More

    ಲಾಕ್‌ಡೌನ್ ವೇಳೆ ಹುಟ್ಟಿದೆ ‘ಸಮ್ಮೇಳ’, ಅಸಂಘಟಿತ ಕಲಾವಿದರ ಧ್ವನಿಯಾಗುವ ಉದ್ದೇಶ

    ಕುಂದಾಪುರ: ಇದೊಂದು ಭಿನ್ನ ಕಲಾವಿದರ ಸಂಘ. ಹೆಸರು ಸಮ್ಮೇಳ. ಯಕ್ಷಗಾನ ಗುರು, ಹಿಮ್ಮೇಳ-ಮುಮ್ಮೇಳ ಕಲಾವಿದರು, ರಂಗಪ್ರವೇಶ ಮಾಡುವವರಿಗೆ ವೇಷಭೂಷಣ ತೊಡಿಸುವವರು, ವೇಷಭೂಷಣ ವಿನ್ಯಾಸಕರು, ಚೆಂಡೆ-ಮದ್ದಳೆ ಕಳಸಿಗೆ-ಚರ್ಮದ ಮುಚ್ಚಿಗೆ ಹಾಕುವವರು, ಯಕ್ಷಗಾನ ಸ್ಮರಣಿಕೆ ಸಿದ್ಧಪಡಿಸುವವರು, ಕಸೆ ಸೀರೆಯ ನೇಕಾರರು ಈ ಸಂಘದ ಸದಸ್ಯರು.

    ಲಾಕ್‌ಡೌನ್ ವೇಳೆ ಈ ಸಂಘ ಹುಟ್ಟಿಕೊಂಡಿದ್ದು, ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ. 100ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆಯಾಗಿದೆ. ಬಹುಕಾಲದಿಂದ ಈ ಕ್ಷೇತ್ರದಲ್ಲಿ ಅಸಂಘಟಿತರಾಗಿಯೇ ಉಳಿದು, ಮೇಳವಿಲ್ಲದೆ ದುಡಿಯುವ ವೃತ್ತಿ ಕಲಾವಿದರೆಲ್ಲ ಒಂದೇ ಸೂರಿನಡಿ ಬರುವ ತೀರ್ಮಾನಕ್ಕೆ ಬರುತ್ತಿದ್ದಾರೆ. ಸರ್ಕಾರಕ್ಕೆ, ಕಲಾಪೋಷಕರಿಗೆ ಕಲಾವಿದರ ಆರ್ತ ಧ್ವನಿ ಕೇಳಿಸುವ ಉದ್ದೇಶದೊಂದಿಗೆ ಈ ಸಂಘಟನೆ ಹುಟ್ಟಿಕೊಂಡಿದೆ. ಸಮ್ಮೇಳದ ಕಲಾವಿದರಿಗೆ ಮೇಳ ಎನ್ನುವ ಫಲಕ ಇಲ್ಲ. ಇವರು ಋತು ವ್ಯತ್ಯಾಸ ಇಲ್ಲದೆ ಪೂರ್ಣಕಾಲಿಕ ಯಕ್ಷಗಾನವನ್ನೇ ವೃತ್ತಿಯಾಗಿ ಆಶ್ರಯಿಸಿದವರು.

    ಅತಂತ್ರ ಕಲಾವಿದರು: ವೃತ್ತಿ ಮೇಳದಲ್ಲಿ ದುಡಿಯುವ ಕಲಾವಿದರಿಗೆ ಮೇಳದ ಯಜಮಾನರ, ಆಯಾಯ ಕ್ಷೇತ್ರಗಳ ಧಾರ್ಮಿಕ ಇಲಾಖೆಯ, ವೃತ್ತಿ ಕಲಾವಿದರಾಗಿಯೇ ಇರುವ ಯಕ್ಷಗಾನ ಸಂಸ್ಥೆಗಳ ನೆರವು ಸಿಗಬಹುದು. ಹವ್ಯಾಸಿ ಕಲಾವಿದರು ಹೇಗೋ ತಮ್ಮ ಪ್ರಧಾನ ವೃತ್ತಿ ಬೇರೆಯೇ ಇದ್ದು ಅದರಲ್ಲಿ ಜೀವನ ಸಾಗಿಸಬಹುದು. ಆದರೆ ಸಮ್ಮೇಳದಲ್ಲಿರುವ ಕಲಾವಿದರು ಅತಂತ್ರರು. ಇವರನ್ನು ಯಾರೂ ಗುರುತಿಸಿಲ್ಲ.

    ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ರಾಜಶೇಖರ ಹೆಬ್ಬಾರ್ ಐರೋಡಿ ಮಾರ್ಗದರ್ಶನದಲ್ಲಿ ಸಮ್ಮೇಳ ಸಂಸ್ಥೆ ಕಾರ್ಯೋನ್ಮುಖವಾಗಲಿದೆ. ಉಡುಪಿ ಜಿಲ್ಲೆಯ 100ಕ್ಕೂ ಹೆಚ್ಚು ಕಲಾವಿದರನ್ನು ಸೇರಿಸಲಾಗಿದೆ. ಆರಂಭಿಕವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಒಕ್ಕೂಟ ರಚನೆಯಾಗಿ, ನಂತರ ಉತ್ತರ ಕನ್ನಡ ಹಾಗೂ ಮಲೆನಾಡಿಗೆ ಪ್ರಾದೇಶಿಕ ಒಕ್ಕೂಟ ವಿಸ್ತರಿಸಲಿದೆ.
    -ಪ್ರಸಾದ್ ಕುಮಾರ್ ಮೊಗೆಬೆಟ್ಟು, ಭಾಗವತ, ಯಕ್ಷಗಾನ ಚಿಂತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts