More

    ಆರ್‌ಒ ಘಟಕ ನಿರ್ವಹಣೆಗೆ ತಾಪಂ ಆಡಳಿತಾಧಿಕಾರಿ ಶರಣಬಸವರಾಜ ಸೂಚನೆ

    ಯಲಬುರ್ಗಾ: ಕ್ಷೇತ್ರದ ಜನರಿಗೆ ಶುದ್ಧ ನೀರಿನ ತೊಂದರೆ ಆಗದಿರಲು ಆರ್‌ಒ ಘಟಕಗಳು ಸದಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ತಾಪಂ ಆಡಳಿತಾಧಿಕಾರಿ ಶರಣಬಸವರಾಜ ಆರ್‌ಡಬ್ಲುೃಎಸ್ ಎಇಇ ಸತೀಶ್ ಪಾಟೀಲ್‌ಗೆ ಸೂಚಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಒಟ್ಟು 153 ಆರ್‌ಒ ಘಟಕಗಳಿದ್ದು, ಕೆಲವು ಸಣ್ಣಪುಟ್ಟ ಸಮಸ್ಯೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಅವುಗಳನ್ನು ದುರಸ್ತಿಗೊಳಿಸಲಾಗುವುದು ಎಂದು ಆರ್‌ಡಬ್ಲುೃಎಸ್ ಅಧಿಕಾರಿ ತಿಳಿಸಿದರು.

    ತಾಪಂ ಪ್ರಭಾರ ಇಒ ಸೋಮಶೇಖರ ಬಿರಾದಾರ ಮಾತನಾಡಿ, ಯಲಬುರ್ಗಾ ತಾಲೂಕಿನಲ್ಲಿ 15, ಕುಕನೂರು ವ್ಯಾಪ್ತಿಯಲ್ಲಿ 3 ಘಟಕಗಳು ಸಣ್ಣ ಸಮಸ್ಯೆಯಿಂದ ಸ್ಥಗಿತವಾಗಿವೆ. ಅವುಗಳನ್ನು ವಾರದೊಳಗಾಗಿ ದುರಸ್ತಿಪಡಿಸಿ, ಸಾರ್ವಜನಿಕರಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡುವಂತೆ ಆರ್‌ಡಬ್ಲುೃಎಸ್ ಎಇಇ ಸತೀಶ್ ಪಾಟೀಲ್‌ಗೆ ಸೂಚಿಸಿದರು.

    ಆಡಳಿತಾಧಿಕಾರಿ ಶರಣಬಸವರಾಜ ಮಾತನಾಡಿ, ತಾಪಂನಲ್ಲಿ ನಡೆಯುವ ಸಭೆಗೆ ಜೆಸ್ಕಾಂ ಎಇಇ ಒಂದು ಬಾರಿಯೂ ಹಾಜರಾಗಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸ್ಥಗಿತಗೊಂಡ ಕೊಳವೆ ಬಾವಿಗಳಿಗೆ ಬಿಲ್ ನೀಡಲಾಗುತ್ತಿದೆ. ಇದನ್ನು ಸರಿಪಡಿಸಲು ಎಇಇ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಪಿಡಿಒಗಳು ಹಲವು ಬಾರಿ ದೂರು ನೀಡಿದ್ದಾರೆ. ಮೂರು ದಿನದೊಳಗೆ ಪಿಡಿಒ ಹಾಗೂ ಜೆಸ್ಕಾಂ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಕಳೆದ ವಾರ ಹುಲೇಗುಡ್ಡಕ್ಕೆ ಡಿಸಿ, ಸಿಇಒ ಭೇಟಿ ನೀಡಿದಾಗ ಗ್ರಾಮದಲ್ಲಿ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡ ವಿಷಯ ಜೆಸ್ಕಾಂ ಎಇಇ ಗಮನಕ್ಕೆ ತಂದರೂ ಉಡಾಫೆಯಾಗಿ ಪ್ರತಿಕ್ರಿಯಿಸಿದ್ದಾರೆ. ಇಂದಿನ ಸಭೆಗೂ ಬಾರದ ಅವರ ವಿರುದ್ಧ ನೋಟಿಸ್ ಜಾರಿ ಮಾಡುವುದಾಗಿ ತಾಪಂ ಇಒ ತಿಳಿಸಿದರು.

    ರೈತರ ಜಮೀನುಗಳಲ್ಲಿ 1110 ಎರೆಹುಳು ಘಟಕ ನಿರ್ಮಾಣ ಗುರಿ ಹೊಂದಲಾಗಿತ್ತು. ಅದರಲ್ಲಿ ಸದ್ಯ 870 ಘಟಕ ನಿರ್ಮಿಸಲಾಗಿದೆ. ಇನ್ನುಳಿದ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದ 1041 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಅಧಿಕಾರಿ ಪ್ರಾಣೇಶ ಹಾದಿಮನಿ ಸಭೆಯ ಗಮನಕ್ಕೆ ತಂದರು.

    ಆದರ್ಶ ಗ್ರಾಮಕ್ಕೆ ಯಾವ್ಯಾವ ಹಳ್ಳಿ ಗುರುತಿಸಲಾಗಿದೆ? ಅವುಗಳ ಪ್ರಗತಿ ಏನಾಗಿದೆ ಎಂದು ಆಡಳಿತಾಧಿಕಾರಿ ಶರಣಬಸವರಾಜ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಕೆ. ಬಡಿಗೇರ, ಕಕ್ಕಿಹಳ್ಳಿ, ವಟಪರ್ವಿ, ಚಿಕ್ಕೊಪ್ಪ ಆಯ್ಕೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

    ಸಣ್ಣ ನೀರಾವರಿ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ 19 ಚೆಕ್ ಡ್ಯಾಂ ಕಾಮಗಾರಿಯಲ್ಲಿ 10 ಪೂರ್ಣಗೊಂಡಿವೆ. 9 ಪ್ರಗತಿಯಲ್ಲಿವೆ. 4 ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇ ಪ್ರಕಾಶಗೌಡ ಪಾಟೀಲ್ ಸಭೆಗೆ ತಿಳಿಸಿದರು.

    ನಾಲ್ಕು ಅಧಿಕಾರಿಗಳಿಗೆ ನೋಟಿಸ್: ತಾಪಂ ಸಾಮಾನ್ಯ ಸಭೆಗೆ ಗೈರಾದ ಜೆಸ್ಕಾಂ, ಸಿಡಿಪಿಒ, ಕೆಆರ್‌ಐಡಿಎಲ್ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

    ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್, ಅಧಿಕಾರಿಗಳಾದ ಎಸ್.ವಿ. ಭಜಂತ್ರಿ, ಎಫ್.ಎಂ. ಕಳ್ಳಿ, ಎಸ್.ವಿ. ಭಜಂತ್ರಿ, ಮಹಾದೇವಪ್ಪ, ಪ್ರಕಾಶ ಚೂರಿ, ರಮೇಶ ಚಿಣಗಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts