More

    ಆಲೆಮನೆಗೆ ಆರ್ಥಿಕ ಸಂಕಷ್ಟದ ಬರೆ

    ಪರಶುರಾಮ ಕೆರಿ ಹಾವೇರಿ

    ಕಬ್ಬು ಕಾರ್ಖಾನೆಗಳ ಅಬ್ಬರಕ್ಕೆ ಆಲೆಮನೆಗಳು ನಶಿಸಿ ಹೋಗುತ್ತಿವೆ. ಹಾಗಂತ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ ನೂರಾರು ಆಲೆಮನೆಗಳು ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ. ಆದರೆ, ಆಲೆಮನೆಯ ಬೆಲ್ಲ ಸವಿಯುವವರಿಗೆ ಸಿಹಿ ಅನುಭವ ನೀಡಿದ್ದರೂ ರೈತರಿಗೆ ಮಾತ್ರ ಕಹಿಯಾಗಿದೆ.

    ಹೌದು, ಹಾನಗಲ್ಲ ತಾಲೂಕಿನ ಶೀಗಿಹಳ್ಳಿ, ಶೀಗಿಹಳ್ಳಿ ಪ್ಲಾಟ್, ಆಡೂರ ಸೇರಿದಂತೆ ವಿವಿಧೆಡೆ 150ಕ್ಕೂ ಅಧಿಕ ಅಲೆಮನೆಗಳಿವೆ. ರೈತರು ತಾವು ಬೆಳೆಯುವ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಸಾಗಿಸಿ ಹಣಕ್ಕಾಗಿ ಕಾರ್ಖಾನೆ ಎದುರು ತಿಂಗಳುಗಟ್ಟಲೇ ಕಾಯುತ್ತಿಲ್ಲ. ಬದಲಾಗಿ ತಾವೇ ಆಲೆಮನೆ ಮಾಡಿಕೊಂಡು ಬೆಲ್ಲ ತಯಾರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅನೇಕರಿಗೆ ಉದ್ಯೋಗವನ್ನು ನೀಡುತ್ತಿದ್ದಾರೆ. ಆದರೆ, ಅವರು ಉತ್ಪಾದಿಸಿದ ಬೆಲ್ಲಕ್ಕೆ ಮಾತ್ರ ಉತ್ತಮ ದರ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಈ ಸಾರಿ ಮಾರುಕಟ್ಟೆಯಲ್ಲಿ ಬೆಲ್ಲದ ದರ ಕುಸಿತವಾಗಿರುವುದರಿಂದ ಮಾಡಿದ ಖರ್ಚು ಸಹ ರೈತರಿಗೆ ಸಿಗದಂತಹ ಸ್ಥಿತಿ ನಿರ್ವಣವಾಗಿದೆ.

    ಪ್ರತ್ಯೇಕ ಮಾರುಕಟ್ಟೆಯಿಲ್ಲದೆ ನಷ್ಟ: ಅಲೆಮನೆಯಲ್ಲಿ ಬೆಲ್ಲ ಉತ್ಪಾದಿಸುವ ರೈತರು ನಗರ ಪ್ರದೇಶಗಳಲ್ಲಿನ ಬೆಲ್ಲದ ವ್ಯಾಪಾರಸ್ಥರಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಪ್ರತಿಯೊಂದು ಅಲೆಮನೆಯಲ್ಲಿ ಪ್ರತಿದಿನಕ್ಕೆ 15ಕ್ವಿಂಟಾಲ್​ನಂತೆ 150 ಅಲೆಮನೆಗಳಿಂದ ದಿನಕ್ಕೆ ಕನಿಷ್ಟವೆಂದರೂ 2ಸಾವಿರ ಕ್ವಿಂಟಾಲ್​ನಷ್ಟು ಬೆಲ್ಲ ಉತ್ಪಾದನೆಯಾಗುತ್ತಿದೆ. ನೇರವಾಗಿ ಆಲೆಮನೆಗೆ ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಯ ಕೆಲ ಸಗಟು ವ್ಯಾಪಾರಸ್ಥರು ಮಾತ್ರ ಬಂದು ತಮಗೆ ಬೇಕಾದಷ್ಟು ಬೆಲ್ಲ ಖರೀದಿಸುತ್ತಿದ್ದಾರೆ. ಇದರಿಂದ ಬೆಲ್ಲದ ದರದಲ್ಲಿ ಸ್ವಲ್ಪ ಏರಿಕೆ ಮಾಡಿದರೂ ಅವರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇವರನ್ನು ಬಿಟ್ಟರೆ ರಾಜ್ಯದ ಬೇರೆ, ಬೇರೆ ಭಾಗಗಳಿಂದ ಬೆಲ್ಲ ಖರೀದಿಗೆ ಯಾರು ಬರುವುದಿಲ್ಲ. ಹೀಗಾಗಿ ಇವರು ನಿಗದಿಪಡಿಸುವ ದರಕ್ಕೆ ಅನಿವಾರ್ಯವಾಗಿ ಬೆಲ್ಲ ಮಾರುವಂತಾಗಿದೆ. ‘ಮಹಾಲಿಂಗಪುರ, ಮಂಡ್ಯದಂತೆ ಜಿಲ್ಲೆಯಲ್ಲಿಯೂ ಬೆಲ್ಲದ ಮಾರಾಟಕ್ಕೆ ಡಿಸೆಂಬರ್​ನಿಂದ ಮಾರ್ಚ್​ವರೆಗೆ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಿದರೆ ದೂರದೂರಿನಿಂದ ವ್ಯಾಪಾರಸ್ಥರು ಬಂದು ಬೆಲ್ಲ ಖರೀದಿಸುತ್ತಾರೆ. ಇದರಿಂದ ಉತ್ತಮ ದರವು ನಮಗೆ ಸಿಗಲಿದೆ’ ಎನ್ನುತ್ತಾರೆ ಶೀಗಿಹಳ್ಳಿ ಪ್ಲಾಟ್​ನಲ್ಲಿ ಬೆಲ್ಲ ತಯಾರಿಸುವ ಬಸವರಾಜ ಹೂಗಾರ.

    ದರದಲ್ಲಿಯೂ ಕುಸಿತ: ‘ಕಳೆದ ವರ್ಷಕ್ಕಿಂತ ಈ ಸಾರಿ ಪ್ರತಿಟನ್ ಕಬ್ಬಿನ ದರವೂ ಏರಿಕೆಯಾಗಿದೆ. ಟನ್ ಕಬ್ಬಿಗೆ ಕಟಾವು, ಸಾಗಣೆ ಸೇರಿ 2,600ರೂ.ಗಳಷ್ಟು ವೆಚ್ಚವಾಗುತ್ತದೆ. ಟನ್ ಕಬ್ಬಿನಿಂದ 1.05ಕ್ವಿಂಟಾಲ್ ಬೆಲ್ಲ ತಯಾರಾಗುತ್ತದೆ. ಪ್ರತಿ ಕ್ವಿಂಟಾಲ್ ಬೆಲ್ಲ ತಯಾರಿಸಲು 200ರಿಂದ 250ರೂ. ಖರ್ಚಾಗುತ್ತದೆ. ಅಂದರೆ ಸರಾಸರಿ ಒಂದು ಕ್ವಿಂಟಾಲ್ ಬೆಲ್ಲ ತಯಾರಿಕೆಗೆ 2,800ರೂ. ನಿಂದ 2,850ರೂ. ಖರ್ಚಾಗುತ್ತದೆ. ಈಗ ಬೆಲ್ಲವನ್ನು ಕೆಜಿಗೆ 28ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ. ಮೇಲಿನ 5ಕೆಜಿ ಬೆಲ್ಲದ ಹಣವಷ್ಟೇ ಅಲೆಮನೆ ಹೊಂದಿರುವ ರೈತರಿಗೆ ಉಳಿತಾಯವಾಗುತ್ತದೆ. ಹೀಗಾಗಿ ಆಲೆಮನೆಯವರ ಬದುಕು ಗಾಣಕ್ಕೆ ಸಿಕ್ಕ ಕಬ್ಬಿನಂತಾಗಿದೆ’ ಎನ್ನುತ್ತಾರೆ ಶೀಗಿಹಳ್ಳಿ ಗ್ರಾಮದ ರೈತ ದೇವೆಂದ್ರಪ್ಪ ಸವದತ್ತಿ.

    ಬೆಲ್ಲ ಮಾರಾಟಕ್ಕೆ ಆಡೂರನ್ನು ಕೇಂದ್ರ ಸ್ಥಳವನ್ನಾಗಿ ಮಾಡಬೇಕಿದೆ. ಸೊಸೈಟಿಯಿಂದ ಗೋದಾಮು ನಿರ್ವಿುಸಿಕೊಡಲಾಗುವುದು. ಎಪಿಎಂಸಿಯವರು ಇತ್ತ ಗಮನಹರಿಸಿ ಬೆಲ್ಲ ಮಾರಾಟಕ್ಕೆ ಬೇರೆ ಬೇರೆ ಕಡೆಗಳಿಂದ ವ್ಯಾಪಾರಸ್ಥರನ್ನು ಕರೆಸಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಆಲೆಮನೆಗಳನ್ನು ಇನ್ನಷ್ಟು ಕಾಲ ಜೀವಂತವಾಗಿರಿಸಬಹುದು.

    | ದೇವೆಂದ್ರಪ್ಪ ಸವದತ್ತಿ ಆಡೂರ ಸೊಸೈಟಿ ಅಧ್ಯಕ್ಷ.

    ಬೆಲ್ಲದ ದರ ಕುಸಿತವಾಗಿರುವುದರಿಂದ ಕೆಲ ರೈತರು ಮಾಡಿದ ಖರ್ಚಾದರೂ ಬರಲಿ ಎಂದು ಆಟೋ, ಟ್ರ್ಯಾಕ್ಟರ್ ಸೇರಿದಂತೆ ಸಣ್ಣಪುಟ್ಟ ವಾಹನಗಳಲ್ಲಿ 10 ಹಾಗೂ 5ಕೆಜಿಯ ಬೆಲ್ಲದ ಪೆಂಟಿಗಳನ್ನು ಮನೆ ಮನೆಗೆ ಒಯ್ದು ಮಾರಾಟ ಮಾಡುತ್ತಿದ್ದಾರೆ. ಬೆಲ್ಲ ಮಾರಾಟವಾಗದೆ ಇರುವುದರಿಂದ ಕಬ್ಬು ಸಾಗಿಸಿದ ರೈತರಿಗೂ ಹಣ ಕೊಡುವುದು ಸಮಸ್ಯೆಯಾಗಿ ಪರಿಣಮಿಸಿದೆ.

    ಬಸವರಾಜ ಹೂಗಾರ ಶೀಗಿಹಳ್ಳಿ ಪ್ಲಾಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts