More

    ಎಲ್ಲೂರು ಸಬ್‌ಸ್ಟೇಶನ್ ಅಡ್ಡಿ ದೂರ

    ಬೈಂದೂರು: ವಿದ್ಯುತ್ ವೋಲ್ಟೇಜ್ ಸಮಸ್ಯೆಯಿಂದ ನಲುಗುತ್ತಿರುವ ಪಶ್ಚಿಮಘಟ್ಟ ತಪ್ಪಲಿನ ಕೊಲ್ಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸುವ ಗೋಳಿಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲೂರಿನಲ್ಲಿ 33/11 ಕೆ.ವಿ ವಿದ್ಯುತ್ ಉಪಕೇಂದ್ರ ನಿರ್ಮಾಣ ಯೋಜನೆಗೆ ಅರಣ್ಯಕ್ಕೆ ನಿರಾಕ್ಷೇಪಣಾ ಪತ್ರ ನೀಡಿದೆ.

    ಮೆಸ್ಕಾಂ ನಾಲ್ಕು ವರ್ಷದ ಹಿಂದೆ ಸಬ್‌ಸ್ಟೇಶನ್‌ಗೆ ಮುಂದಾಗಿತ್ತು. ಆದರೆ ಉದ್ದೇಶಿತ ಕಾಮಗಾರಿಗೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಒತ್ತಡದಿಂದ ಸಂಸದ ಬಿ. ವೈ. ರಾಘವೇಂದ್ರ ಅವರ ವಿಶೇಷ ಮುತುವರ್ಜಿಯಿಂದಾಗಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವರಿಕೆ ಮಾಡಿದ ಬಳಿಕ ಒಪ್ಪಿಗೆ ಸೂಚಿಸಲಾಗಿದೆ.
    9.5 ಕೋಟಿ ರೂ. ವೆಚ್ಚದಲ್ಲಿ ಈ ಸಬ್‌ಸ್ಟೇಷನ್ ಕಾಮಗಾರಿ ನಡೆಯುತ್ತಿದ್ದು, ನಾಲ್ಕು ವರ್ಷದ ಹಿಂದೆ ಅಂದಿನ ಶಾಸಕ ಕೆ. ಗೋಪಾಲ ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಪ್ರಸ್ತುತ ವಿದ್ಯುತ್ ಕಂಬ ಅಳವಡಿಸುವ ಹಾಗೂ ಕಟ್ಟಡ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದ್ದು, ನಾವುಂದದಿಂದ ಖಂಬದಕೋಣೆಯ ಶೇಡಿಗುಡ್ಡದವರೆಗೆ ಲೈನ್ ಎಳೆಯುವ ಕಾರ್ಯ ನಡೆದಿದೆ. ಆದರೆ ಸುಮಾರು 5 ಕಿ.ಮೀ. ದೂರ ವಿದ್ಯುತ್ ತಂತಿ ಮೀಸಲು ಅರಣ್ಯ ಪ್ರದೇಶದಲ್ಲಿ ಸಾಗಬೇಕಾಗಿದ್ದು, ಅರಣ್ಯ ಇಲಾಖೆ ಆಕ್ಷೇಪದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಾರಿ ಸಂಸದರು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಉದ್ದೇಶಿತ ಕಾಮಗಾರಿಯ ಬಗ್ಗೆ ಇಲಾಖೆಗೆ ಮನದಟ್ಟು ಮಾಡಿದ ಬಳಿಕ, ಅರಣ್ಯ ಇಲಾಖೆ ಕಾಮಗಾರಿ ಮುಂದುವರಿಸಲು ಅನುಮತಿ ನೀಡಿದೆ.
    ಪ್ರಸಿದ್ಧ ತೀರ್ಥ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ಸೇರಿದಂತೆ ಹಾಲ್ಕಲ್, ಜಡ್ಕಲ್, ಮುದೂರು, ಎಳಜಿತ್, ಗೋಳಿಹೊಳೆ, ಅರೆಶಿರೂರು, ಎಲ್ಲೂರು, ಇಡೂರು ಕುಂಜ್ಞಾಡಿ ಮೊದಲಾದ ಪ್ರದೇಶಗಳಿಗೆ ಪ್ರಸ್ತುತ ಸುಮಾರು 30-40 ಕಿ.ಮೀ ದೂರದ ಬೈಂದೂರು ಮೆಸ್ಕಾಂ 110/33 ಕೆ.ವಿ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುತ್ತಿದ್ದು, ಇದರಿಂದ ಗ್ರಾಮೀಣ ಪರಿಸರದಲ್ಲಿ ವಿದ್ಯುತ್ ವೊಲ್ಟೇಜ್ ಸಮಸ್ಯೆಯೊಂದಿಗೆ ಆಗಾಗ ಸಂಪರ್ಕ ಕಡಿತಗೊಳ್ಳುತ್ತಿತ್ತು. ಎಲ್ಲೂರಿನಲ್ಲಿ ಪ್ರತ್ಯೇಕ 33/11 ಕೆ.ವಿ ವಿದ್ಯುತ್ ಉಪಕೇಂದ್ರ ನಿರ್ಮಾಣದಿಂದ ಕೊಲ್ಲೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಉದ್ದಿಮೆಗಳಿಗೆ, ಕೃಷಿಕರಿಗೆ ಅನುಕೂಲವಾಗಲಿದೆ.

    ನಾವುಂದದಿಂದ ವಿದ್ಯುತ್
    ಎಲ್ಲೂರಿನಲ್ಲಿ ನಿರ್ಮಾಣವಾಗಲಿರುವ ಉಪಕೇಂದ್ರಕ್ಕೆ ನಾವುಂದ 110/33 ಕೆ.ವಿಯಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಈ ವಿದ್ಯುತ್ ಮಾರ್ಗ ಸುಮಾರು 20 ಕಿ.ಮೀ. ದೂರವಿದ್ದು ಅದರಲ್ಲಿ 5 ಕಿ.ಮೀ. ಮೀಸಲು ಅರಣ್ಯ ಪ್ರದೇಶದಲ್ಲಿ ತಂತಿ ಅಳವಡಿಸಬೇಕಾಗಿದೆ. ಎಲ್ಲೂರು ಉಪಕೇಂದ್ರದಿಂದ ಕೊಲ್ಲೂರು, ಎಳಜಿತ್, ಜಡ್ಕಲ್-ಮುದೂರು ಹಾಗೂ ಇಡೂರು-ಕುಂಜ್ಞಾಡಿ ಭಾಗದಲ್ಲಿ ಹೆಚ್ಚುವರಿ 4 ಫೀಡರ್ ನಿರ್ಮಿಸಲಾಗುತ್ತದೆ. ಇದರಿಂದ ಗ್ರಾಮೀಣ ಭಾಗದ ಲೋ ವೊಲ್ಟೇಜ್ ಹಾಗೂ ಹೆಚ್ಚುವರಿ ಲೋಡ್ ಸಮಸ್ಯೆಗೆ ಪರಿಹಾರ ಆಗಲಿದೆ. ಕೃಷಿಕರ ಪಂಪ್‌ಸೆಟ್‌ಗಳಿಗೂ ಗುಣಮಟ್ಟದ ವಿದ್ಯುತ್ ಲಭಿಸಲಿದೆ.

    ಶೇ.80ರಷ್ಟು ಸ್ಟೇಷನ್ ಕಾಮಗಾರಿ ಪೂರ್ಣಗೊಂಡಿದ್ದು, ನಾವುಂದದಿಂದ ಖಂಬದಕೋಣೆಯ ಶೇಡಿಗುಡ್ಡೆಯವರೆಗೆ ವಿದ್ಯುತ್ ಲೈನ್ ಜೋಡಿಸುವ ಕಾರ್ಯವಾಗಿದೆ. ಅರಣ್ಯದೊಳಗೆ ಕಾಮಗಾರಿ ನಡೆಸಬೇಕಾದರೆ ಇಕೊ ಸೆನ್ಸೆಟೀವ್ ಝೋನ್ ಕಮಿಟಿಗೆ ಶುಲ್ಕಪಾವತಿಸಿ ಎನ್‌ಒಸಿ ಪಡೆಯಬೇಕು. ಹಾಗೂ ಆರ್‌ಎಫ್‌ಆರ್‌ನಿಂದ ನಿರಪೇಕ್ಷಣಾ ಪತ್ರವನ್ನು ಜಿಲ್ಲಾಧಿಕಾರಿಯಿಂದ ಪಡೆದುಕೊಳ್ಳಬೇಕಾಗಿದ್ದು, ಈಗಾಗಲೇ ನಿಗದಿತ ಶುಲ್ಕ ಭರಿಸಲಾಗಿದೆ. ಈ ಬಗ್ಗೆ ಮಾತುಕತೆ ಕೂಡ ಮುಗಿದಿದೆ. ತಿಂಗಳೊಳಗೆ ಉದ್ದೇಶಿತ ಕಾಮಗಾರಿ ಪೂರ್ಣಗೊಳ್ಳಲಿದೆ.
    – ಹರೀಶ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೆಸ್ಕಾಂ ಬೈಂದೂರು.

    ಗೋಳಿಹೊಳೆ ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿಗೆ ಅರಣ್ಯ ಇಲಾಖೆಯ ಆಕ್ಷೇಪದಿಂದಾಗಿ ನನೆಗುದಿಗೆ ಬಿದ್ದಿತ್ತು, ಈ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರಿಗೆ ಮನವರಿಕೆ ಮಾಡಿದ ಬಳಿಕ ಕಾಮಗಾರಿ ಮುಂದುವರಿಸಲು ಅನುಮತಿ ನೀಡಿದ್ದು, ಲಿಖಿತ ಅನುಮತಿ ಪತ್ರ ಮೆಸ್ಕಾಂ ಕಳುಹಿಸಲಾಗಿದೆ. ಸದ್ಯದಲ್ಲಿ ಗ್ರಾಮೀಣ ಜನರ ದಶಕದ ಸಮಸ್ಯೆಗೆ ಮುಕ್ತಿ ನೀಡಲಾಗುವುದು.
    ಬಿ. ವೈ. ರಾಘವೇಂದ್ರ, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts