More

    ಅಧಿಕಾರಿಗಳು ಎಚ್ಚೆತ್ತರೆ ಯೋಜನೆಗಳು ಯಶಸ್ವಿ: ತಾಪಂ ಆಡಳಿತಾಧಿಕಾರಿ ಸಮೀರ್ ಮುಲ್ಲಾ ಕಿವಿಮಾತು

    ಯಲಬುರ್ಗಾ: ಬಡ ರೈತರ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಸ್ಕಾಲರ್‌ಷಿಪ್ ಬಗ್ಗೆ ಕೃಷಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ತಾಪಂ ಆಡಳಿತಾಧಿಕಾರಿ ಸಮೀರ್ ಮುಲ್ಲಾ ಸೂಚಿಸಿದರು.

    ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದ ಅರ್ಹ ರೈತ ಮಕ್ಕಳಿಗೆ ಯೋಜನೆ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ, ಬಿಇಒ ಪದ್ಮನಾಭ ಕರ್ಣಂ ಗಂಭೀರವಾಗಿ ತೆಗೆದುಕೊಳ್ಳಬೇಕು.ಅಧಿಕಾರಿಗಳು ಎಚ್ಚೆತ್ತರೆ ಯೋಜನೆಗಳು ಯಶಸ್ವಿಯಾಗುತ್ತವೆ ಎಂದರು.

    ಗಂಗಾವತಿಯ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಮಣ್ಣು ಪರೀಕ್ಷೆಗಾಗಿ ಸರ್ಕಾರ ರೈತರಿಂದ 200 ರೂ.ಪಡೆಯುತ್ತಿದ್ದು, ಮೇಲಧಿಕಾರಿಗಳ ಗಮನಕ್ಕೆ ತಂದು ಕಡಿಮೆ ಮಾಡಿಸಿ ಎಂದು ಎಡಿ ಪ್ರಾಣೇಶಗೆ ಸೂಚಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಎನ್‌ಆರ್‌ಸಿ ಕೇಂದ್ರ ತೆರೆದು ಅಂಗನವಾಡಿಯಲ್ಲಿರುವ ತೀವ್ರ ಅಪೌಷ್ಟಿಕ ಮಕ್ಕಳನ್ನು ದಾಖಲಿಸಬೇಕು. ಕೇಂದ್ರಕ್ಕೆ ಆರೋಗ್ಯ ಸಿಬ್ಬಂದಿ, ವೈದ್ಯರನ್ನು ನೇಮಿಸಬೇಕು ಎಂದು ಟಿಎಚ್‌ಒ ಸುನೀಲ್ ಚಿತ್ರಗಾರ್‌ಗೆ ಆಡಳಿತಾಧಿಕಾರಿ ನಿರ್ದೇಶಿಸಿದರು.ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು.

    ತಾಪಂ ಇಒ ಸಂತೋಷ ಪಾಟೀಲ್, ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್, ಬಿಇಒ ಪದ್ಮನಾಭ ಕರ್ಣಂ, ಅಧಿಕಾರಿಗಳಾದ ವಿ.ಕೆ.ಬಡಿಗೇರ, ಎಫ್.ಎಂ.ಕಳ್ಳಿ, ಪ್ರಕಾಶ ಚೂರಿ, ಮಂಜುನಾಥ ಲಿಂಗಣ್ಣವರ್, ಶಿವಶಂಕರ ಕರಡಕಲ್, ಷರೀಫ್ ಕೊತ್ವಾಲ್, ಪಿ.ಚಿದಂಬರ, ಗೌತಮ ಜಾಧವ್ ಇತರರಿದ್ದರು.

    ಅಂಗನವಾಡಿ ಸುತ್ತ ಗಿರಿಕಿ
    ಸಭೆಯಲ್ಲಿ ಇತರ ವಿಷಯಗಳು ಚರ್ಚೆಗೆ ಬಂದಷ್ಟೇ ವೇಗವಾಗಿ ಬದಿಗೆ ಸರಿದರೆ ಬಹುತೇಕ ಅಂಗನವಾಡಿ ವಿಷಯದ ಸುತ್ತ ಗಿರಿಕಿ ಹೊಡೆಯಿತು. ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ, ದುರಸ್ತಿಗಾಗಿ ಕೆಕೆಆರ್‌ಡಿಬಿ, ಶಾಸಕರ ಅನುದಾನದಲ್ಲಿ ಕೆಲಸ ಆರಂಭವಾಗಿವೆಯಾ? ಎಂದು ಸಿಡಿಪಿಒ ಸಿಂಧು ಎಲಿಗಾರಗೆ ಸಮೀರ್ ಮುಲ್ಲಾ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಧು, ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ 377 ಅಂಗನವಾಡಿಗಳಿವೆ. ಯಲಬುರ್ಗಾ ತಾಲೂಕಿನ 198 ಕೇಂದ್ರಗಳ ಪೈಕಿ ಜಿಪಂ ಯೋಜನೆಯಡಿ 117ರಲ್ಲಿ ಶೌಚಗೃಹ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ 66 ಶೌಚಗೃಹ ನಿರ್ಮಿಸಲಾಗಿದೆ ಎಂದು ಉತ್ತರಿಸಿದರು. ಅಂಗನವಾಡಿಗಳಲ್ಲಿ ಬಾಲಸ್ನೇಹಿ ಪೇಂಟಿಂಗ್ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸಬೇಕು. ಬಾಕಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ನಿರ್ಮಿತಿ ಕೇಂದ್ರದ ಅಧಿಕಾರಿ ಮಹಾದೇವಪ್ಪ ಪತ್ತಾರ್‌ಗೆ ಆಡಳಿತಾಧಿಕಾರಿ ಸೂಚಿಸಿದರು. ಅಂಗನವಾಡಿ ಮತ್ತು ಶಾಲೆಗಳಿಗೆ ಜೆಜೆಎಂ ಮೂಲಕ ನೀರು ಪೂರೈಕೆ, ಸೋಕ್‌ಪಿಟ್ ನಿರ್ಮಿಸಬೇಕೆಂದು ಆರ್‌ಡಬ್ಲುೃಎಸ್ ಎಇಇ ಸಂತೋಷ ಪಾಟೀಲ್‌ಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts