More

    ಯುವಕರು ಕೃಷಿ ಕ್ಷೇತ್ರಕ್ಕೆ ಬರಬೇಕು

    ಶಿರಸಿ: ಯುವಕರಲ್ಲಿ ನಗರಗಳ ಮೇಲಿನ ಆಕರ್ಷಣೆ ಹೆಚ್ಚಾಗಿರುವ ಕಾರಣದಿಂದ ಕೃಷಿ ಕ್ಷೇತ್ರ ಹಿನ್ನಡೆ ಸಾಧಿಸುತ್ತಿದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನೆಲೆಮಾಂವುಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
    ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಬುಧವಾರ ಕೃಷಿ ಜಯಂತಿಯನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.

    ಕೃಷಿ ಕ್ಷೇತ್ರದ ಸಮಸ್ಯೆ ನಿರ್ಮೂಲನೆಗಾಗಿ ಕೃಷಿ ಜಯಂತಿ

    ಕೃಷಿ ಕ್ಷೇತ್ರದಲ್ಲಿರುವ ಸಮಸ್ಯೆಗಳ ನಿರ್ಮೂಲನೆಗಾಗಿ ಹಾಗೂ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಸ್ವರ್ಣವಲ್ಲೀ ಮಠದಲ್ಲಿ ನರಸಿಂಹ ಜಯಂತಿ ಸಂದರ್ಭದಲ್ಲಿ ಕೃಷಿ ಜಯಂತಿ ಆಚರಿಸಲಾಗುತ್ತಿದೆ.

    ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತವಾಗಿವೆ ಎಂದರು.
    ಆರೋಗ್ಯ ಪೂರ್ಣ ಶರೀರ, ನೆಮ್ಮದಿಯ ಜೀವನಕ್ಕೆ ಕೃಷಿ ಚಟುವಟಿಕೆ ಬಹಳ ಮುಖ್ಯವಾಗಿದೆ.

    ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರು ನಗರದತ್ತ ಮುಖ ಮಾಡುತ್ತಿದ್ದಾರೆ. ಹಳ್ಳಿಗಳು ವೃದ್ಧಾಶ್ರಮಗಳಾಗಿ ಬದಲಾಗುತ್ತಿದೆ. ಕೃಷಿ ಕೇವಲ ವೃತ್ತಿಯಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಧರ್ಮವಾಗಿದೆ ಎಂದರು.

    ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶಿರ್ವಚನ ನೀಡಿ, ಕೃಷಿ, ತೋಟಗಾರಿಕೆ ಕ್ಷೇತ್ರದಿಂದ ಯುವ ಸಮುದಾಯ ಹಿಂದೆ ಸರಿಯುತ್ತಿದೆ.

    ಇದನ್ನು ತಡೆಗಟ್ಟಿ ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವುದೇ ಕೃಷಿ ಜಯಂತಿಯ ಉದ್ದೇಶವಾಗಿದೆ. ಕಳೆದ 15 ವರ್ಷಗಳಿಂದ ಶ್ರೀಮಠದಲ್ಲಿ ನಾವು ಕೃಷಿ ಜಯಂತಿ ಆಚರಿಸುತ್ತ ಬಂದಿದ್ದೇವೆ.

    ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಕೃಷಿಯನ್ನು ಮನಸ್ಸು ಕೊಟ್ಟು ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದರು.

    ಈ ವರ್ಷ ಅಡಕೆ ತೋಟಕ್ಕೆ ಭಾದಿಸಿದ ಎಲೆ ಚುಕ್ಕಿ ರೋಗ ಹಾಗೂ ಜಾನುವಾರುಗಳಿಗೆ ತಗುಲಿದ್ದ ಚರ್ಮಗಂಟು ರೋಗದ ಕುರಿತು ವಿಶೇಷ ಮಾಹಿತಿಯನ್ನು ತಜ್ಞರು ನೀಡುವರು.

    ಕೃಷಿ ಜತೆಗೆ ಹೈನುಗಾರಿಕೆಯಲ್ಲೂ ನಮ್ಮ ಜಿಲ್ಲೆ ಹಿಂದೆ ಸುರಿಯುತ್ತಿದೆ. ಈ ಹಿಂದೆ ಪ್ರತ್ಯೇಕ ಹಾಲು ಒಕ್ಕೂಟ ಬೇಕು ಎಂದು ಧ್ವನಿ ಎತ್ತಿದ್ದೇವು. ಆದರೆ, ಈಗ ಹಾಲಿನ ಉತ್ಪಾದನೆ ತೀರಾ ಕಡಿಮೆಯಾಗಿದೆ. ಆದ್ದರಿಂದ ಮನೆಗೊಂದಾದರೂ ಗೋವು ಇರಲಿ ಎಂದು ಕರೆ ಕೊಟ್ಟಿದ್ದೇವೆ ಎಂದು ಶ್ರೀಗಳು ಹೇಳಿದರು.

    ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕುಮಾರ ಕೊಡಗಿ, ವಿ.ಎನ್. ಹೆಗಡೆ ಬೊಮ್ನಳ್ಳಿ, ಜಿ.ವಿ. ಹೆಗಡೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts