More

    ಅಧಿಕಾರದ ಹಗಲುಗನಸು ಕಾಣುತ್ತಿದೆ ಕಾಂಗ್ರೆಸ್: ಸಚಿವ ಹಾಲಪ್ಪ ಆಚಾರ್ ವ್ಯಂಗ್ಯ

    ಯಲಬುರ್ಗಾ: ಅಧಿಕಾರದ ಲಾಲಸೆಗಾಗಿ ದೇಶವನ್ನು ತುಂಡರಿಸಿದ ಕಾಂಗ್ರೆಸ್ ಇಂದು ದೇಶದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

    ಹಿರೇವಡ್ರಕಲ್ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಜಮೀನು ಸರ್ವೇಗಾಗಿ ಡ್ರೋನ್ ಕ್ಯಾಮರಾಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಜನಪರ ಕಾಳಜಿ, ಇಚ್ಛಾಶಕ್ತಿ ಇಲ್ಲದ ಕಾಂಗ್ರೆಸ್ ಕೇವಲ ಕುಟುಂಬದ ಸದಸ್ಯರಿಗಾಗಿ ಅಧಿಕಾರ ನಡೆಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶ ನನ್ನ ಕುಟುಂಬ ಎಂದು ಅಧಿಕಾರ ನಡೆಸುವ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯ ವ್ಯತ್ಯಾಸ ಇಷ್ಟೇ. ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಅಧಿಕಾರದ ಹಗಲುಗನಸು ಕಾಣುತ್ತಿದೆ. ಎಷ್ಟೇ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರಲ್ಲ ಎಂದರು. ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಓಮಣ್ಣ ಚನ್ನದಾಸರ, ಪ್ರಮುಖರಾದ ಬಸಲಿಂಗಪ್ಪ ಭೂತೆ, ನಿಂಗಪ್ಪ ಹೊರಪೇಟಿ, ಸಣ್ಣ ಮರಿಯಪ್ಪ ವಾಲಿಕಾರ, ಸಿದ್ದಪ್ಪ, ಶಿವಣ್ಣ ಗಾಣಧಾಳ, ರತನ್ ದೇಸಾಯಿ, ಹನುಮರಡ್ಡಿ ರಡ್ಡೇರ, ಸುಧಾಕರ ದೇಸಾಯಿ ತರರಿದ್ದರು.

    ರೈತರ ಕೈಗೆ ಪಹಣಿ ಸಿಗಲಿ: ನಾನೂ ರೈತನ ಮಗನಾಗಿ ಹಿರೇವಡ್ರಕಲ್ ರೈತರ ಜಮೀನು ಸರ್ವೇ ಸಮಸ್ಯೆ ಗಂಭೀರವಾಗಿ ತೆಗೆದುಕೊಂಡಿರುವೆ. ಆದ್ಯತೆ ಮೇರೆಗೆ ವೈಜ್ಞಾನಿಕವಾಗಿ ಸರ್ವೇ ನಡೆಸಲು ಡ್ರೋನ್ ಬಳಸಲಾಗುತ್ತಿದೆ. ಇದೊಂದು ಸವಾಲಿನ ಕೆಲಸವಾಗಿದ್ದು ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಸಹಕಾರ ಮುಖ್ಯ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು. ಗ್ರಾಮದ ಮುಖಂಡ ಹನುಮಂತಪ್ಪ ಮಧ್ಯಪ್ರವೇಶಿಸಿ, ಗ್ರಾಮದ ಜಮೀನುಗಳ ಸರ್ವೇ ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ತ್ವರಿತಗತಿಯಲ್ಲಿ ಅಧಿಕಾರಿಗಳು ಸಮೀಕ್ಷೆ ನಡೆಸಿ ರೈತರ ಕೈಗೆ ಪಹಣಿ ಸಿಗುವಂತಾಗಬೇಕು. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ನಿಮ್ಮ ಸಮಸ್ಯೆ ಪರಿಹಾರಕ್ಕೆ ತಾಲೂಕಿನ ಅಧಿಕಾರಿಗಳು ಹಾಗೂ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದು, ದೇವರ ಸಾಕ್ಷಿಯಾಗಿ ಸಮಸ್ಯೆ ನಿವಾರಣೆಗೆ ಮುಂದಾಗಿದ್ದೇನೆ. ಇಷ್ಟೆಲ್ಲ ಗೊತ್ತಿದ್ದರೂ ಮಾತನಾಡುವ ಉದ್ದೇಶವೇನು? ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts