More

    ಶ್ರೀಧರ ಭಂಡಾರಿಯೆಂಬ ಯಕ್ಷ ದಂತಕಥೆ, 200-250 ಗಿರಕಿ ಹೊಡೆಯುತ್ತಿದ್ದ ಕಲಾವಿದ

    ಚಂದ್ರಶೇಖರ ಮಂಡೆಕೋಲು

    1950ರ ದಶಕ.. ಪುತ್ತೂರಿನ ಒಂದು ಹಳ್ಳಿಯಲ್ಲಿ ಕ್ರಿಶ್ಚಿಯನ್ ಬಾಬು ಎಂಬುವರ ಪಕಡಿ ವೇಷವನ್ನು, ಅವರ ಗಿರ್ಕಿಯನ್ನು ತದೇಕಚಿತ್ತದಿಂದ ನೋಡುತ್ತಿದ್ದ ಏಳೆಂಟು ವರ್ಷದ ಹುಡುಗನ ಮನಸ್ಸಲ್ಲಿ ತಾನೂ ಹಾಗೆಯೇ ಆಗಬೇಕೆಂಬ ಆಸೆ ಚಿಗುರಿತ್ತು. ಆ ಆಸೆಯನ್ನು ಅಲ್ಲಿಗೇ ಬಿಡದೆ ಸತತ ಅಭ್ಯಾಸ, ಕಠಿಣ ಪರಿಶ್ರಮದಿಂದ ಸಾಧಿಸಿ ಮುಂದೆ ಗಿರಕಿವೀರನೆಂದೇ ಪ್ರಸಿದ್ಧಿ ಪಡೆದು ಬೆಳಗಿದರು. ಅವರೇ ಪುತ್ತೂರು ಶ್ರೀಧರ ಭಂಡಾರಿ.

    ತಂದೆ ಬಳ್ಳಂಬೆಟ್ಟು ಶೀನಪ್ಪ ಭಂಡಾರಿ ಆಗಲೇ ಮೇಳ ಕಟ್ಟಿ ಪ್ರಸಿದ್ಧ ವೇಷಧಾರಿಯಾಗಿದ್ದರು. ಅವರ ಮಾವ ವೆಂಕಪ್ಪ ಶೆಟ್ಟರು ಪ್ರಸಿದ್ಧ ಭಾಗವತರಾಗಿದ್ದವರು. ಪ್ರತಿದಿನ ಚೆಂಡೆ -ಮದ್ದಳೆಯ ನಾದ, ಗೆಜ್ಜೆಯ ಸದ್ದು ಕೇಳುತ್ತಿದ್ದ ಮನೆಯಲ್ಲಿ ಹುಟ್ಟಿದವರು ಶ್ರೀಧರ. ಯಕ್ಷಗಾನದಲ್ಲಿ ತಾನು ಪಟ್ಟ ಕಷ್ಟ ಮಕ್ಕಳು ಅನುಭವಿಸಬಾರದೆಂದು ಶೀನಪ್ಪ ಭಂಡಾರಿಯವರು ಮಕ್ಕಳನ್ನು ಆಟಕ್ಕೆ ಕರೆದೊಯ್ಯುತ್ತಿರಲಿಲ್ಲ. ತಂದೆಗೆ ತಿಳಿಯದಂತೆ ಬಾಲಕ ಶ್ರೀಧರ ಒಂದು ರಾತ್ರಿ ಯಕ್ಷಗಾನಕ್ಕೆ ಹೋಗಿ ತಂದೆ ಕೈಗೆ ಸಿಕ್ಕಿಬಿದ್ದ. ಅಂದು ಆಟ ನಡೆಯುತ್ತಿದ್ದಲ್ಲಿಂದಲೇ ಮಗನನ್ನು ಬೆತ್ತದಲ್ಲಿ ಹೊಡೆಯುತ್ತ ಮನೆಯವರೆಗೆ ಓಡಿಸಿಕೊಂಡು ಬಂದಿದ್ದರಂತೆ ಶೀನಪ್ಪ ಭಂಡಾರಿಯವರು!

    ತಂದೆ ಬಯಸಿದಂತೆ ಮಗ ಆಗದಿದ್ದರೂ ಪ್ರಸಿದ್ಧ ಕಲಾವಿದನಾದ. ಪುಂಡುವೇಷಕ್ಕೆ ಅದ್ಭುತವಾಗಿ ಕುಣಿಯುತ್ತ ಅಷ್ಟೇ ಸಮರ್ಥವಾಗಿ ಅರ್ಥವನ್ನೂ ಹೇಳುತ್ತಿದ್ದ ಮಾಣಂಗಾಯಿ ಕೃಷ್ಣ ಭಟ್ ಮತ್ತು ಹೊಸಹಿತ್ಲು ಮಹಾಲಿಂಗ ಭಟ್ಟರ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿದ ಕೀರ್ತಿ ಪುತ್ತೂರು ಶ್ರೀಧರ ಭಂಡಾರಿಯವರದು. ಅಭಿಮನ್ಯು, ಭಾರ್ಗವ, ಅಶ್ವತ್ಥಾಮ, ಬಬ್ರುವಾಹನ, ಕುಶ, ಶ್ರೀಕೃಷ್ಣ, ಶ್ರೀರಾಮ ಮೊದಲಾದ ಪುಂಡುವೇಷದ ಪಾತ್ರಗಳು, ಕಿರೀಟ ವೇಷದ ಇಂದ್ರಜಿತು, ರಕ್ತಬೀಜ, ಹಿರಣ್ಯಾಕ್ಷ ಮೊದಲಾದ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುತ್ತಿದ್ದರು.

    ಮೇಳಗಳ ಮೇಲೆ ಮೇಳ ಕಟ್ಟಿದ ಸಾಹಸಿ: ಯಕ್ಷಗಾನದಲ್ಲಿ ಪಳಗುತ್ತ, ಪಳಗುತ್ತ ಮುಂದೆ ಧರ್ಮಸ್ಥಳ ಮೇಳ ಸೇರಿದರು. ಅಲ್ಲಿಂದ ತಾನೇ ಸ್ವತಃ ಪುತ್ತೂರು ಶ್ರೀ ಮಹಾಲಿಂಗೇಶ್ವರ ಮೇಳ ಕಟ್ಟಿದರು. ಆ ಮೇಳದಲ್ಲಿ ಪ್ರಸಿದ್ಧವಾದ ಅಮೃತ ಸೋಮೇಶ್ವರ ರಚಿತ ‘ಪುತ್ತೂರ್ದ ಮುತ್ತು’ ಪ್ರಸಂಗದ ನುಡಿಗಟ್ಟು ಮುಂದೆ ಕರಾವಳಿಯಲ್ಲಿ ಭಾರಿ ಪ್ರಸಿದ್ಧಿ ಪಡೆಯಿತು. ಕಾಂತಾವರ, ಕುಂಟಾರು ಹೀಗೆ ಮೇಳಗಳ ಮೇಲೆ ಮೇಳ ಕಟ್ಟಿ ಕೈಸುಟ್ಟುಕೊಂಡು ಮತ್ತೆ ಧರ್ಮಸ್ಥಳ ಮೇಳ ಸೇರಿ ಅಲ್ಲೇ ನಿವೃತ್ತರಾದರು.

    ಯಕ್ಷಗಾನದ ಸಿಡಿಲಮರಿ: ಅತ್ಯಂತ ವೇಗದಿಂದ ರಂಗಪ್ರವೇಶ ಮಾಡುತ್ತಿದ್ದ ಶ್ರೀಧರ ಭಂಡಾರಿಯವರು, ಅದಕ್ಕಿಂತಲೂ ವೇಗವಾಗಿ ಧೀಂಗಿಣ ಹೊಡೆವಾಗ ಚೆಂಡೆಯವರ ಕೈಗಳೂ ಬಸವಳಿಯುತ್ತಿತ್ತು. ಅಭಿಮನ್ಯುವಿನ ಪಾತ್ರದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದು, ತೀವ್ರಗತಿಯ ನಾಟ್ಯ ಹಾಗೂ ಅದನ್ನು ಕೊನೆಯವರೆಗೂ ಉಳಿಸಿಕೊಂಡು ಬಂದ ಕಾರಣ ಯಕ್ಷರಂಗದ ಸಿಡಿಲಮರಿ ಎಂಬ ಅಭಿನಾಮ ಇವರಿಗೆ ಲಭಿಸಿತ್ತು. 200 -300 ದಿಗಿಣ ತೆಗೆಯುತ್ತಿದ್ದ ಇವರು 62ನೇ ವಯಸ್ಸಿನಲ್ಲಿ ಝೀ ನೆಟ್‌ವರ್ಕ್ ವತಿಯಿಂದ ಮುಂಬೈನಲ್ಲಿ ನಡೆದ ಶಭಾಶ್ ಇಂಡಿಯಾ ಕಾರ್ಯಕ್ರಮದಲ್ಲಿ 148 ದಿಗಿಣ ಹೊಡೆದು ಎಲ್ಲರ ಹುಬ್ಬೇರಿಸಿದ್ದರು. ಆ ಕಾರ್ಯಕ್ರಮದಲ್ಲಿ ಮೂರು ನಿಮಿಷಕ್ಕೆ 100 ದಿಗಿಣದ ಸವಾಲು ಸ್ವೀಕರಿಸಿದ ಭಂಡಾರಿಯವರು ಹಾರಿದ್ದು 148 ದಿಗಿಣ.

    ಎದ್ದು ನಿಂತು ಚಪ್ಪಾಳೆ ತಟ್ಟಿದ್ದ ಜಪಾನ್ ಪ್ರೇಕ್ಷಕರು: 1967ರಿಂದಲೇ ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ, ದುಬೈ, ಬ್ರಹೈನ್, ಲಂಡನ್, ಟೋಕಿಯೊ, ಅಮೇರಿಕದಂಥ ದೇಶ, ನಗರಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ ಹೆಮ್ಮೆ ಇವರದ್ದು. ಟೋಕಿಯೋದ ನ್ಯಾಶನಲ್ ಥಿಯೇಟರ್‌ನಲ್ಲಿ ಭಂಡಾರಿಯವರ ಅಭಿಮನ್ಯುವಿಗೆ ಜಪಾನಿ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಎದ್ದು ನಿಂತು ಅಪೂರ್ವ ಗೌರವ ಸಲ್ಲಿಸಿದ್ದರು. ದಿಗಿಣಕ್ಕೆ ಹಾರಿದಾಗಲೆಲ್ಲ ನಿಮಿಷಕ್ಕೆ ನೂರಾರು ಗಿರ್ಕಿ ಹೊಡೆಯುತ್ತಿದ್ದ ಶ್ರೀಧರಣ್ಣ, ಆರು ದಶಕಗಳಲ್ಲಿ ಹಾಕಿದ ಧೀಂಗಿಣಗಳ ಲೆಕ್ಕ ಇಟ್ಟವರಿಲ್ಲ. ಆದರೆ ಆ ಕುಣಿತಗಳೇ ಅವರ ಮೊಣಕಾಲ ಗಂಟನ್ನು ಸವೆಯಿಸಿ ಕಷ್ಟ ಕೊಟ್ಟಿತು. ಅವರ ಅಭಿಮನ್ಯು, ಕೃಷ್ಣ, ಬಬ್ರುವಾಹನ, ಕುಶ, ಪರಶುರಾಮ, ಅಶ್ವತ್ಥಾಮ ಮೊದಲಾದ ವೇಷಗಳು ಯಕ್ಷಗಾನ ಲೋಕದಲ್ಲಿ ಶಾಶ್ವತ ನೆನಪಾಗಿ ಉಳಿಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts