More

    ಅರಳು ಮರಳು ಸೋಂಕದಿರಲು ಮರಳಿ ಅರಳಿ

    ಅರಳು ಮರಳು ಸೋಂಕದಿರಲು ಮರಳಿ ಅರಳಿವಯಸ್ಸು ಅರವತ್ತು ದಾಟಿತಾದರೆ ಹಲವರ ಮನದಲ್ಲಿ “ಇನ್ನೇನು! ನಮ್ಮದೆಲ್ಲ ಮುಗಿಯಿತು’ ಎನ್ನುವ ಭಾವ ಅಥವಾ “ನಾನು ಕಡೆಗಣಿಸಲ್ಪಡುತ್ತಿದ್ದೇನೆ’ ಎಂಬ ಅನಿಸಿಕೆ ಅಥವಾ “ಸಾವಿನ ಕಡೆಗೆ ಹತ್ತಿರವಾಗುತ್ತಿದ್ದೇನೆ’ ಎನ್ನುವ ಗಾಬರಿ ಕಾಡತೊಡಗುತ್ತದೆ. ಇನ್ನು ಹಲವರಲ್ಲಿ ಈ ಭಾವಗಳೇ ಬಲಿತು ಭೂತಾಕಾರವಾಗಿ ಜೀವನಾಸಕ್ತಿಯೇ ಕುಂಠಿತವಾಗುತ್ತದೆ. ಅದರ ಪರಿಣಾಮವಾಗಿ ದೂರದ ಮುಪು$್ಪ ಧಾವಿಸಿ ಬಂದು ಮುತ್ತುವಂತಾಗುತ್ತದೆ. ನಲಿವಿನ ಒರತೆಯೇ ಬತ್ತಿಹೋದಂತಾಗುತ್ತದೆ. ಹೀಗೆ ಅರವತ್ತಕ್ಕೆ ಅರಳು ಮರಳು ಎಂಬ ಮಾತು ಅರವತ್ತಕ್ಕೆ ಮೊದಲೇ ಸತ್ಯವಾಗತೊಡಗುತ್ತದೆ. ವೃದ್ಧಾಪ್ಯದ ಕರಿನೆರಳು ದಿನಚರಿಯನ್ನು ಕಬಳಿಸತೊಡಗುತ್ತದೆ.

    ವೃದ್ಧ ಎಂದರೆ…: ನಿಜವಾಗಿಯೂ “ವೃದ್ಧ’ ಎಂದರೆ “ವೃದ್ಧಿಯಾದ’, “ಬೆಳೆದ’ ಎಂದರ್ಥ. ಹಾಗಾಗಿ ವೃದ್ಧಾಪ್ಯ ಎಂದರೆ ಬೆಳೆದ ಸ್ಥಿತಿ ಎಂದೇ ಅರ್ಥ. ಅಂದರೆ ಮನಸ್ಸು ಮಾಗಿ ಎಲ್ಲ ಅಂಜಿಕೆಗಳಿಂದ, ಅನುಮಾನಗಳಿಂದ ಮುಕ್ತರಾಗಿರುವ ಅಥವಾ ಮುಕ್ತವಾಗಿ ಇರಬೇಕಾದ ಸ್ಥಿತಿ ಇದು. ಆದ್ದರಿಂದ ಈ ವಯಸ್ಸು ನಿಜವಾಗಿಯೂ ಅರಳು&ಮರಳು ಅಲ್ಲ, “ಮರಳಿ&ಅರಳು’ವಂತಹದ್ದು. ಬಾಡ ಹೊರಟ ಬಾಳ ಮೊಗ್ಗೆಯ ಪಾಲಿಗೆ ಸೂಕ್ತ ಪರಿಸರ ಕಲ್ಪಿಸಿ ಅದು ಮರಳಿ ಅರಳುವಂತೆ ಮಾಡುವುದರಲ್ಲೇ ಈ ವೃದ್ಧಾಪ್ಯದ ಸಾರ್ಥಕ್ಯ ಇದೆ.

    ಯಾಕೆ ಹೀಗೆ?: ವಯಸ್ಸಾಯಿತು ಎಂದ ಕೂಡಲೇ ಮಾನವ ಯಾಕೆ ಸೋತು ಸುಣ್ಣವಾಗುತ್ತಾನೆ? ಕರಗುವ ಹುಣ್ಣಾಗುತ್ತಾನೆ? ಮನಸ್ಸಿಗೆ, ವಯಸ್ಸಿಗೆ ಹಾಗೂ ಶರೀರಕ್ಕೆ ಒಗ್ಗದ ಮಾಲಿನ್ಯದ ಜತೆಗೆ ತನ್ನ ಹಾಗೂ ತನ್ನವರ ಸಮಸ್ಯೆಗಳು ಅವನನ್ನು ನಲಗುವಂತೆ ಮಾಡುತ್ತವೆ. ತನ್ನಿಂದ ಭರಿಸಲಾರದಷ್ಟು ಒತ್ತಡಗಳಿಗೆ ಆತ ತನ್ನನ್ನು ತಾನು ತೆರುತ್ತಾನೆ. ಇರುವುದಕ್ಕೆ ತೃಪ್ತಿಪಡದೆ, ಇರದಿರುವುದಕ್ಕೆ ಕೊರಗಿ ಬರಬಹುದಾದ ಬವಣೆಗಳ ಕಲ್ಪನೆಯಲ್ಲಿ ಸೊರಗಿ ನೆಮ್ಮದಿ ಕಳೆದುಕೊಳ್ಳುತ್ತಾನೆ. ನಾನಾ ನೋವುಗಳ ಬಲೆಯಲ್ಲಿ ತನ್ನನ್ನು ತಾನು ಬಂಧಿಸಿಕೊಂಡು ಚಿಂತೆಯೆಂಬ ಚಿತೆಗೆ ಚಿತ್ತ ಮತ್ತು ಶರೀರವನ್ನು ಒಡ್ಡುತ್ತಾನೆ. ಸಾಯುವ ಮೊದಲೇ ಸತ್ತು ತನ್ನ ನರಕವನ್ನು ತಾನೆ ಸೃಷ್ಟಿಸಿಕೊಳ್ಳುತ್ತಾನೆ.

    ಪಾರಾಗಲಾಗದೇ?: ಹಾಗಾದರೆ ಈ ವೃದ್ಧಾಪ್ಯದ ಎಲ್ಲ ದುರವಸ್ಥೆಗಳಿಂದ ಪಾರಾಗುವುದು ಸಾಧ್ಯವಿಲ್ಲವೆ? ಎಂಬ ಪ್ರಶ್ನೆ ಇದಿರಾಗಬಹುದು. ಪಾರಾಗಲು ಖಂಡಿತ ಸಾಧ್ಯವಿದೆ. ಈ ಬರಹದ ಆಶಯವೂ ಅದೇನೆ.
    ಮಾಲಿನ್ಯ ಮತ್ತು ಒತ್ತಡ ಆಧುನಿಕ ಬದುಕಿನ ಪ್ರಬಲ ಸವಾಲುಗಳಾಗಿವೆ. ಮಾಲಿನ್ಯದ ವಿವಿಧ ರೂಪಗಳು ಹಾಗೂ ಅವುಗಳ ಪರಿಣಾಮಗಳನ್ನಾದರೂ ನವೀನ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ನೆರವಿನಿಂದ ನಿಯಂತ್ರಿಸಬಹುದಾಗಿದೆ. ಅದರ ಒತ್ತಡ ಮತ್ತು ಒತ್ತಡ ಜನ್ಯ ಮನೋದೈಹಿಕ, ಸಾಮಾಜಿಕ ಸಮಸ್ಯೆಗಳ ಉಪಶಮನಕ್ಕೆ ಭಾರತೀಯ ಋಷಿಮುನಿ ಪ್ರಣಿತ ಯೋಗ ವಿಜ್ಞಾನವೇ ಹೆಚ್ಚು ಪರಿಣಾಮಕಾರಿಯಾದುದು.

    ಅರಳಲು ಯೋಗ: ನಮ್ಮ ಪರಂಪರೆ ನಮಗೆ ಕೊಟ್ಟ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳು ಮತ್ತು ಬ್ರಹ್ಮಚರ್ಯ, ಗ್ರಾಹಸ್ಥ್ಯ, ವಾನಪ್ರಸ್ತ, ಸನ್ಯಾಸಗಳೆಂಬ ಆಶ್ರಮಗಳನ್ನು ಅರ್ಥಮಾಡಿಕೊಂಡು ಅನ್ವಯಿಸಿಕೊಂಡರೆ ವೃದ್ಧಾಪ್ಯದ ಚಿಂತೆಯ ಚಿತೆ ಆರಿ ಚಿದಾನಂದದ ಚಿಗುರು ಕೊನರೀತು. ಗಾರ್ಹಸ್ಥ$್ಯದ ಬಂಧನದಿಂದ ಕಳಚಿಕೊಂಡು ವಾನಪ್ರಸ್ಥದ ಸಮಚಿತ್ತತೆಯ ವನದಲ್ಲಿ ಮರಳಿ ಅರಳಿ ದೀೆ ಪಡೆಯದೇ ಸನ್ಯಾಸದ ದಿವ್ಯತೆಯನ್ನು ಅನುಭವಿಸುವಂತಾಯಿತು. ಶಾರೀರಿಕವಾಗಿ ಸಂಸಾರದೊಂದಿಗೆ ಬಂಧಿಸಲ್ಪಟ್ಟ ಮಾನವ ಹಚ್ಚಿಕೊಂಡುದನ್ನೆಲ್ಲ ಒಂದೊಂದಾಗಿ ಬಿಚ್ಚಿಕೊಂಡು ಬದುಕುವುದನ್ನು ಅಭ್ಯಾಸ ಮಾಡುತ್ತಾ ದೇಹಭಾವದ ಹೊದಿಕೆಗಳನ್ನು ಕಳಚಿ ಆತ್ಮಭಾವದತ್ತ ಸಾಗಿದರೇನೆ, ಆತ್ಮಭಾವದಲ್ಲಿ ಒಂದಾದರೇನೇ ಮರಳಿ ಅರಳಬಹುದು. ಈ ಪ್ರಕ್ರಿಯೆಯೇ ಯೋಗ. ಈ ಯೋಗ ಸಾಧನೆಯಿಂದ ವೃದ್ಧಾಪ್ಯದಲ್ಲೊಂದು ಹೊಸಬೆಳಕು ಕಾಣಿಸುವಂತಾಗುವುದರಲ್ಲಿ ಸಂದೇಹವಿಲ್ಲ.

    (ಪ್ರತಿಕ್ರಿಯಿಸಿ: [email protected])

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts