More

    ದೇಹದ ಒಳಗಿನಿಂದ ಶುದ್ಧೀಕರಿಸುವ ಯೋಗ

    ದೇಹದ ಒಳಗಿನಿಂದ ಶುದ್ಧೀಕರಿಸುವ ಯೋಗ

    * ನನಗೆ ವಾಸನೆಗಳ ಗ್ರಹಿಕೆ ಕಮ್ಮಿಯಾಗಿದೆ. ಯೋಗದ ಪರಿಹಾರ ತಿಳಿಸಿ.

    | ರಮಣ 48 ವರ್ಷ, ಹೊನ್ನವಳ್ಳಿ

    ವಾಸನೆಯ ಅಸ್ವಸ್ಥತೆಗಳನ್ನು ಅನುಭವಿಸುವ ಜನರು ವಾಸನೆಯ ಸಾಮರ್ಥ್ಯಲ್ಲಿ ನಷ್ಟವನ್ನು ಅನುಭವಿಸುತ್ತಾರೆ. ಕೆಲವು ಜನರು ವಾಸನೆಗಳ ಗ್ರಹಿಕೆಯಲ್ಲಿ ಬದಲಾವಣೆಯನ್ನು ಅನುಭವಿಸುತ್ತಾರೆ. ಮೇಲ್ಭಾಗದ ಶ್ವಾಸೇಂದ್ರಿಯ ಸೋಂಕು, ಗಾಯ, ಮೂಗಿನ ಕುಳಿಗಳಲ್ಲಿನ ಪಾಲಿಸ್, ಸೈನಸ್ ಸೋಂಕುಗಳು, ಹಾಮೋನ್​ಗಳ ತೊಂದರೆ, ಹಲ್ಲಿನ ತೊಂದರೆ, ಮಧುಮೇಹ, ಅಧಿಕ ರಕ್ತದೊತ್ತಡ ಇವೆಲ್ಲ ಇದರ ಕಾರಣಗಳು.

    ಯೋಗಭಂಗಿಗಳು ವಾಸನೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಇಂದ್ರಿಯಗಳನ್ನು (ಪಂಚೇಂದ್ರಿಯಗಳು) ಹೆಚ್ಚಾಗಿ ಬಳಸುವುದು, ಯೋಗಭಂಗಿಗಳ ಮೂಲಕ ವಿಭಿನ್ನ ಪ್ರಚೋದನೆಗಳನ್ನು ನೀಡುವುದು ಇವುಗಳಿಂದ ಶಕ್ತಿಯನ್ನು ಹೆಚ್ಚಿಸಬಹುದು. ಯೋಗವು ದೇಹದ ಒಳಗಿನಿಂದ ಶುದ್ಧೀಕರಿಸುತ್ತದೆ. ಕೆಟ್ಟ ಉಸಿರಾಟವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

    ಸೂಚಿತ ಆಸನ, ಪ್ರಾಣಾಯಾಮಗಳು: ಆರಂಭದಲ್ಲಿ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ತಾಡಾಸನ, ಪಾದಹಸ್ತಾಸನ, ಅರ್ಧಚಕ್ರಾಸನ, ಗುಪ್ತಪದ್ಮಾಸನ, ಸಿಂಹಾಸನ, ಯೋಗಮುದ್ರಾಸನ, ಶಶಾಂಕಾಸನ, ಸರ್ವಾಂಗಾಸನ, ಪರ್ಯಂಕಾಸನ, ಅರ್ಧ ಉಷ್ಟ್ರಾಸನ, ಭರದ್ವಾಜಾಸನ, ಅಧೋಮುಖ ಶ್ವಾನಾಸನ, ಶವಾಸನ. ಪ್ರಾಣಾಯಾಮಗಳಲ್ಲಿ ಅನುಲೋಮ, ವಿಲೋಮ, ಭಸ್ತ್ರಿಕಾ, ಸಿತ್ಕಾರಿ, ಉಜ್ಜಾಯಿ, ಸೂರ್ಯಭೇದನ, ಚಂದ್ರಭೇದನ, ಸದಂತ, ಕಪಾಲಭಾತಿ ಕ್ರಿಯೆ. ಬೆಳಗ್ಗೆ-ಸಂಜೆ ತಲಾ ಹತ್ತು ನಿಮಿಷದ ಉಸಿರನ್ನು ಗಮನಿಸುವ ಧ್ಯಾನ ಮಾಡಿ. ಮೇಲೆ ತಿಳಿಸಿದ ಯೋಗವನ್ನು ಮುಂಜಾನೆ ಮಾಡಿ. ಹಾಗೂ ಸಾಧ್ಯವಾದರೆ ಸಮತೋಲನ ಭಂಗಿಗಳನ್ನು ಅಭ್ಯಾಸ ಮಾಡಿ. ಗುರುಮುಖೇನವೇ ಯೋಗವನ್ನು ಕಲಿತು ಅಭ್ಯಾಸ ಮಾಡಿ.

    * ಭುಜ, ಬೆನ್ನು ಹಾಗೂ ಕಿಬ್ಬೊಟ್ಟೆ ಬಲಗೊಳ್ಳುವ ಸರಳ ಅರ್ಧ ಉಷ್ಟ್ರಾಸನದ ಬಗ್ಗೆ ಮಾಹಿತಿ ತಿಳಿಸಿ.

    | ತ್ರಿವೇಣಿ 24 ವರ್ಷ, ಧಾರವಾಡ

    ಸರಳ ಅರ್ಧ ಉಷ್ಟ್ರಾಸನ ಎಂದರೆ ಅರ್ಧ ಒಂಟೆ ಭಂಗಿ ಎಂದರ್ಥ. ಹೆಚ್ಚಿನ ಭೌತಿಕ ವ್ಯವಸ್ಥೆಗಳನ್ನು ಉತ್ತೇಜಿಸುತ್ತದೆ. ಇದು ಕುತ್ತಿಗೆಯ ಹಿಂಭಾಗ, ಸೊಂಟ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಹಾಗೂ ವಿಶ್ರಾಂತಿ ನೀಡುತ್ತದೆ. ಭುಜ, ಬೆನ್ನು ಹಾಗೂ ಕಿಬ್ಬೊಟ್ಟೆಯ ಭಾಗಗಳು ಬಲಗೊಳ್ಳುತ್ತವೆ. ಎದೆ ವಿಸ್ತರಿಸುತ್ತದೆ. ಉಸಿರಾಟದ ಕಾರ್ಯಗಳನ್ನು ಸುಧಾರಿಸುತ್ತದೆ. ಅಸ್ತಮಾ ನಿಯಂತ್ರಣಕ್ಕೆ ಸಹಕಾರಿ, ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ. ಜೀರ್ಣಕಾರಿ ಅಂತಃಸ್ರಾವಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಿದುಳಿಗೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಕಶೇರುಖಂಡಗಳನ್ನು ಸಡಿಲಗೊಳಿಸುತ್ತದೆ. ಬೆನ್ನು ಮೂಳೆಯ ನರಗಳನ್ನು ಉತ್ತೇಜಿಸುತ್ತದೆ. ಕತ್ತಿನ ಮುಂಭಾಗ ವಿಸ್ತರಿಸುತ್ತದೆ. ಥೈರಾಯ್್ಡ ಗ್ರಂಥಿಯ ಆರೋಗ್ಯವರ್ಧನೆಗೆ ಸಹಕಾರಿ. ತೀವ್ರ ಸೊಂಟನೋವು, ಅಧಿಕ ರಕ್ತದೊತ್ತಡ, ಹೃದ್ರೋಗದಿಂದ ಬಳಲುತ್ತಿರುವವರು ಈ ಭಂಗಿಯ ಅಭ್ಯಾಸ ಮಾಡುವುದು ಬೇಡ. ಹರ್ನಿಯ, ಹೊಟ್ಟೆಯ ಶಸ್ತ್ರಚಿಕಿತ್ಸೆ ಆದವರು ಕೂಡ ಈ ಆಸನದ ಅಭ್ಯಾಸ ಮಾಡುವುದು ಬೇಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts