More

    ದುರ್ಬಲ ಸ್ನಾಯುಗಳನ್ನು ಬಲಿಷ್ಠ ಪಡಿಸುವ ಯೋಗ

    ಕೋವಿಡ್-19 ಸೋಂಕಿನಿಂದಾಗಿ ನಾನು ಈಗ ಆನ್​ಲೈನ್​ನಲ್ಲಿಯೇ ಕಚೇರಿ ಕೆಲಸವನ್ನು ಮಾಡುತ್ತಿದ್ದೇನೆ. ಬೆನ್ನಿಗೆ ಆಯಾಸವಾಗುತ್ತದೆ. ಬೆನ್ನು ಬಲಗೊಳ್ಳಲು ಯಾವ ಯೋಗ ಸಹಕಾರಿ ಎಂಬುದನ್ನು ತಿಳಿಸಿ.

    | ಮಹೇಶ್ 30 ವರ್ಷ, ಬೆಂಗಳೂರು

    ದುರ್ಬಲ ಸ್ನಾಯುಗಳನ್ನು ಬಲಿಷ್ಠ ಪಡಿಸುವ ಯೋಗಕೋವಿಡ್-19 ಸೋಂಕಿನಿಂದಾಗಿ ನಾವು ಕೆಲಸ ಮಾಡುವ ವಿಧಾನಗಳಲ್ಲಿ ಮೂಲಭೂತ ಬದಲಾವಣೆಗಳು ಉಂಟಾಗಿವೆ. ಸಾಕಷ್ಟು ಪ್ರಮಾಣದಲ್ಲಿ ವ್ಯಾಯಾಮದ ಕೊರತೆಯಾಗಿದೆ. ಓಡಾಟ, ಚಲನೆ ತುಂಬ ಕಡಿಮೆಯಾಗಿದೆ. ಆದುದರಿಂದ ನೀವು ಮುಂಜಾನೆ ಕನಿಷ್ಠ 45 ನಿಮಿಷ ಯೋಗಾಭ್ಯಾಸ ಮಾಡುತ್ತಿರಿ. ಅದರಿಂದ ಬೆನ್ನುಮೂಳೆಗೆ ಸಾಕಷ್ಟು ಚಲನೆ ದೊರಕುತ್ತದೆ. ಮುಂದಕ್ಕೂ ಹಿಂದಕ್ಕೂ ಬೆನ್ನು ಬಾಗುವಿಕೆ, ಅಡ್ಡ ಬಾಗುವಿಕೆ, ಪಾರ್ಶ್ವ ಬಾಗುವಿಕೆ (ತಿರುಚುವಿಕೆ), ವಿಸ್ತರಣೆ ನಡೆಯುತ್ತದೆ. ಸಾಮಾನ್ಯವಾಗಿ ಈ ರೀತಿಯ ಚಲನೆಗಳನ್ನು ಯೋಗದ ತರಗತಿಯಲ್ಲಿ ಅಭ್ಯಾಸ ಮಾಡಿಸಲಾಗುತ್ತದೆ. ಅದರಿಂದ ಬೆನ್ನು ಬಲಗೊಂಡು ಬಲಿಷ್ಠವಾಗುತ್ತದೆ.

    ಸೂಚಿತ ಆಸನಗಳು: ತಾಡಾಸನ, ಅರ್ಧಚಕ್ರಾಸನ, ಉತ್ಥಾನಾಸನ, ತ್ರಿಕೋಣಾಸನ, ಉತ್ಕಟಾಸನ, ಉತ್ಥಿತ ಪಾರ್ಶ್ವಕೋಣಾಸನ, ನೌಕಾಸನ, ಭಾರದ್ವಾಜಾಸನ, ಸೇತುಬಂಧ, ಉಷ್ಟ್ರಾಸನ, ಮಾರ್ಜಾಲಾಸನ, ಧನುರಾಸನ, ಚಕ್ರಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಅರ್ಧಚಂದ್ರಾಸನ, ಮತ್ಸ್ಯಾಸನ, ಶವಾಸನ. ಆರಂಭದಲ್ಲಿ ಸಾಧ್ಯವಾಗುವ ಆಸನಗಳ ಅಭ್ಯಾಸ ಮಾಡಿ. ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಿ. ಇದನ್ನೂ ಓದಿ: ಪರಿಪೂರ್ಣಜ್ಞಾನಕ್ಕೆ ಏಳು ದಾರಿಗಳು

    ನನಗೆ ಬೆಳಗ್ಗೆ ಕಾಲುಸೆಳೆತ, ನೋವು ಇರುತ್ತದೆ. ಯಾವ ಯೋಗ ಹಾಗೂ ಮುದ್ರೆಗಳನ್ನು ಅಭ್ಯಾಸ ಮಾಡಬೇಕೆಂದು ತಿಳಿಸಿ.

    | ಸ್ವರ್ಣಗೌರಿ 58 ವರ್ಷ, ಹಾವೇರಿ

    ಕಾಲುಸೆಳೆತ, ನೋವುಗಳ ಕಾರಣಗಳು: ದುರ್ಬಲ ಸ್ನಾಯುಗಳಿಂದಾಗಿ, ಅತಿಯಾದ ಬಳಕೆಯಿಂದಾಗಿ ಕೀಲುಗಳಿಗೆ ವಯಸ್ಸಾಗಿ, ಉರಿಯೂತ ಅಥವಾ ಸಂಧಿವಾತದ ಲಕ್ಷಣಗಳಿಂದ, ತೂಕದಿಂದ ಕೀಲುಗಳಲ್ಲಿನ ಮೆತ್ತನೆಯಾಗಿರುವ ಕಾರ್ಟಿಲೇಜ್ ಒಣಗಿರುವುದರಿಂದ ಇತ್ಯಾದಿ ಕಾರಣಗಳಿಂದಾಗಿ ಕಾಲುಸೆಳೆತ, ನೋವುಗಳು ಬರುತ್ತಿರಬಹುದು. ಆಯ್ದ ಯೋಗಾಸನಗಳ ಅಭ್ಯಾಸವು ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದ ನೋವನ್ನು ಕಡಿಮೆ ಮಾಡುತ್ತದೆ. ಕೆಲವು ಸ್ಟ್ರೆಚಿಂಗ್ ಆಸನಗಳು ಸ್ನಾಯುಗಳನ್ನು ಬಲವಾಗಿಸಿ ಆರೋಗ್ಯಕರವಾಗಿರಿಸುತ್ತವೆ. ಆರಂಭದಲ್ಲಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತಲಾ ಹತ್ತು ನಿಮಿಷದ ಧ್ಯಾನ, ಪ್ರಾಣಾಯಾಮ ಮಾಡಿ. ಆರು ವಾರ ಮಲಗಿಕೊಂಡು ಮಾಡುವ, ಒಂದೊಂದು ಕಾಲಿನಲ್ಲಿ ಸೊನ್ನೆ ಬರೆಯುವ ವ್ಯಾಯಾಮ ಹಾಗೂ ಉತ್ಥಿತ ಏಕಪಾದಾಸನ, ಪವನಮುಕ್ತಾಸನ, ಸರ್ವಾಂಗಾಸನ, ಮಕರಾಸನ, ಭುಜಂಗಾಸನ, ಏಕಪಾದ ಶಲಭಾಸನ, ಶವಾಸನ ಮಾಡಿ. ನಂತರ ನಿಂತುಕೊಂಡು ಅಭ್ಯಾಸ ಮಾಡುವ ತಾಡಾಸನ, ತ್ರಿಕೋಣಾಸನ, ವೀರಭದ್ರಾಸನಗಳನ್ನು ಪ್ರಯತ್ನಿಸಿ. ಹಾಗೆಯೇ ನೋವು ಕಡಿಮೆಯಾದರೆ ಕುಳಿತು ಮಾಡುವ ಬದ್ಧಕೋಣಾಸನ, ಪಶ್ಚಿಮೋತ್ಥಾನಾಸನ, ವಜ್ರಾಸನ, ಸುಪ್ತವೀರಾಸನ, ವಕ್ರಾಸನಗಳನ್ನು ಅಭ್ಯಾಸ ಮಾಡಬಹುದು.

    ಮುದ್ರೆಗಳು: ಪ್ರಾಣಮುದ್ರೆ, ವಾಯುಶೂನ್ಯಮುದ್ರೆ, ಆಕಾಶಮುದ್ರೆ, ಹೃದಯಮುದ್ರೆ. ಯೋಗತಜ್ಞರ ಮಾರ್ಗದರ್ಶನದಲ್ಲಿಯೇ ಇವಗಳನ್ನೆಲ್ಲ ಕಲಿತು ಅಭ್ಯಾಸ ಮಾಡಿ.

    ಮಧುಮೇಹಿಗಳಿಗೆ ಕರೊನಾ ಸಂಚಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts