅಂತ್ಯದಲ್ಲಿ ಶುಭವಾರ್ತೆಗಳು ನಿಮ್ಮನ್ನು ಯಶಸ್ಸಿನ ಪಥದತ್ತ ಕೊಂಡೊಯ್ಯಲಿವೆ. ಶುಭಸಂಖ್ಯೆ: 5, 1, 3

    ಮೀನ: ಸಾಡೆಸಾತಿಯ ಪ್ರಭಾವ ಸ್ವಲ್ಪಮಟ್ಟಿಗೆ ತೊಂದರೆ ಕೊಟ್ಟರೂ ದೈವೀಕೃಪೆಯಿಂದ ಸಮಸ್ಯೆಗಳು ನಿವಾರಣೆಯಾಗುವವು. ಆರೋಗ್ಯದ ವಿಚಾರದಲ್ಲಿ ವೈದ್ಯರ ಸಲಹೆ ಪಡೆಯಿರಿ. ವಿದ್ಯಾಭ್ಯಾಸದ ಆಯ್ಕೆಗಳಲ್ಲಿ ಗೊಂದಲಗೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆ ಇದೆ. ಆದರೆ ಇದನ್ನೆಲ್ಲ ಮೆಟ್ಟಿ ನಿಲ್ಲುವ ಸದೃಢ ಯೋಗಗಳು ನಿಮ್ಮನ್ನು ರಕ್ಷಿಸುತ್ತವೆ. ನಿಮ್ಮ ಪ್ರಾಮಾಣಿಕತೆ, ವಿಷಯಜ್ಞಾನದಿಂದ ಉತ್ತಮ ಅವಕಾಶಗಳು ಲಭಿಸಲಿವೆ. ಯೋಜಿತ ಕೆಲಸಗಳು ವಿಳಂಬವಾಗುತ್ತವೆ. ಎಲ್ಲವನ್ನೂ ನಿಭಾಯಿಸುವ ಬುದ್ಧಿ, ಸಾಮರ್ಥ್ಯ ಜನ್ಮತಃ ನಿಮಗಿದೆ. ಅಲ್ಲದೆ, ಸಕಾಲದಲ್ಲಿ ಅನ್ಯರ ನೆರವು ದೊರೆತು ಯಶಸ್ಸು ಕಾಣುವಿರಿ. ಕುಲದೇವರ ಆರಾಧನೆ ಮಾಡಿ. ಶುಭಸಂಖ್ಯೆ: 2, 4, 8

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts