More

    ಯಕ್ಷಗಾನವನ್ನು ಕಡೆಗಣಿಸಿದ ಸರ್ಕಾರಗಳು: ಅಕಾಡೆಮಿ ಅಧ್ಯಕ್ಷ ಪ್ರೊ.ಹೆಗಡೆ ಬೇಸರ

    ದಾವಣಗೆರೆ: ಸರ್ಕಾರಗಳ ದೃಷ್ಟಿಯಲ್ಲಿ ರಂಗಭೂಮಿ ಎಂದರೆ ನಾಟಕ ಮಾತ್ರ ಎನ್ನುವಂತಾಗಿದ್ದು ಸಾಂಪ್ರದಾಯಿಕ, ದೇಶೀಯ ಕಲೆಯಾದ ಯಕ್ಷಗಾನವನ್ನು ಕಡೆಗಣಿಸಿವೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ವಿಷಾದಿಸಿದರು.

    ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ, ಕಂದಾವರ ರಘುರಾಮ ಶೆಟ್ಟಿ ಪ್ರತಿಷ್ಠಾನದ ದಶಮಾನೋತ್ಸವ, ಪ್ರಶಸ್ತಿ ಪ್ರದಾನ, ಯಕ್ಷಗಾನ ತಾಳ ಮದ್ದಳೆ ಮತ್ತು ಪ್ರದರ್ಶನ, ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ಯಕ್ಷಗಾನವೂ ರಂಗಭೂಮಿಯ ಒಂದು ಪ್ರಕಾರ ಎಂಬುದನ್ನು ಸರ್ಕಾರಗಳು ಮರೆತಿವೆ. ನಾಟಕಗಳಿಗೆ ನೀಡುವ ಪ್ರೋತ್ಸಾಹದ ಕಾಲು ಭಾಗವನ್ನೂ ಯಕ್ಷಗಾನಕ್ಕೆ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಹವ್ಯಾಸಿ ಮತ್ತು ವೃತ್ತಿರಂಗಭೂಮಿ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತದೆ. ಆದರೆ, ಯಕ್ಷಗಾನದ ಮೇಳಗಳು, ಅದರ ಕಲಾವಿದರ ಕಡೆಗೆ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಇದರ ವಿರುದ್ಧ ಹೋರಾಟ ಕಟ್ಟುವ ಅಗತ್ಯವಿದೆ ಎಂದರು.

    ಯಕ್ಷಗಾನದಲ್ಲಿ ಸಮೃದ್ಧ ಸಾಹಿತ್ಯವಿದೆ, 6 ಸಾವಿರಕ್ಕೂ ಹೆಚ್ಚು ಪ್ರಸಂಗಗಳಿವೆ. ಇಷ್ಟೆಲ್ಲ ಇದ್ದರೂ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಈ ಪ್ರಕಾರಕ್ಕೆ ಜಾಗವಿಲ್ಲ. ನಿರಂತರ ಒತ್ತಾಯದ ಫಲವಾಗಿ ಈ ಬಾರಿಯ ಸಮ್ಮೇಳನದಲ್ಲಿ ಯಕ್ಷಗಾನದ ಒಂದು ಗೋಷ್ಠಿಯನ್ನು ಆಯೋಜಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತು ಭರವಸೆ ನೀಡಿದೆ ಎಂದು ಹೇಳಿದರು.

    ಕಂದಾವರ ರಘುರಾಮ ಶೆಟ್ಟಿ ಪ್ರತಿಷ್ಠಾನದ ದಶಮಾನೋತ್ಸವ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿದರು.

    ಹಿರಿಯ ಪ್ರಸಂಗಕರ್ತೃ ಕಂದಾವರ ರಘುರಾಮ ಶೆಟ್ಟಿ, ಯಕ್ಷರಂಗ ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ, ಕಲಾಕುಂಚದ ಅಧ್ಯಕ್ಷ ಕೆ.ಎಚ್.ಮಂಜುನಾಥ್, ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಉಮೇಶ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಚಾರಕ ಬಿ.ವಾಮದೇವಪ್ಪ, ಸಾಲಿಗ್ರಾಮ ಗಣೇಶ ಶೆಣೈ ಇದ್ದರು. ಬೇಳೂರು ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts