More

    ಲಾಕ್‌ಡೌನ್ ಬಿಡುವು ಶ್ರಮಸೇವೆಗೆ ಒಲವು

    ಮಂಗಳೂರು: ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ದಿನವಿಡೀ ವಿರಾಮ. ಹೊರಗೆ ಸುತ್ತಾಡುವಂತಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಯುವಜನಾಂಗ ಶ್ರಮದಾನದಂಥ ಸಮಾಜಮುಖಿ ಕೆಲಸಗಳಲ್ಲಿ ಒಲವು ತೋರುತ್ತಿದ್ದಾರೆ.

    ಅವಿಭಜಿತ ದ.ಕ ಜಿಲ್ಲೆಯ ಹಲವಾರು ಸಂಘ, ಸಂಸ್ಥೆಗಳು ಕೋವಿಡ್ ಸಂಕಷ್ಟದ ಸಂದರ್ಭ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಸಮಯದ ಸದುಪಯೋಗ ಜತೆ ಧನ್ಯತಾ ಭಾವ ಪಡೆಯುವ ಕಾರ್ಯಕ್ಕೆ ಜನಮನ್ನಣೆ ದೊರೆಯುತ್ತಿದೆ. ಸ್ವಚ್ಛತೆ, ಹೂಳೆತ್ತುವ ಕಾಮಗಾರಿ, ರಸ್ತೆ, ಚರಂಡಿ ನಿರ್ಮಾಣ, ಮನೆ ದುರಸ್ತಿ ಮತ್ತಿತರ ಕೆಲಸಗಳಲ್ಲಿ ತೊಡಗಿಸಿಕೊಂಡು ಸಂಘಟನೆಯ ಶಕ್ತಿಯನ್ನು ಸಾರಿ ಹೇಳುತ್ತಿದ್ದಾರೆ.

    ಜಾಲತಾಣದಲ್ಲೇ ಚರ್ಚೆ, ಮಾಹಿತಿ: ಮಾಡಬೇಕಿರುವ ಕಾರ್ಯ, ಯೋಜನೆ, ವೆಚ್ಚದ ಬಗ್ಗೆ ಸಂಘಟನೆ ಸದಸ್ಯರು ವಾಟ್ಸಾೃಪ್ ಮೂಲಕ ಚರ್ಚಿಸಿ ಶ್ರಮದಾನದ ದಿನ ನಿರ್ಧರಿಸುತ್ತಾರೆ. ಸಲಕರಣೆ ಸಂಗ್ರಹಿಸಿ ಅಂದು ಸ್ಥಳದಲ್ಲಿ ಸೇರುವ ಯುವಕರು ಜಾತಿ, ಧರ್ಮ ಲೆಕ್ಕಿಸದೆ ಬೆವರು ಹರಿಸಿ ದುಡಿದು ಯೋಜನೆ ಸಾಕಾರಗೊಳಿಸುತ್ತಿದ್ದಾರೆ.

    ಬಹುಕಾಲದ ಬೇಡಿಕೆ ಸಾಕಾರ: ಉಡುಪಿ ಮೂಲದ ಸತ್ಯೊದ ತುಳುವೆರ್ ಸಂಸ್ಥೆಯ ಉಡುಪಿ ಮತ್ತು ದ.ಕ ಜಿಲ್ಲೆಯ ಸುಮಾರು 15 ಸದಸ್ಯರು ಬೆಂಕಿಯಿಂದ ಹಾನಿಗೀಡಾದ ಗುರುಪುರ ಕುಕ್ಕುದಕಟ್ಟೆಯ ಕೃಷ್ಣ ಪೂಜಾರಿ ಎಂಬುವರ ಮನೆಯನ್ನು ಇತ್ತೀಚೆಗೆ ದುರಸ್ತಿ ಮಾಡಿಕೊಟ್ಟಿದ್ದಾರೆ. ಕಾಟಿಪಳ್ಳ ಕೋಡ್ದಬ್ಬು ದೈವಸ್ಥಾನ ಬಳಿಯ ಬಡ ಕುಟುಂಬದ ವೃದ್ಧ ಸಹೋದರಿಯರ ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ಕಾಟಿಪಳ್ಳ ಸೇವಾ ಚಾರಿಟೆಬಲ್ ಟ್ರಸ್ಟ್ ಸದಸ್ಯರು ಶ್ರಮದಾನ ಮೂಲಕ ಮರು ನಿರ್ಮಿಸಿದ್ದಾರೆ. ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿ 50 ವರ್ಷಗಳಿಂದ ರಸ್ತೆ ಸಂಪರ್ಕವಿಲ್ಲದ ಪ್ರದೇಶಕ್ಕೆ ಶ್ರೀರಾಮ ಗೆಳೆಯರ ಬಳಗ, ಬಿಜೆಪಿ ಬೆಂಬಲಿತ ಮುಂಡೂರು ಗ್ರಾಪಂ ಸದಸ್ಯರು ಕಾರ್ಯಕರ್ತರ ಸಹಕಾರದೊಂದಿಗೆ ಶ್ರಮದಾನ ಮೂಲಕ ರಸ್ತೆ ನಿರ್ಮಿಸಿದ್ದಾರೆ. ಕುಸಿತಕ್ಕೊಳಗಾದ ವಿಟ್ಲ ಪೆರುವಾಯಿ ಮುಚ್ಚಿರಬೆಟ್ಟು ನಿವಾಸಿ ಸಂಜೀವ ಮೊಗೇರರ ಮನೆ ದುರಸ್ತಿ ಪೆರುವಾಯಿ ಮುಸ್ಲಿಂ ಐಕ್ಯ ವೇದಿಕೆ ಸದಸ್ಯರು ಮಾಡಿದ್ದಾರೆ. ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಕುಸಿಯುವ ಸ್ಥಿತಿಯಲ್ಲಿರುವ ನಾಗಮಜ್ಜಿ ಎಂಬುವರ ಮನೆ ನಿರ್ಮಾಣಕ್ಕೆ ಮೊದಲ ಹೆಜ್ಜೆಯಾಗಿ ಹಳೇ ಮನೆಯ ತೆರವು ಕಾರ್ಯ ಶ್ರೀ ಲಕ್ಷ್ಮೀವಿಷ್ಣುಮೂರ್ತಿ ಸೇವಾ ಸಂಘ ಜಾರಂದಗುಡ್ಡೆ, ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ಅಬ್ಬೆಟ್ಟಿನ ಯುವಕರ ತಂಡದಿಂದ ನಡೆದಿದೆ. ತಲಪಾಡಿ ಜನತಾ ಕಾಲನಿಯ ಒಂಟಿ ಮಹಿಳೆಯಿದ್ದ ಮನೆಯನ್ನು ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ಹಾಗೂ ತಲಪಾಡಿ ಮಿತ್ರ ವೃಂದ ಗೇಮ್ಸ್ ಟೀಮ್ ಸದಸ್ಯರು ಸದಸ್ಯರು ನವೀಕರಿಸಿ ಕೊಟ್ಟಿದ್ದಾರೆ. ಇವು ಕೆಲವು ಉದಾಹರಣೆಗಳು. ಇಂಥ ಅನೇಕ ಕಾರ್ಯಗಳು ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿವೆ.

    ನರೇಗಾ ಕಾಮಗಾರಿಗೆ ಒತ್ತು: ಲಾಕ್‌ಡೌನ್ ಅವಧಿಯಲ್ಲಿ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಂಡಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಒಂದಷ್ಟು ಅಗತ್ಯ ಅಭಿವೃದ್ಧಿ ಕೆಲಸಗಳು ನಡೆಯಲು ಸಾಧ್ಯ. ಯುವಜನರು ಇಂಥ ಕೆಲಸದಲ್ಲಿ ತೊಡಗಿಸಿಕೊಂಡರೆ ವರಮಾನಕ್ಕೂ ದಾರಿಯಾಗುತ್ತದೆ. ಇತ್ತೀಚೆಗೆ ಗುರುಪುರ ಪಂಚಾಯಿತಿ ವ್ಯಾಪ್ತಿಯ ಮೂಳೂರು ಗ್ರಾಮದ ಕೊಳದಬದಿ-ಬಡಕರೆ ಎಂಬಲ್ಲಿನ ಪರಂಬೋಕು ತೋಡೊಂದರ ಹೂಳೆತ್ತುವ ಕಾರ್ಯವನ್ನು ನರೇಗಾ ಯೋಜನೆಯಡಿ ಸ್ಥಳೀಯ ಉತ್ಸಾಹಿ ಯುವಕ, ಯುವತಿಯರು ಮತ್ತು ಹಿರಿಯರು ನಡೆಸಿದ್ದಾರೆ.

    ಕರೊನಾದಂಥ ಸಂಕಷ್ಟದ ಸಮಯದಲ್ಲಿ ಯುವ ಸಮುದಾಯ, ಸಂಘ-ಸಂಸ್ಥೆಗಳು ಸ್ವಾರ್ಥ ಬಿಟ್ಟು ಭಾವೈಕ್ಯದಿಂದ ಕೆಲಸ ಮಾಡಿದೆ. ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ತಮ್ಮಿಂದೇನು ಸಹಾಯ ಮಾಡಲು ಸಾಧ್ಯ ಎನ್ನುವ ನೆಲೆಯಲ್ಲಿ ಯೋಚಿಸಿ ಕಾರ್ಯನಿರ್ವಹಿಸುವ ಮೂಲಕ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿದೆ.

    ಪ್ರತಿಮಾ ಹೆಬ್ಬಾರ್
    ಕಾರ್ಯದರ್ಶಿ ಜೇಸಿ ಮಂಗಳಗಂಗೋತ್ರಿ, ಕೊಣಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts