More

    ಯೋಗ ಕ್ಷೇಮ: ಸೂರ್ಯನಾರಾಯಣನಿಗೆ ನಮಸ್ಕಾರ

    ಯೋಗ ಕ್ಷೇಮ: ಸೂರ್ಯನಾರಾಯಣನಿಗೆ ನಮಸ್ಕಾರ

    ‘ದೈವಾಧೀನಂ ಜಗತ್ಸರ್ವಂ ಮಂತ್ರಾಧೀನಂ ತು ದೈವತಂ ||’ – ‘ಈ ಜಗತ್ತು ದೇವರ ಅಧೀನ. ಈ ದೈವವು ಮಂತ್ರಾಧೀನ ಮಂತ್ರವು ಮಾನವಾಧೀನ. ‘ದೇಹೋ ದೇವಾಲಯಃ ಪ್ರೋಕ್ತೋ ಜೀವೋ ದೇವಃ ಸನಾತನಃ |’ ಈ ಶರೀರವೇ ದೇವಾಲಯ; ಸಾಕ್ಷಾತ್ ಭಗವಂತನೇ ಇಲ್ಲಿ ವಾಸವಾಗಿದ್ದಾನೆ. ಇಂತಹ ಅನುಪಮ ಸಾಧನಾಶರೀರವನ್ನು ನೀಡಿದ ಪರಮಾತ್ಮನ ಸ್ಮರಣೆ, ಆರಾಧನೆ, ಉಪಾಸನೆ, ಅನುಸಂಧಾನ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಭಕ್ತಿ, ಜ್ಞಾನ, ಕರ್ಮ, ರಾಜ, ಹಠ ಹಾಗೂ ಮಂತ್ರಯೋಗದ ಯಾವುದೇ ಒಂದು ಅಥವಾ ಹೆಚ್ಚು ಯೋಗಪಥಗಳ ಮೂಲಕ ಭಗವಂತನ ಅನುಗ್ರಹ, ಸಾಕ್ಷಾತ್ಕಾರ, ಅಪರೋಕ್ಷ ಅನುಭೂತಿಯನ್ನು ಹೊಂದಬಹುದು. ಈ ಎಲ್ಲ ಯೋಗಗಳ ಸಾರವನ್ನು ಒಳಗೊಂಡ ಅನುಷ್ಠಾನಕ್ರಮವೇ ಸೂರ್ಯನಮಸ್ಕಾರ. ಸೂರ್ಯ ನಮ್ಮ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು.

    ಸೂರ್ಯನಮಸ್ಕಾರವು ಆಸನ, ಪ್ರಾಣಾಯಾಮ, ಬಂಧ, ಮುದ್ರೆ, ಧಾರಣ, ಮಂತ್ರಗಳು ಕ್ರಮಬದ್ಧವಾಗಿ ಜೋಡಣೆಗೊಂಡ ಅಭ್ಯಾಸಮಾರ್ಗವಾಗಿದೆ. ಸೂರ್ಯನಮಸ್ಕಾರ ಮಾಡುವಾಗ ಮಂತ್ರಗಳ ಉಚ್ಚಾರಣೆ ಬಹು ಮಹತ್ವದ್ದಾಗಿದೆ.

    ಮಂತ್ರ ಎಂದರೇನು?: ‘ಮನನಾತ್ ತ್ರಾಯತೇ ಇತಿ ಮಂತ್ರಃ’ – ‘ಮನನದ ಕಾರಣದಿಂದ ಸಾಧಕರನ್ನು ರಕ್ಷಿಸುತ್ತದೆ.’ ಮನದಲ್ಲಿ ನಿರಂತರವಾಗಿ ಉದ್ಭವಿಸುವ, ಪಠಿಸುವ ಪ್ರಾಕೃತಿಕ, ವೈದಿಕ, ಪವಿತ್ರ, ಶುದ್ಧ ಕಂಪನ, ನಾದಸ್ವರಗಳ ಗುಚ್ಛ, ಅಕ್ಷರ ಅಥವಾ ಶಬ್ದಸಮೂಹವೇ ಮಂತ್ರ. ಮಂತ್ರವು ರಹಸ್ಯ ಹಾಗೂ ರಕ್ಷಿಸಲ್ಪಟ್ಟ ನಾದವಾಗಿದೆ. ಮಂತ್ರಪಠಣದಿಂದ ಮಾನಸಿಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಪಡೆಯಬಹುದು. ಕೆಲವು ಮಂತ್ರಗಳು ಶರೀರ, ಮನಸ್ಸು, ಭಾವನೆ, ಬುದ್ಧಿ ಹಾಗೂ ಪರಿಸರದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತವೆ.

    ಮಂತ್ರಗಳು ವಿವಿಧ ಪ್ರಕಾರಗಳಲ್ಲಿ ಬಳಕೆಯಲ್ಲಿವೆ. ಅವು ಬೀಜಮಂತ್ರ, ವೇದಮಂತ್ರ, ಸ್ತೋತ್ರ, ದೀಕ್ಷಾಮಂತ್ರ, ಧಾರ್ವಿುಕ ಮಂತ್ರ, ಶಾಂತಿ, ವಶೀಕರಣ, ಸ್ತಂಭನ, ಉಚ್ಚಾಟನ ಹಾಗೂ ಮಾರಣಮಂತ್ರಗಳು. ಮಂತ್ರಗಳು ವಿವಿಧ ಸ್ವರೂಪಗಳಲ್ಲಿವೆ. ಋಗ್ವೇದದಲ್ಲಿ ಬರುವ ಮಂತ್ರಗಳೇ ಸಾಮವೇದದಲ್ಲಿ ಗಾನಮಯವಾಗಿ ಬಳಕೆಯಲ್ಲಿವೆ. ಮಂತ್ರಗಳು ಇಂಪನ್ನು, ಲೆಕ್ಕಾಚಾರದಿಂದ ಕೂಡಿದ ತಾಳಬದ್ಧ ಸ್ವರೂಪವನ್ನು ಹೊಂದಿವೆ. ಈ ಮಂತ್ರಗಳು ಅಪರಿಮಿತ ದಿವ್ಯಗುಣಗಳನ್ನು ಹೊಂದಿವೆ. ಸೂರ್ಯನಮಸ್ಕಾರದಲ್ಲಿ ಮಂತ್ರ: ಪತಂಜಲಿಯ ಯೋಗಸೂತ್ರದ ಸಮಾಧಿಪಾದದಲ್ಲಿ ಭಗವಂತನ ಸಾಕ್ಷಾತ್ ಸ್ವರೂಪವನ್ನು ಪ್ರತಿನಿಧಿಸುವ ‘ಓಂ’ಕಾರ ಪ್ರಣವಮಂತ್ರವನ್ನು ‘ತಸ್ಯ ವಾಚಕಃ ಪ್ರಣವಃ’ ಎಂದು ತಿಳಿಸುತ್ತದೆ. ಸೂರ್ಯನಮಸ್ಕಾರದಲ್ಲಿ ಓಂಕಾರದೊಂದಿಗೆ ಉಚ್ಚರಿಸುವ ‘ಹ್ರಾಂ, ಹ್ರೀಂ, ಹ್ರೂಂ, ಹ್ರೆ ೖಂ, ಹ್ರೌಂ, ಹ್ರಃ’ ಎಂಬ ಬೀಜಮಂತ್ರಗಳು ಆರು ಚಕ್ರಗಳನ್ನು ಪ್ರಚೋದಿಸಲು ಸಹಾಯಕ. ನಮಸ್ಕಾರಪ್ರಿಯನಾದ ಸೂರ್ಯದೇವನ ಗುಣ- ಸಾಮರ್ಥ್ಯ ಗಳನ್ನು ವರ್ಣಿಸುವ ನಾಮಮಂತ್ರವು ಆಧಿಭೌತಿಕ, ಆಧಿದೈವಿಕ, ಆಧ್ಯಾತ್ಮಿಕ ಲಾಭಗಳನ್ನು ನೀಡುತ್ತದೆ. ಒಂದೊಂದು ಮಂತ್ರವನ್ನು ಪಠಿಸುತ್ತ ಮಾಡುವ ಸೂರ್ಯನಮಸ್ಕಾರವು ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ಆಧ್ಯಾತ್ಮಿಕ ಲಾಭಗಳನ್ನು ನೀಡುತ್ತದೆ ಹಾಗೂ ಧನಾತ್ಮಕ ಕಂಪನ್ನು ನೀಡುತ್ತದೆ.

    ಓಂ ಮಿತ್ರಾಯ ನಮಃ (ವಿಶ್ವದ ಮಿತ್ರನಿಗೆ ನಮಸ್ಕಾರ), ರವಿ (ಬೆಳಕನ್ನು ಕೊಡುವವ), ಸೂರ್ಯ (ಕ್ರಿಯಾಶೀಲತೆ ನೀಡುವವ), ಭಾನು (ಆಂತರ್ಯವನ್ನು ಬೆಳಗುವವ), ಖಗಾಯ (ಸಕಲರ ಅಂತಃಶಕ್ತ), ಪೂಷ್ಣೇ (ಸಕಲ ಜೀವಿಗಳ ಪೋಷಕ), ಹಿರಣ್ಯಗರ್ಭ (ಬಂಗಾರವರ್ಣದ ಶಕ್ತಿದಾತ), ಮರೀಚ (ಕಿರಣ ಹೊರಸೂಸುವವ), ಆದಿತ್ಯ (ಅದಿತಿಯ ಪುತ್ರ), ಸವಿತ್ರೇ (ಒಳಗಿನ ಶಕ್ತಿಯನ್ನು ಹೊರತರುವವ), ಅರ್ಕ (ಸೃಷ್ಟಿಯ ಮೂಲಪುರುಷ), ಭಾಸ್ಕರ (ಎಲ್ಲರ ಜ್ಞಾನದಾತ) – ಓಂ ಶ್ರೀ ಸವಿತೃ ಸೂರ್ಯನಾರಾಯಣಾಯ ನಮಃ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts