More

    ಜನಪದ ಕಲಾ ಸೇವೆಗೆ ಒಲಿದ ಕೇಂದ್ರ ಪ್ರಶಸ್ತಿ: ಮಾರೆಪ್ಪ ಚನ್ನದಾಸರಗೆ ಸಂಗೀತ ನಾಟಕ ಅಕಾಡೆಮಿ ಅಮೃತ ಪುರಸ್ಕಾರ

    ಯಲಬುರ್ಗಾ: ಪಟ್ಟಣದ ನಿವಾಸಿ, ಹಿರಿಯ ಜನಪದ ಗಾಯಕ, ಏಕದಾರಿ ಮಾರೆಪ್ಪ ಚನ್ನದಾಸರ ಅವರ 66 ವರ್ಷಗಳ ಕಲಾ ಸೇವೆಗೆ 2022ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಅಮೃತ ಪ್ರಶಸ್ತಿ ಒಲಿದು ಬಂದಿದೆ.
    ಮಾರೆಪ್ಪ ಮತ್ತು ದುರಗಮ್ಮ ದಂಪತಿಯ ಪುತ್ರರಾದ ಮಾರೆಪ್ಪ ಚನ್ನದಾಸರ ಓದಿದ್ದು ಕೇವಲ 4ನೇ ತರಗತಿ. ಅದೂ ಲಿಂಗನಬಂಡಿ ಗ್ರಾಮದ ಗುಡಿಗುಂಡಾರದಲ್ಲಿ ಶಿಕ್ಷಣ ಪಡೆದಿದ್ದಾರೆ. ಚಿಕ್ಕಂದಿನಿಂದಲೂ ಅಲೆಮಾರಿ ಜೀವನ, ಗುಡಾರಗಳಲ್ಲಿ ವಾಸ ಮಾಡುತ್ತ ಕಲಾ ಸೇವೆ ಮಾಡಿದ್ದಾರೆ. ಲಿಂಗಸುಗೂರು ತಾಲೂಕಿನ ನೀರಲೂಟಿ ಅಲೆಮಾರಿ ರಾಮಣ್ಣ ಮಾಸ್ತರರಿಂದ ತಂಬೂರಿ, ಪಿಟೀಲು ವಾದನ ಜತೆಗೆ ದಾಸರ ಪದ, ತತ್ವಪದ ಹಾಡಲು ಕಲಿತಿದ್ದಾರೆ. ಅಲ್ಲದೆ ಕೋಲೆಬಸವ, ಪಾರಂಪರಿಕ ತತ್ವಪದಗಳ ಗಾಯನ, ತಂಬೂರಿ ವಾದನ ಮಾಡುತ್ತ ನೂರಾರು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತ ಕಲೆಯನ್ನು ಒಲಿಸಿಕೊಂಡಿದ್ದಾರೆ.
    ಮನೆ ಮನೆಗೆ ತೆರಳಿ ಕಲೆ ಪ್ರದರ್ಶನ: ಕಳೆದ 66 ವರ್ಷ ಅಲೆಮಾರಿ ಜೀವನ ನಡೆಸಿರುವ ಮಾರಪ್ಪ, ಗ್ರಾಮಗಳ ಮನೆ ಮನೆಗಳಿಗೆ ಹೋಗಿ ಪಾರಂಪರಿಕ ಕಲೆ ಪ್ರದರ್ಶಿಸುತ್ತ ದಾನ ಸ್ವೀಕರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸರ್ಕಾರ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಕಾಶವಾಣಿ ಧಾರವಾಡ, ಹೊಸಪೇಟೆ ಹಾಗೂ ಚಂದನ ಟಿವಿ ವಾಹಿನಿಯಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ಸದ್ಯ 83 ವರ್ಷದ ಇಳಿವಯಸ್ಸಿನಲ್ಲಿರುವ ಮಾರೆಪ್ಪ ಚನ್ನದಾಸರ, ಒಂಬತ್ತು ವರ್ಷಗಳಿಂದ ಪಟ್ಟಣದ ಅಂಬೇಡ್ಕರ್ ಆಶ್ರಯ ಯೋಜನೆಯ ಮನೆಯಲ್ಲಿ ಬದುಕಿನ ಬಂಡಿ ನಡೆಸುತ್ತಿದ್ದಾರೆ.


    ಅರಸಿ ಬಂದಿವೆ ಪುರಸ್ಕಾರಗಳು: ಏಕದಾರಿ ಮಾರೆಪ್ಪ ಅವರ ಕಲಾ ಸೇವೆಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಜಾನಪದಶ್ರೀ ಪ್ರಶಸ್ತಿ, ಕಲಾವೈಭವ ಉತ್ಸವ ಹಾಗೂ ಕಸಾಪ ಅಭಿನಂದನಾ ಪತ್ರ, ಲಕ್ಕುಂಡಿ ಉತ್ಸವದಲ್ಲಿ ಜಾನಪದ ಗಾಯನ ಹಾಗೂ ಅಭಿನಂದನಾ ಪತ್ರ, ವಿಜಯಪುರ ಅಖಿಲ ಭಾರತ 79ನೇ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಂಸನಾ ಪತ್ರ, ಕರುನಾಡ ಕೋಗಿಲೆ, ಜಾನಪದ ಕೋಗಿಲೆ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜನಪದ ರತ್ನ, ದಶಮಾನೋತ್ಸವ ಪ್ರಶಸ್ತಿ, ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿ, ಕಲಾ ಸಂಗೀತ ಸ್ಮಾರಕ ಪ್ರಶಸ್ತಿ ಹಾಗೂ 2012ರಲ್ಲಿ ದೂರದರ್ಶನ ಚಂದನ ಪ್ರಶಸ್ತಿ ನೀಡಿ ಗೌರವಿಸಿದೆ. 2009ರಲ್ಲಿ ಮಾರೆಪ್ಪ ಚೆನ್ನದಾಸರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸಕ ಮಹಾಂತೇಶ ನೆಲಾಗಣಿ, ಕನ್ನಡ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಮಂಡಿಸಿದ್ದಾರೆ.


    ಚಿಕ್ಕಂದಿನಿಂದ ಬಡತನದ ಬೇಗೆಯಲ್ಲಿ ಬೆಂದಿದ್ದೇನೆ. ನಾನು ತಂಬೂರಿ ಹಿಡಿಯಬೇಕು ಎನ್ನುವ ಹಠ ಇತ್ತು. ಅದರಂತೆ ಗುರು ರಾಮಣ್ಣ ಮಾಸ್ತರರಿಂದ ಊರೂರು ಅಲೆಯುತ್ತ ತಂಬೂರಿ, ಪಿಟೀಲು ಕಲಿತೆ. ಜನಪದ, ತತ್ವಪದ, ಭಾವಗೀತೆ, ಭಕ್ತಿಗೀತೆ ಹಾಡಲು ರೂಢಿಸಿಕೊಂಡೆ. ಅಕ್ಷರ ಜ್ಞಾನ ನೀಡಿದವರು ಅಡವಿರಾವ್ ಮಾಸ್ತರ. ನನಗೆ ಪ್ರಶಸ್ತಿ ಸಿಕ್ಕಿರುವುದು ಕುರುಡನಿಗೆ ಎರಡು ಕಣ್ಣು ಬಂದಷ್ಟೇ ಖುಷಿ ತಂದಿದೆ. ಆಶ್ರಯ ಮನೆಯಲ್ಲಿ ವಾಸವಿದ್ದೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಿಂದೆ ಕಾರ್ಯಕ್ರಮ ನೀಡಲು ಅವಕಾಶ ಸಿಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಬಂದ್ ಆಗಿದೆ. ಇಲಾಖೆ, ಸಂಘ, ಸಂಸ್ಥೆಗಳ ಸಂಭಾವನೆಯಿಂದ ಹೊಟ್ಟೆ ಹೊರೆಯುತ್ತಿದ್ದೇನೆ.

    | ಮಾರೆಪ್ಪ ಚನ್ನದಾಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts