More

    ಅನಿಶ್ಚಿತತೆ ಮಧ್ಯೆ ತಿರುಗಾಟಕ್ಕೆ ತಯಾರಿ

    ವೇಣುವಿನೋದ್ ಕೆ.ಎಸ್.ಮಂಗಳೂರು

    ಕರೊನಾ ಹಿನ್ನೆಲೆಯಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ಇನ್ನೂ ಅನಿಶ್ಚಿತತೆಯಲ್ಲಿರುವ ನಡುವೆಯೂ, ಬಹುತೇಕ ಮೇಳಗಳು ಆಶಾಭಾವದಲ್ಲೇ ಸಿದ್ಧತೆ ನಡೆಸುತ್ತಿವೆ.

    ಸರ್ಕಾರದಿಂದ ಇನ್ನೂ ಖಚಿತ ಸೂಚನೆ ಬಂದಿಲ್ಲ. ಆದರೆ ಕೊನೇ ಕ್ಷಣದಲ್ಲಿ ಮೇಳ ಹೊರಡಲು ಅನುಮೋದನೆ ಸಿಕ್ಕಿದರೆ ಗಡಿಬಿಡಿ ಬೇಡ ಎನ್ನುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಮೇಳಗಳಲ್ಲೂ ವೇಷಭೂಷಣ, ಟೆಂಟ್ ರಿಪೇರಿ ಮತ್ತಿತರ ತಯಾರಿ ಶುರುವಾಗಿದೆ. ಕೆಲವು ಮೇಳಗಳಲ್ಲಿ ಈಗಾಗಲೇ ಮೇಳದ ಯಜಮಾನರು ಕಲಾವಿದರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಯಾವುದೇ ರೀತಿಯಲ್ಲೂ ಆಟ ರದ್ದು ಮಾಡುವುದು ಬೇಡ, ಮುಂದುವರಿಸಲು ನಾವೆಲ್ಲ ಸಿದ್ಧರಿದ್ದೇವೆ ಎಂಬ ಇಂಗಿತ ಕಲಾವಿದರ ಕಡೆಯಿಂದ ಬಂದಿದೆ.
    ಬಹುತೇಕ ಎಲ್ಲ ಮೇಳಗಳೂ ನವೆಂಬರ್ 2ನೇ ವಾರದಲ್ಲಿ ತಿರುಗಾಟ ಆರಂಭಿಸುವ ನಿರೀಕ್ಷೆಯಲ್ಲಿದ್ದರೆ, ಕೆಲವು ಮೇಳಗಳ ಯಜಮಾನರ ಪ್ರಕಾರ ನವೆಂಬರ್‌ನಲ್ಲಿ ಹೊರಡುವ ಬದಲು ಈ ಬಾರಿ ಒಂದು ತಿಂಗಳು ತಡವಾದರೂ ಅಚ್ಚರಿಯೇನಿಲ್ಲ.

    ನಮ್ಮ ಮೇಳಗಳ ಕಲಾವಿದರೆಲ್ಲರೂ ಆಟಕ್ಕೆ ಸಿದ್ಧರಾಗಿಯೇ ಇದ್ದಾರೆ. ಕರೊನಾ ಕಾರಣಕ್ಕೆ ರದ್ದು ಮಾಡುವ ಮಾತಿಲ್ಲ. ಅವರೆಲ್ಲರೂ ಉತ್ಸಾಹದಿಂದ ಇದ್ದಾರೆ. ಪ್ರಸಂಗ ಸಿದ್ಧಗೊಳಿಸಿದ್ದೇವೆ, ಇನ್ನು ಪ್ರಕಟಣೆ ಕೊಡುವುದಷ್ಟೇ ಬಾಕಿ ಇದೆ. ಸರ್ಕಾರ ಈ ನಡುವೆ ಯಾವ ತೀರ್ಮಾನ ಕೈಗೊಳ್ಳುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿ ಹೇಳಿದರು.

    ಟೆಂಟ್ ಮೇಳಗಳಿಗೆ ಸವಾಲು
    ಬಯಲಾಟಗಳಿಗೆ, ಅದರಲ್ಲೂ ದೇವಸ್ಥಾನಗಳ ಮೇಳಗಳಿಗೆ ಸಾಧಾರಣ ಇಡೀ ವರ್ಷದ ಆಟ ಬುಕ್ ಆಗಿರುತ್ತದೆ. ಅವರಿಗೆ ಯಾವುದೇ ಕೊರತೆ ಆಗುವುದಿಲ್ಲ. ಆದರೆ ಟೆಂಟ್ ಮೇಳಗಳಿಗೆ ಹಾಗಿಲ್ಲ. ಆಡಿಸುವವರು ಸಿಗಬೇಕು, ವರ್ಷವಿಡೀ ಬುಕಿಂಗ್ ಇರುವುದಿಲ್ಲ, ಬುಕಿಂಗ್ ಇಲ್ಲದಿದ್ದರೆ ಮೇಳದವರೇ ಆಡಿಸಬೇಕಾಗುತ್ತದೆ. ಒಂದು ವೇಳೆ ಸರಿಯಾಗಿ ಕಲೆಕ್ಷನ್ ಆಗದಿದ್ದರೆ ಏನು ಮಾಡುವುದು ಎನ್ನುವ ಪ್ರಶ್ನೆ ಯಜಮಾನರದ್ದು.
    ನಾನು ಮುಂದಿನ ತಿಂಗಳು ನಮ್ಮ ಐದೂ ಮೇಳಗಳ ಕಲಾವಿದರನ್ನು ಆಯಾ ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಕರೆದು ಸಮಾಲೋಚನೆ ಮಾಡುತ್ತೇನೆ. ಆಟದ ಸ್ವರೂಪ ಹೇಗಿರಬೇಕು ಎನ್ನುವುದನ್ನು ಚರ್ಚಿಸುತ್ತೇನೆ. ಅಲ್ಲದೆ ಐದರಲ್ಲಿ ಒಂದು ಮೇಳವನ್ನು ಪ್ರಾಯೋಗಿಕವಾಗಿ ಬೇಗನೆ ತಿರುಗಾಟಕ್ಕೆ ಶುರುಮಾಡುವ ಯೋಚನೆಯೂ ಇದೆ ಎಂದು ಸಾಲಿಗ್ರಾಮ, ಹಿರಿಯಡ್ಕ, ಮಡಾಮಕ್ಕಿ, ಸೌಕೂರು ಹಾಗೂ ಹಾಲಾಡಿ ಮೇಳಗಳ ಯಜಮಾನ ಬೈಲೂರು ಕಿಶನ್ ಹೆಗ್ಡೆ ಹೇಳುತ್ತಾರೆ.

    ಬಾಕಿಯಾದ ಪ್ರದರ್ಶನ ಈ ಬಾರಿ
    ಕಳೆದ ಬಾರಿ ಕರೊನಾ ಲಾಕ್‌ಡೌನ್ ಕಾರಣಕ್ಕೆ ಬಹುತೇಕ ಆಟಗಳೂ ಮಾರ್ಚ್ 22ಕ್ಕೇ ಮೊಟಕುಗೊಂಡಿವೆ. ಅವುಗಳನ್ನು ಈ ಬಾರಿ ಆಡಿಸಲು ಆಯೋಜಕರು ತೀರ್ಮಾನಿಸಿದ್ದಾರೆ. ಉಳಿದಂತೆ, ಇನ್ನೂ ಯಾರೂ ಬುಕಿಂಗ್ ಶುರು ಮಾಡಿಲ್ಲ. ಕಟೀಲು ಮೇಳಗಳಲ್ಲೂ ತಿರುಗಾಟಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಧರ್ಮಸ್ಥಳ ಮೇಳದವರೂ ನವೆಂಬರ್‌ನಲ್ಲಿ ತಿರುಗಾಟ ಪ್ರಾರಂಭಿಸುವ ತಯಾರಿಯಲ್ಲಿದ್ದಾರೆ. ಸರ್ಕಾರದ ತೀರ್ಮಾನದ ಮೇಲೆ ಇದನ್ನು ನಿರ್ಧರಿಸಲಾಗುವುದು.

    ಅನ್‌ಲಾಕ್ 4.0 ಆಧಾರದಲ್ಲಿ ನೂರು ಜನರಿಗೆ ಸೀಮಿತವಾಗಿ ಯಕ್ಷಗಾನ ಪ್ರಾರಂಭಿಸಲು ಅನುಮತಿ ಇದೆ. ಆದರೆ ಮುಂದಿನ ದಿನಗಳಲ್ಲಿ ಇದು ಯಾವ ರೀತಿಯಲ್ಲಿ ಬದಲಾವಣೆಯಾಗಲಿದೆ, ಕೇಂದ್ರ ಸರ್ಕಾರದ ತೀರ್ಮಾನ ಯಾವ ರೀತಿ ಇದೆ ಎನ್ನುವುದನ್ನು ನೋಡಿಕೊಂಡು ನಿರ್ಧರಿಸುತ್ತೇವೆ.
    ಕೋಟ ಶ್ರೀನಿವಾಸ ಪೂಜಾರಿ, ಹಿಂದು ಧಾರ್ಮಿಕ ದತ್ತಿ ಖಾತೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts