More

    ಜೈನ ಸನ್ಯಾಸ ದೀಕ್ಷೆಗೆ ಯುವಕ ಸಮರ್ಥ

    ಹುಬ್ಬಳ್ಳಿ: ನಗರದ 17 ವರ್ಷದ ಯುವಕ ಸಮರ್ಥ ಬ್ರಿಜೇಶ ಭಾಗಮಾರ ಅವರು ಫೆ. 22ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್​ನಲ್ಲಿ ಪೂಜ್ಯ ಉತ್ತಮ ಮುನೀಜಿ ಅವರಿಂದ ಜೈನ ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ.

    ಇಲ್ಲಿಯ ಕೇಶ್ವಾಪುರದ ನಿವಾಸಿಯಾಗಿರುವ ಸಮರ್ಥ ಅವರು 10ನೇ ತರಗತಿವರೆಗೆ ವಿದ್ಯಾಭ್ಯಾಸ ಪೂರೈಸಿದ್ದಾರೆ. ಈಗಾಗಲೇ ಜೈನ ಮುನೀಜಿಯಾಗಿರುವ ಅಜ್ಜನಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆಯಲು ನಿರ್ಧರಿಸಿದ್ದಾರೆ. ಸಮರ್ಥ ಅವರ ಅಜ್ಜ ಗೌತಮಚಂದ್​ಜಿ ಭಾಗಮಾರ ಅವರು ತಮ್ಮ 62ನೇ ವಯಸ್ಸಿನಲ್ಲಿ 2014ನೇ ಇಸ್ವಿಯಲ್ಲಿ ಸನ್ಯಾಸ ದೀಕ್ಷೆ ಪಡೆದು ಗಜೇಂದ್ರ ಮುನೀಜಿಗಳಾಗಿ ಧರ್ಮ ಕಾರ್ಯದಲ್ಲಿ ತೊಡಗಿದ್ದಾರೆ. ಗಜೇಂದ್ರ ಮುನೀಜಿ ಅವರು ಪೂಜ್ಯ ಉತ್ತಮ ಮುನೀಜಿ ಅವರಿಂದ ಸನ್ಯಾಸ ದೀಕ್ಷೆ ಪಡೆದಿದ್ದು, ಸಮರ್ಥ ಕೂಡ ಇವರಿಂದಲೇ ದೀಕ್ಷೆ ಪಡೆಯಲಿದ್ದಾರೆ.

    ಭಾಗಮಾರ ಕುಟುಂಬದವರು ಮೂಲತಃ ರಾಜಸ್ತಾನದವರು. ನಂತರ ಗಜೇಂದ್ರಗಡದಲ್ಲಿ ಬಟ್ಟೆ ವ್ಯಾಪಾರ ಕೈಗೊಂಡರು. ಕಳೆದ 20 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ನೆಲೆಸಿ ಇದೇ ವ್ಯಾಪಾರ ಮುಂದುವರಿಸಿದ್ದಾರೆ. ಈ ಕುಟುಂಬಕ್ಕೆ ಸೇರಿದ ನಾಲ್ವರು ಈಗಾಗಲೇ ಜೈನ ಸನ್ಯಾಸಿಗಳಾಗಿ ದೀಕ್ಷೆ ಪಡೆದಿರುವುದು ಗಮನಾರ್ಹ ಸಂಗತಿಯಾಗಿದೆ. ಗಜೇಂದ್ರಮುನೀಜಿ ಅವರಿಗಿಂತ ಮೊದಲೇ ಇವರ ಮೂವರು ಮಕ್ಕಳು (ಒಬ್ಬ ಪುತ್ರ, ಇಬ್ಬರು ಪುತ್ರಿಯರು) 1997ರಲ್ಲಿಯೇ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ತಮ್ಮ 24ನೇ ವಯಸ್ಸಿನಲ್ಲಿ ಸಂದೇಶ ಮುನೀಜಿ, ತಮ್ಮ 21ನೇ ವಯಸ್ಸಿನಲ್ಲಿ ಪ್ರಜ್ಞಾಜಿ ಮಾತಾಜಿ, ತಮ್ಮ 19ನೇ ವಯಸ್ಸಿನಲ್ಲಿ ಸುಪ್ರಜ್ಞಾಜಿ ಮಾತಾಜಿ ಅವರು ಸನ್ಯಾಸ ದೀಕ್ಷೆ ಪಡೆದಿದ್ದಾರೆ. ಈಗ ಇವರ ನಂತರದ ತಲೆಮಾರಿನ ಸಮರ್ಥ ಅವರು ಸನ್ಯಾಸ ದೀಕ್ಷೆ ಸ್ವೀಕರಿಸುತ್ತಿರುವುದು ವಿಶೇಷವಾಗಿದೆ.

    ‘ನನ್ನ ಮಗನ ಮೇಲೆ ಆತನ ಮುತ್ತಜ್ಜ ಸುಖರಾಜಜಿ ಭಾಗಮಾರ ಅವರ ಧಾರ್ವಿುಕ ನಂಬಿಕೆಯ ಪ್ರಭಾವ ಇದೆ. ನನ್ನ ಮಗ ಸನ್ಯಾಸ ದೀಕ್ಷೆ ಪಡೆದು ಮುಕ್ತಿಯ ಮಾರ್ಗದತ್ತ ಸಾಗುವ ನಿರ್ಣಯ ಕೈಗೊಂಡಿರುವುದು ನಮ್ಮ ಕುಟುಂಬದವರೆಲ್ಲರಿಗೂ ಸಂತಸದ ಸಂಗತಿಯಾಗಿದೆ. ಮಗನ ಗುರಿ ಪೂರ್ತಿಯಾಗಲಿ’ ಎಂದು ಸಮರ್ಥ ಅವರ ತಂದೆ ಬ್ರಿಜೇಶ ಭಾಗಮಾರ ಹೇಳುತ್ತಾರೆ.

    ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದಿಂದ ಸನ್ಮಾನ: ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ವತಿಯಿಂದ ನಗರದ ಕಂಚಗಾರ ಗಲ್ಲಿಯ ಮಹಾವೀರ ಭವನದಲ್ಲಿ ಫೆ. 14ರಂದು ಬೆಳಗ್ಗೆ 9.30ಕ್ಕೆ ಸನ್ಮಾನ ಕಾರ್ಯಕ್ರಮ ಏರ್ಪಾಟಾಗಿದೆ. ಸನ್ಯಾಸ ದೀಕ್ಷೆ ಪಡೆಯುತ್ತಿರುವ ಸಮರ್ಥ ಹಾಗೂ ಅವರ ಕುಟುಂಬದವರಾದ ಪದ್ಮಾಬಾಯಿ ಗೌತಮಚಂದ ಭಾಗಮಾರ, ಸುಲೇಖಾ ಭಾಗಮಾರ, ಬ್ರಿಜೇಶ ಭಾಗಮಾರ ಅವರನ್ನು ಸನ್ಮಾನಿಸಲಾಗುತ್ತಿದೆ. ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆಯ ಚೇರ್ಮನ್ ಡಾ. ಬಿ.ಆರ್. ಪಾಟೀಲ, ಸಂಸ್ಕಾರ ಶಾಲೆಯ ಸಂಸ್ಥಾಪಕ ಮಹೇಂದ್ರ ಸಿಂಘಿ, ಹಿರಿಯ ವಕೀಲ ವಿ.ಜಿ. ಪಾಟೀಲ ಮೊದಲಾದವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts