More

    ಅಧಿಕ ರಕ್ತದೊತ್ತಡ ನಿಯಂತ್ರಿಸುವ ಯೋಗಾಭ್ಯಾಸ

    ಅಧಿಕ ರಕ್ತದೊತ್ತಡ ನಿಯಂತ್ರಿಸುವ ಯೋಗಾಭ್ಯಾಸ* ಅಧಿಕ ರಕ್ತದೊತ್ತಡ ತಡೆಗೆ ಯೋಗ ಸಹಕಾರಿಯೇ?

    | ಜನಾರ್ದನ 48 ವರ್ಷ, ಪುತ್ತೂರು

    ಹೌದು. ಅಧಿಕ ರಕ್ತದೊತ್ತಡ ಸಮಸ್ಯೆಗೆ ಪ್ರಮುಖ ಕಾರಣಗಳೆಂದರೆ ಕೆಲಸದ ಹೊರೆ ಮತ್ತು ಒತ್ತಡ. ಸಮಯಕ್ಕೆ ಸರಿಯಾಗಿ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅದು ಹೃದಯಾಘಾತಕ್ಕೆ ಕಾರಣವಾಗಬಹುದು.

    ಕೆಲವು ಯೋಗಭಂಗಿಗಳನ್ನು ಅಭ್ಯಾಸ ಮಾಡುವ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಖ್ಯಾತ ಯೋಗಸಾಧಕರಾದ ಬಿ.ಕೆ.ಎಸ್. ಅಯ್ಯಂಗಾರ್ ತಮ್ಮ ಯೋಗಪ್ರದೀಪಿಕಾ ಗ್ರಂಥದಲ್ಲಿ ಹೆಚ್ಚಿನ ರಕ್ತದೊತ್ತಡದ ನಿಯಂತ್ರಣಕ್ಕೆ ಆಸನಗಳು, ಪ್ರಾಣಾಯಾಮ, ಧ್ಯಾನ ಸಹಕಾರಿ ಎಂದು ತಿಳಿಸಿದ್ದಾರೆ.

    ಅಧಿಕ ರಕ್ತದೊತ್ತಡವು ಯಾವುದೇ ರೋಗಲಕ್ಷಣಗಳನ್ನು ತೋರಿಸದ ಸ್ಥಿತಿಯಾಗಿದೆ. ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷಿಸಬಾರದು, ಇದರಿಂದ ಹೃದ್ರೋಗದ ಅಪಾಯ ಉಂಟಾಗುತ್ತದೆ. ಅಧಿಕ ರಕ್ತದೊತ್ತಡ ಇರುವ ರೋಗಿಗಳಿಗೆ ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಕಳಪೆ ಆಹಾರ, ಧೂಮಪಾನ, ಒತ್ತಡ, ಜಡ ಜೀವನಶೈಲಿ, ಬೊಜ್ಜು, ಅನುವಂಶೀಯತೆ – ಇವೆಲ್ಲವೂ ಅಧಿಕ ರಕ್ತದೊತ್ತಡಕ್ಕೆ ಕಾರಣಗಳಾಗಿರುತ್ತವೆ.

    ಆರೋಗ್ಯಕರ ಆಹಾರಸೇವನೆ ಮತ್ತು ನಿಮಿತ ಯೋಗಾಭ್ಯಾಸ, ವ್ಯಾಯಾಮಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಮತ್ತೊಂದು ನೈಸರ್ಗಿಕ ಮತ್ತು ಸುರಕ್ಷಿತ ವಿಧಾನವೆಂದರೆ ಯೋಗಾಭ್ಯಾಸವನ್ನು ಮಾಡುವುದು.

    ಸದೃಢವಾಗಿರಲು ಯೋಗವು ಒಂದು ಪ್ರಾಚೀನ ವಿಧಾನವಾಗಿದ್ದು, ಇದು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಯೋಗವು ಚಲನೆಯನ್ನು ಆಧಾರಿಸಿದ ಮನಸ್ಸು-ದೇಹದ ಚಿಕಿತ್ಸೆಯಾಗಿದೆ ಮತ್ತು ಇದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಯೋಗವು ಒಂದು ನಿರ್ದಿಷ್ಟ ಮಾದರಿಯಲ್ಲಿ ಉಸಿರಾಟವನ್ನು ಒಳಗೊಂಡಿರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.

    ಆರಂಭದಲ್ಲಿ ವೈದ್ಯರೊಂದಿಗೆ ಹಾಗೂ ಯೋಗಗುರುಗಳೊಂದಿಗೆ ಸಮಾಲೋಚಿಸಿ. ಆರಂಭದಲ್ಲಿ ಸಾಧ್ಯವಾಗುವ ಯೋಗವನ್ನು ಮಾತ್ರ ಅಭ್ಯಾಸ ಮಾಡಿ.

    * ಹೆಚ್ಚಿನ ರಕ್ತದೊತ್ತಡ ನಿಯಂತ್ರಣಕ್ಕೆ ಯಾವ ಆಸನ ಮತ್ತು ಮುದ್ರೆ ಸಹಕಾರಿ?

    | ರಮೇಶ್ 55 ವರ್ಷ, ಬೆಂಗಳೂರು

    ಹೆಚ್ಚಿನ ರಕ್ತದೊತ್ತಡ ನಿಯಂತ್ರಣಕ್ಕಾಗಿ ದಿನಕ್ಕೆ ಮೂರು ಬಾರಿ ಶವಾಸನವನ್ನು ಅಭ್ಯಾಸ ಮಾಡಿ.

    ಸೂಚಿತ ಆಸನಗಳು: ತಾಡಾಸನ, ಅರ್ಧಕಟಿ ಚಕ್ರಾಸನ, ವೀರಭದ್ರಾಸನ, ಬದ್ಧಕೋಣಾಸನ, ಪರ್ವತಾಸನ, ಜಾನುಶೀರ್ಷಾಸನ, ಪಶ್ಚಿಮೋತ್ಥಾನಾಸನ, ವಜ್ರಾಸನ, ಮಾರ್ಜಾಲಾಸನ, ನೌಕಾಸನ, ಗೋಮುಖಾಸನ, ಭರದ್ವಾಜಾಸನ, ಉತ್ಥಿತ ಏಕಪಾದಾಸನ, ಮಕರಾಸನ, ಸರಳ ಪವನಮುಕ್ತಾಸನ, ಭುಜಂಗಾಸನ, ಶವಾಸನ ಹಾಗೂ ತಲಾ ಹತ್ತು ನಿಮಿಷದಂತೆ ಬೆಳಗ್ಗೆ ಮತ್ತು ಸಂಜೆ ಧ್ಯಾನಮಾಡಿ.

    ಪ್ರಾಣಾಯಾಮ: ನಾಡೀಶುದ್ಧಿ, ಭ್ರಾಮರಿ ಪ್ರಾಣಾಯಾಮ.

    ಮುದ್ರೆಗಳು: ವ್ಯಾನಮುದ್ರೆ, ಚಿನ್ಮುದ್ರೆ, ಪ್ರಾಣಮುದ್ರೆ.

    ಈ ಯೋಗ ಹಾಗೂ ಮುದ್ರೆಗಳನ್ನು ಪರಿಣತ ಯೋಗಗುರುಗಳ ಮಾರ್ಗದರ್ಶನದಲ್ಲಿಯೇ ಕಲಿತುಕೊಂಡು ಸತತವಾಗಿ ಅಭ್ಯಾಸ ಮಾಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts