More

    ಯಲಹಂಕದಲ್ಲಿ ಗರಿಗೆದರಿದ ರಿಯಲ್ ಎಸ್ಟೇಟ್

    ಬೆಂಗಳೂರಿನ ದೇವನಹಳ್ಳಿಯ ಬೀರಸಂದ್ರಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸ್ಥಳಾಂತರದ ಬಳಿಕ ಗ್ರಾಮಾಂತರ ಜಿಲ್ಲೆಗೆ ಹೊಂದಿಕೊಂಡಿರುವ ಯಲಹಂಕ ಪ್ರದೇಶದಕ್ಕೆ ಶುಕ್ರದೆಸೆ ಆರಂಭವಾಗಿದೆ. ಕಳೆದೊಂದು ವರ್ಷದಲ್ಲಿ ಯಲಹಂಕ ಸುತ್ತಮುತ್ತಲ ಪ್ರದೇಶದಲ್ಲಿ ಬಾಡಿಗೆ ಮನೆಗಳಿಗೆ, ನಿವೇಶನಗಳಿಗೆ ಬೇಡಿಕೆ ಕುದುರಿದೆ.

    ಯಲಹಂಕದಿಂದ ದೇವನಹಳ್ಳಿಗೆ 19 ಕಿ.ಮೀ ಅಂತರವಿದ್ದು, ಕೇವಲ 23 ನಿಮಿಷಗಳ ಪ್ರಯಾಣದಿಂದಾಗಿ ಜಿಲ್ಲಾಡಳಿತ ಭವನದಲ್ಲಿ ಸೇವೆಯಲ್ಲಿರುವ ನೂರಾರು ಸರ್ಕಾರಿ ಸಿಬ್ಬಂದಿಗೆ ಯಲಹಂಕ ವಾಸಯೋಗ್ಯ ಪ್ರದೇಶವಾಗಿ ಗುರುತಿಸಿಕೊಳ್ಳುತ್ತಿದೆ. ನಗರ ಜೀವನಕ್ಕೆ ಹೊಂದಿಕೊಂಡಿದ್ದ ಸರ್ಕಾರಿ ನೌಕರರಿಗೆ ದೇವನಹಳ್ಳಿಯ ಗ್ರಾಮಾಂತರ ಪ್ರದೇಶಕ್ಕಿಂತ ಯಲಹಂಕ ಸಿಟಿ ಹೆಚ್ಚು ಆಪ್ತವೆನಿಸಿದೆ.

    ಕಚೇರಿಗೆ ಹತ್ತಿರದ ಪ್ರದೇಶ: ರಾಜಧಾನಿಯ ಹೃದಯಭಾಗವಾದ ಮೆಜೆಸ್ಟಿಕ್ ಕಲ್ಲುಕಟ್ಟಡದಲ್ಲಿ ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿತ್ತು. 2018ರಲ್ಲಿ ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ಚಪ್ಪರದಕಲ್ಲು ಗ್ರಾಮದಲ್ಲಿನ ನೂತನ ಜಿಲ್ಲಾಡಳಿತ ಭವನ ಕಟ್ಟಡಕ್ಕೆ ಸ್ಥಳಾಂತರವಾಯಿತು. ಸಿಲಿಕಾನ್​ಸಿಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಮಾರು 38ಕ್ಕೂ ಹೆಚ್ಚು ಇಲಾಖೆಗಳು ದೇವನಹಳ್ಳಿಗೆ ಒಂದೇ ಬಾರಿಗೆ ಸ್ಥಳಾಂತರಗೊಂಡವು. ಇಷ್ಟು ವರ್ಷದ ನಗರ ಜೀವನಕ್ಕೆ ಹೊಂದಿಕೊಂಡಿದ್ದ ಸಿಬ್ಬಂದಿ ಗ್ರಾಮೀಣ ಪ್ರದೇಶಕ್ಕೆ ಹೊಂದಿಕೊಳ್ಳಲು ಪರದಾಡಿದರು. ಬೆಂಗಳೂರಿನಿಂದ ಸುಮಾರು 54 ಕಿ.ಮೀ ದೂರದ ಜಿಲ್ಲಾಡಳಿತ ಭವನಕ್ಕೆ ಪ್ರತಿನಿತ್ಯ ಹೋಗಿಬರುವುದು ದೊಡ್ಡ ಸಾಹಸವೆನಿಸತೊಡಗಿತು. ಆಗ ಎಲ್ಲರ ಚಿತ್ತ ಜಿಲ್ಲಾಡಳಿತ ಭವನದ ಆಸುಪಾಸಿನ ಸಿಟಿ ಯಲಹಂಕದತ್ತ ಹರಿಯತೊಡಗಿತು. ಪರಿಣಾಮವಾಗಿ ಯಲಹಂಕ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕುದುರತೊಡಗಿದೆ.

    ನಿವೃತ್ತಿ ಹೊಂದುವರಿಗೆ ನಿವೇಶನ ಕನಸು: ಜಿಲ್ಲಾಡಳಿತ ಭವನದಲ್ಲಿ ಸುಮಾರು 600ಕ್ಕೂ ಹೆಚ್ಚು ಸಿಬ್ಬಂದಿ ಪ್ರಸ್ತುತ ಸೇವಾನಿರತರಾಗಿದ್ದು, ಹಲವರು ಸರ್ಕಾರಿ ಸೇವೆಯ ನಿವೃತ್ತಿ ಅಂಚಿನಲ್ಲಿದ್ದಾರೆ. ಯಲಹಂಕ ಈಗ ನಿವೃತ್ತಿ ಹೊಂದುವವರ ಪಾಲಿಗೆ ಹಾಟ್ ಫೆವರೆಟ್ ಎನಿಸಿದೆ. ಹಲವು ನೌಕರರು ಕುಟುಂಬವನ್ನು ಯಲಹಂಕಕ್ಕೆ ಸ್ಥಳಾಂತರ ಮಾಡಿದ್ದಾರೆ. ಮಕ್ಕಳನ್ನು ಯಲಹಂಕದ ಶಾಲಾ ಕಾಲೇಜುಗಳಿಗೆ ಸೇರಿಸಿದ್ದಾರೆ. ನಿವೃತ್ತಿ ಬಳಿಕ ಸ್ವಂತ ಮನೆ ನಿರ್ವಣದ ಕನಸು ಹೊತ್ತಿದ್ದಾರೆ. ಇದಕ್ಕಾಗಿಯೇ ಯಲಹಂಕ ಸುತ್ತಮುತ್ತಲ ನಿವೇಶನ ಖರೀದಿಗೆ ಆಸಕ್ತಿ ತೋರಿಸುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮವೂ ಚುರುಕುಗೊಂಡಿದೆ.

    ಜಮೀನು ಖರೀದಿಗೂ ಲಿಂಕ್: ದೇವನಹಳ್ಳಿ ಸುತ್ತಮುತ್ತ ಜಮೀನಿಗೆ ಚಿನ್ನದ ಬೆಲೆ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದರಿಂದ ತುಂಡು ಭೂಮಿಗೂ ಸಾಕಷ್ಟು ಬೇಡಿಕೆ ಇದೆ. ಯಲಹಂಕದಲ್ಲಿ ಮನೆ ನಿರ್ವಿುಸಿ ದೇವನಹಳ್ಳಿಯ ಆಸುಪಾಸಿನಲ್ಲಿ ಜಮೀನು ಖರೀದಿಸಬೇಕೆಂಬುದು ಹಲವರ ಕನಸು. ಇದಕ್ಕೆ ಪೂರಕವಾಗಿ ದೇವನಹಳ್ಳಿಯ ಕುಂದಾಣ, ಚನ್ನರಾಯಪಟ್ಟಣ ಹೋಬಳಿಗಳ ಸುತ್ತಮುತ್ತ ಜಮೀನು ಖರೀದಿ ಪ್ರಕ್ರಿಯೆಯೂ ಚುರುಕುಪಡೆದಿದೆ. ಜಿಲ್ಲಾಡಳಿತ ಭವನ ಕಾರ್ಯಾರಂಭದ ಬಳಿಕ ದೇವನಹಳ್ಳಿ ಮುಖ್ಯರಸ್ತೆಗಳಲ್ಲಿ ರಿಯಲ್ ಎಸ್ಟೇಟ್ ಕಚೇರಿಗಳು ಹುಟ್ಟಿಕೊಳ್ಳುತ್ತಿವೆ.

    ಗುತ್ತಿಗೆನೌಕರರಿಗೆ ವಾಸ್ತವ್ಯ: ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಸಿಬ್ಬಂದಿಗಿಂತ ಗುತ್ತಿಗೆನೌಕರರು ದುಪ್ಪಟ್ಟು ಇದ್ದಾರೆ. ಪ್ರತಿ ಇಲಾಖೆಯಲ್ಲಿಯೂ 10ಕ್ಕು ಹೆಚ್ಚು ಸಿಬ್ಬಂದಿ ಇದ್ದಾರೆ. ಇದರಲ್ಲಿ ಬಹುತೇಕರು ಬ್ಯಾಚುಲರ್. ಯಲಯಂಕದಲ್ಲಿರುವ ಪಿಜಿಗಳು, ಹಾಸ್ಟೆಲ್​ಗಳು ಗುತ್ತಿಗೆ ನೌಕರರ ಹಾರ್ಟ್ ಪೆವರೇಟ್ ಎನಿಸಿವೆ. ಜಿಲ್ಲಾಡಳಿತ ಭವನಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶದಲ್ಲಿ ಹೇಳಿಕೊಳ್ಳುವಂತ ಪಿಜಿ, ವಸತಿ ನಿಲಯಗಳ ಕೊರತೆಯಿಂದಾಗಿ ಎಲ್ಲರ ಚಿತ್ತ ಯಲಹಂಕದತ್ತಲೇ ಹರಿಯುತ್ತಿದೆ.

    ಯಲಹಂಕದ ಐತಿಹ್ಯ: ಉದ್ಯಾನನಗರಿ ಬೆಂಗಳೂರಿನ ಹೊರವಲಯದಲ್ಲಿದ್ದರೂ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಒಂದು ಸುಸಜ್ಜಿತ ಪ್ರದೇಶವೆಂದೇ ಯಲಹಂಕ ಗುರುತಿಸಿಕೊಂಡಿದೆ. ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ನಗರದಿಂದ ಕೇವಲ 14 ಕಿ.ಮೀ ದೂರದಲ್ಲಿದೆ. ಯಲಹಂಕದಿಂದ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುವುದರಿಂದ ಟ್ರಾಫಿಕ್ ಸಮಸ್ಯೆಯ ಕಿರಿಕಿರಿಯೂ ಇಲ್ಲ. ಯಲಹಂಕ ಐತಿಹಾಸಿಕವಾಗಿಯೂ ಗುರುತಿಸಿಕೊಂಡಿದೆ. ಬೆಂಗಳೂರು-ಗುಂತಕಲ್ಲು ರೈಲು ಮಾರ್ಗದಲಿದ್ದು ಚೋಳರ ಕಾಲದಲ್ಲಿ ಇದನ್ನು ಇಲೈಪಾಕ್ಕಂ ಮತ್ತು ಹೊಯ್ಸಳರ ಕಾಲದಲ್ಲಿ ಎಲಹಕ್ಕ ಎಂದೂ ಸುತ್ತಮುತ್ತಲಿನ ನಾಡನ್ನು ಯಲಹಂಕ ನಾಡು ಎಂದೂ ಕರೆಯಲಾಗುತ್ತಿತ್ತು ಎಂಬುದಕ್ಕೆ ಐತಿಹಾಸಿಕ ಪುರಾವೆ ಇದೆ. ಹಲವು ರಾಜವಂಶಗಳು ಯಲಹಂಕವನ್ನು ಆಳಿವೆ. 1728ರಲ್ಲಿ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಯಿತು ಎನ್ನಲಾಗಿದೆ. ಯಲಹಂಕದ ವೇಣುಗೋಪಾಲ ದೇವಾಲಯ ಪ್ರಸಿದ್ದವಾಗಿದ್ದು. ಪ್ರತಿವರ್ಷ ಚೈತ್ರ ಶುದ್ಧ ಅಷ್ಟಮಿಯಂದು ರಥೋತ್ಸವ ವಿಜೃಂಭಣೆಯಾಗಿ ನೆರವೇರುತ್ತದೆ.

    ದೊಡ್ಡಬಳ್ಳಾಪುರಕ್ಕೂ ಸಂಪರ್ಕ: ಯಲಹಂಕ ದೇವನಹಳ್ಳಿಯಷ್ಟೆ ಅಲ್ಲದೆ ದೊಡ್ಡಬಳ್ಳಾಪುರಕ್ಕೂ ಸಂಪರ್ಕ ಕಲ್ಪಿಸುವ ಹೃದಯ ಭಾಗವಾಗಿರುವುದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಏಷ್ಯಾಖಂಡದಲ್ಲೆ ಹೆಚ್ಚು ಉತ್ತಮ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ಉದ್ಯೋಗ ಅರಸುವವರನ್ನು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಕೈಬೀಸಿ ಕರೆಯುತ್ತಿದೆ. ಜಿಲ್ಲಾಡಳಿತ ಭವನವು ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 207ರಲ್ಲೇ ಇರುವುದರಿಂದ ಇವೆರಡಕ್ಕೂ ಹತ್ತಿರದಲ್ಲೇ ಯಲಹಂಕ ಸಿಟಿ ವರದಾನವಾಗಿದೆ. ಜಿಲ್ಲಾಡಳಿತ ಭವನ ಕಾರ್ಯಾರಂಭದ ಬಳಿಕ ಯಲಹಂಕ ಸರ್ಕಾರಿ ನೌಕರರ ಗಮನ ಸೆಳೆಯುತ್ತಿದೆ.

    ಜಿಲ್ಲಾಡಳಿತ ಭವನದಿಂದ ಬೆಂಗಳೂರು ಸೇರಲು ಎರಡೂವರೆ ತಾಸು ಬೇಕಾಗುತ್ತದೆ. ಟ್ರಾಫಿಕ್​ನಲ್ಲೇ ಅರ್ಧ ಆಯಸ್ಸು ಕಳೆದುಹೋಗುತ್ತದೆ. ಯಲಹಂಕಕ್ಕೆ ಕೇವಲ 23 ನಿಮಿಷದ ಪ್ರಯಾಣ ಪ್ರತಿನಿತ್ಯ ಕಚೇರಿಗೆ ಹೋಗಿಬರಲು ಯಾವುದೇ ಸಮಸ್ಯೆ ಇಲ್ಲ. | ರಾಜೇಶ್ ಗುತ್ತಿಗೆನೌಕರ

    ನನ್ನ ಪತಿ ಮಕ್ಕಳು ಬೆಂಗಳೂರಿನಲ್ಲೇ ಇದ್ದಾರೆ, ನಾನು ಪ್ರತಿನಿತ್ಯ ಬೀರಸಂದ್ರದಿಂದ ಬೆಂಗಳೂರಿಗೆ ಹೋಗಿ ಬರಲು ಆಗಲ್ಲ. ಅದಕ್ಕೆ ಯಲಹಂಕದಲ್ಲೇ ಬಾಡಿಗೆ ಮನೆ ಹಿಡಿದಿದ್ದೇನೆ. ನಿವೃತ್ತಿ ಬಳಿಕ ಇಲ್ಲಿಯೇ ನಿವೇಶನ ಕೊಂಡು ಮನೆ ನಿರ್ಮಾಣ ಮಾಡಬೇಕು ಎಂಬ ಯೋಜನೆ ಇದೆ. | ಶಕುಂತಲಾದೇವಿ ಅಧಿಕಾರಿ

    ಶಿವರಾಜ ಎಂ

     

    ಕರೋನಾ ಹರಡಿದ್ರೆ ಜೋಕೆ!: ಬಂಧಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ ಎಚ್ಚರಿಕೆ ಎಂದ ಬೆಂಗಳೂರು ಪೊಲೀಸ್ ಕಮಿಷನರ್​

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts