More

    ವರ್ಷವಾದರೂ ಮುಗಿಯದ ಕೆಲಸ

    ಸಿದ್ದಾಪುರ: ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಿ ಒಂದೂವರೆ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ರಸ್ತೆಯಲ್ಲಿ ಖಡಿ ಚೆಲ್ಲಾಪಿಲ್ಲಿಯಾಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.

    ತಾಲೂಕಿನ ಕ್ಯಾದಗಿ ಹಾಗೂ ದೊಡ್ಮನೆ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಮುಖ್ಯ ಸಂಪರ್ಕ ಕೊಂಡಿ ಯಾಗಿರುವ ಕಲ್ಲಾಳ-ದೊಡ್ಮನೆ ರಸ್ತೆಯ ಆಲ್ಕೋಣೆಯಿಂದ ಮಲ್ಲಳ್ಳಿ ದೇವಸ್ಥಾನದವರೆಗಿನ ರಸ್ತೆಯಲ್ಲಿ ಕಲ್ಲಿನ ಖಡಿ ಕಿತ್ತಿರುವುದರಿಂದ ವಾಹನ ಸಂಚಾರ ಮಾಡದ ಸ್ಥಿತಿ ನಿರ್ವಣವಾಗಿದೆ. ಅದರಲ್ಲಿಯೂ ದ್ವಿಚಕ್ರವಾಹನದವರು ಸಂಚರಿಸುವುದು ಅಸಾಧ್ಯವಾಗಿದೆ.

    ರಸ್ತೆ ಅವ್ಯವಸ್ಥೆಯಿಂದಾಗಿ ಊರಿಗೆ ಯಾವುದೇ ವಾಹನದವರು ಬರುವುದಕ್ಕೂ ಮುಂದಾಗುತ್ತಿಲ್ಲ. ನಿತ್ಯ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನ ಊರಿಗೆ ಬರುತ್ತಿಲ್ಲ ಎಂದು ಪಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಡಿಸೆಂಬರ್ 2019ರಲ್ಲಿ ರಸ್ತೆ ಕಾಮಗಾರಿ ಪ್ರಾರಂಭಗೊಂಡಿದೆ. 2020 ರ ಮಾರ್ಚ್​ನಲ್ಲಿ ಕರೊನಾ ಕಾರಣದಿಂದ ಹಾಗೂ ಕೆಲಸಗಾರರ ತೊಂದರೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಪುನಃ 2020 ನವೆಂಬರ್​ನಲ್ಲಿ ಒಂದು ವಾರ ಕಾಟಾಚಾರಕ್ಕೆಂಬಂತೆ ಕೆಲಸ ಮಾಡಿ ಹೋದವರು ಇತ್ತ ಬಂದಿಲ್ಲ. 2021 ಜನವರಿ 15ರೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದರೂ ಇನ್ನೂ ಪೂರ್ಣಗೊಳಿಸಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯಂದಾಗಿ ಗ್ರಾಮೀಣ ಪ್ರದೇಶದ ಒಳ ಹಳ್ಳಿಯ ನೂರಾರು ಮನೆಯವರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ದೊಡ್ಮನೆ ಮೂಲಕ ಬುರುಡೆ ಫಾಲ್ಸ್​ಗೆ ಬರುವ ಪ್ರವಾಸಿಗರೂ ತೊಂದರೆ ಪಡುವ ಸ್ಥಿತಿ ಎದುರಾಗಿದೆ.

    ಇದೇ ರಸ್ತೆಯ ಕಟ್ಟೆಗದ್ದೆ ಮಿನಿ ಸೇತುವೆ (ಸಿಡಿ)ಗೆ ತಡೆಗೋಡೆ ನಿರ್ವಿುಸಬೇಕಿತ್ತು. ಅಲ್ಲಿ ಮರಳು ಚೀಲ ಇಟ್ಟು ಕಾಟಾಚಾರಕ್ಕೆ ತಡೆಗೋಡೆ ನಿರ್ವಿುಸಲಾಗಿದೆ. ಕಾಮಗಾರಿಯನ್ನು ಬೇಗ ಮುಗಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

    ರಸ್ತೆಯಲ್ಲಿ ಖಡಿಯಿಂದ ಸಂಚಾರಕ್ಕೆ ಅನಾನುಕೂಲವಾಗಿದೆ ನಿಜ. ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಒಂದು ವಾರದೊಳಗೆ ಆರಂಭಿಸುವುದಾಗಿ ತಿಳಿಸಿದ್ದಾರೆ.

    | ಶಿವಪ್ರಕಾಶ

    ಇಂಜಿನಿಯರ್ ಲೋಕೋಪಯೋಗಿ ಇಲಾಖೆ

    ಪ್ರತಿಭಟನೆ ಎಚ್ಚರಿಕೆ

    ರಸ್ತೆ ಅಭಿವೃದ್ಧಿ ಕಾಮಗಾರಿ ಗುತ್ತಿಗೆ ಪಡೆದವರು ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದಾರೆ. ಇಂಥವರು ಈ ರೀತಿ ಕಾಮಗಾರಿ ಮಾಡಿದರೆ ಹೇಗೆ? ಒಂದು ವಾರದೊಳಗೆ ಕಾಮಗಾರಿ ಪ್ರಾರಂಭಿಸದಿದ್ದರೆ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗವುದು ಎಂದು ಸ್ಥಳೀಯರಾದ ಶಿವಾನಂದ ಹೆಗಡೆ ನೈಗಾರ, ಗಣಪತಿ ಭಟ್ಟ, ಮಂಜುನಾಥ ಹೆಗಡೆ, ವೆಂಕಟ್ರಮಣ ನಾಯ್ಕ, ನಾಗರಾಜ ಭಟ್ಟ, ಸುಮುಖ ಹೆಗಡೆ ಮತ್ತಿತರರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts