More

    ಅರ್ಧಕ್ಕೆ ನಿಂತ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿ, ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಆದಾಯಕ್ಕೆ ಬರೆ

    ಚಿದಾನಂದ ಮಾಣೆ ರಟ್ಟಿಹಳ್ಳಿ

    ಪಟ್ಟಣದ ಹೃದಯ ಭಾಗದಲ್ಲಿರುವ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10 ನೂತನ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿ ಅನುದಾನ ಕೊರತೆಯಿಂದ 10 ತಿಂಗಳಿಂದ ಸ್ಥಗಿತವಾಗಿದೆ. ಇದರಿಂದ ಪಪಂಗೆ ಮಾಸಿಕ 40ರಿಂದ 50 ಸಾವಿರ ರೂಪಾಯಿ ಆದಾಯ ಖೋತಾ ಆಗಿದೆ. ಇತ್ತ ಅಪೂರ್ಣಗೊಂಡ ಮಳಿಗೆಗಳು ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿವೆ.

    ಪಪಂ ಮುಂಭಾಗದ ಹಳೇ ಬಸ್ ನಿಲ್ದಾಣ ಸಮೀಪ ಈ ವಾಣಿಜ್ಯ ಮಳಿಗೆಗಳಿವೆ. ಈ ಮೊದಲು ರಟ್ಟಿಹಳ್ಳಿ ಗ್ರಾಪಂಗೆ ಸೇರಿದ 11 ವಾಣಿಜ್ಯ ಮಳಿಗೆಗಳಿದ್ದವು. ಈ ಮಳಿಗೆಗಳಲ್ಲಿ ವ್ಯಾಪಾರ-ವಹಿವಾಟು ಉತ್ತಮವಾಗಿ ನಡೆದಿತ್ತು. ಗ್ರಾಪಂಗೆ ಮಾಸಿಕ ಸುಮಾರು 20 ಸಾವಿರ ರೂಪಾಯಿ ಆದಾಯವಿತ್ತು. ಶಿಥಿಲವಾಗಿದ್ದ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು 2019ರ ಜೂನ್​ನಲ್ಲಿ ತೆರವುಗೊಳಿಸಿ ಗ್ರಾಪಂ ನಿಧಿಯಿಂದ ನೂತನ ಕಟ್ಟಡ ನಿರ್ವಣಕ್ಕೆ ಸೆಪ್ಟೆಂಬರ್​ನಲ್ಲಿ ಕಾಮಗಾರಿ ಆರಂಭಿಸಲಾಯಿತು. ಅಂದಾಜು 35 ಲಕ್ಷ ರೂಪಾಯಿ ವೆಚ್ಚ ನಿಗದಿಪಡಿಸಲಾಗಿತ್ತು. 2020ರ ಜೂನ್ ಅಂತ್ಯಕ್ಕೆ ಗ್ರಾಮ ನಿಧಿಯಿಂದ 6 ಲಕ್ಷ ರೂಪಾಯಿ ಸೇರಿ ಗ್ರಾಪಂನಿಂದ ಒಟ್ಟು 25 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 12ರಿಂದ 15 ಲಕ್ಷ ರೂಪಾಯಿ ಅನುದಾನದ ಬೇಕಿದೆ.

    ಈ ಮೊದಲು ವಾಣಿಜ್ಯ ಮಳಿಗೆಗಳಲ್ಲಿ ಇದ್ದ ಮೂಲ ವ್ಯಾಪಾರಸ್ಥರಿಂದ 18 ಲಕ್ಷ ರೂಪಾಯಿ ವಂತಿಗೆ ಪಡೆದು ಗ್ರಾಮ ನಿಧಿಯಲ್ಲಿ ಇಡಲಾಗಿದೆ. 2020ರ ಏಪ್ರಿಲ್​ನಲ್ಲಿ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಪಪಂ ನಿಯಮಾನುಸಾರ ಅನುದಾನ ಬಿಡುಗಡೆ, ಟೆಂಡರ್ ಪ್ರಕ್ರಿಯೆ, ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಬೇಕಾಗುತ್ತದೆ. ಹಾಗಾಗಿ, ವ್ಯಾಪಾರಸ್ಥರ ವಂತಿಕೆ ಹಣವನ್ನು ಈ ಕಾಮಗಾರಿಗೆ ಬಳಕೆ ಮಾಡಿಲ್ಲ. ಸರ್ಕಾರದಿಂದ ಅನುದಾನ ಬೇಗ ಬಿಡುಗಡೆಯಾಗಿ ಕಾಮಗಾರಿ ಪೂರ್ಣಗೊಂಡರೆ ಪಪಂಗೆ ಆದಾಯ ದೊರೆತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂಬುದು ಪುರವಾಸಿಗಳ ಅಭಿಪ್ರಾಯ.

    25 ವರ್ಷಗಳಿಂದ ಈ ಮಳಿಗೆಗಳಲ್ಲಿ 11 ಮೂಲ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದೆವು. ಗ್ರಾಪಂನಿಂದ 6-7 ತಿಂಗಳಲ್ಲಿ ಹೊಸ ವಾಣಿಜ್ಯ ಮಳಿಗೆಗಳನ್ನು ನಿರ್ವಿುಸಿ ಕೊಡುತ್ತೇವೆ ಎಂದು ಭರವಸೆ ನೀಡಿ ಹಳೇ ಮಳಿಗೆಗಳನ್ನು ತೆರವುಗೊಳಿಸಲಾಯಿತು. ಇದರಿಂದ ಎಲ್ಲ ಮೂಲ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಈ ಮಳಿಗೆಗಳಲ್ಲಿದ್ದ ಕೆಲವು ವ್ಯಾಪಾರಸ್ಥರು ಅನಿವಾರ್ಯವಾಗಿ ಬೇರೆ ಕಡೆ ಮಳಿಗೆಗಳಲ್ಲಿ ತಾತ್ಕಾಲಿವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದರೆ, ಮತ್ತೆ ಕೆಲವರು ಮನೆಗಳಲ್ಲಿ ವ್ಯಾಪಾರ ಮುಂದುವರಿಸಿದ್ದಾರೆ. ಮಳಿಗೆಗಳ ನಿರ್ವಣಕ್ಕೆ ನಾವೆಲ್ಲರೂ ಸುಮಾರು 18 ಲಕ್ಷ ರೂಪಾಯಿ ನೀಡಿದ್ದೇವೆ. ಪಪಂ ನಮ್ಮ ಸಮಸ್ಯೆಯನ್ನು ಮನಗಂಡು ಕಾಮಗಾರಿಯನ್ನು ಶೀಘ್ರ ಮುಕ್ತಾಯಗೊಳಿಸಿ, ಮಳಿಗೆಗಳನ್ನು ನೀಡಬೇಕು. ಇಲ್ಲದಿದ್ದರೆ ಜೀವನ ನಿರ್ವಹಣೆ ಕಷ್ಟವಾದೀತು.

    | ಜಾವೀದ್ ಗೋಡಿಹಾಳ, ಮೂಲ ವ್ಯಾಪಾರಸ್ಥ, ರಟ್ಟಿಹಳ್ಳಿ

    ಅನುದಾನ ಕೊರತೆಯಿಂದ ಪಪಂ ನೂತನ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿ ಸ್ಥಗಿತವಾಗಿದೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

    |ಉಮೇಶ ಗುಡ್ಡದ,ರಟ್ಟಿಹಳ್ಳಿ ಪಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts