More

    ಆರು ನಿಮಿಷಕ್ಕೊಮ್ಮೆ ದಲಿತರ ಮೇಲೆ ದೌರ್ಜನ್ಯ

    ಬೀದರ್: ದೇಶಾದ್ಯಂತ ಪ್ರತಿ ಆರು ನಿಮಿಷಕ್ಕೆ ಒಮ್ಮೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ದೌರ್ಜನ್ಯ ತಡೆಯಲು ಬಿಜೆಪಿ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಾ.ಡಿ.ಜಿ. ಸಾಗರ್ ಹೇಳಿದರು.
    ಸಂವಿಧಾನ ಮತ್ತು ಪ್ರಜಾಪ್ರಭುತ್ವ ದುರ್ಬಲಗೊಳಿಸುತ್ತಿರುವ ಬಿಜೆಪಿ ಮನುವಾದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
    ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಅವರು ಉದ್ಯೋಗವನ್ನು ಕಸಿದಿದ್ದಾರೆ. ಸಂವಿಧಾನ ಮತ್ತು ಮೀಸಲಾತಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಕ್ರಮೇಣವಾಗಿ ಸಂವಿಧಾನದ ಆಶಯಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
    ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ಸಿಲಿಂಡರ್ ಬೆಲೆ ಹೆಚ್ಚಾಗಿದೆ. ರಾಜ್ಯದ ಪಾಲಿನ ತೆರಿಗೆ ನೀಡುತ್ತಿಲ್ಲ. ಶ್ರಮಿಕ ವರ್ಗದವರಿಗೆ ಬೆಲೆ ಇಲ್ಲದಂತಾಗಿದೆ. ಒಟ್ಟಿನಲ್ಲಿ ಸಂವಿಧಾನ ವಿರೋಧಿ ನಡೆ ಬಿಜೆಪಿ ಅನುಸರಿಸುತ್ತಿದೆ. ಬಡವರ ಜೀವನ ಮಟ್ಟ ಸುಧಾರಣೆ ಆಗಬೇಕಾದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂದು ಕೋರಿದರು.
    ಸಮಿತಿ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಮಾತನಾಡಿ, ಜೆಡಿಎಸ್ ಹಿರಿಯ ಮುಖಂಡ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಜತೆ ಉತ್ತಮ ಒಡನಾಟ ಹೊಂದಿದ್ದರೂ ಜೆಡಿಎಸ್ ಸದಸ್ಯತ್ವ ಪಡೆದಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಲಾಗುವುದು. ಸಂವಿಧಾನದ ಆಶಯಗಳು ಉಳಿಯಬೇಕಾದರೆ ಬಿಜೆಪಿಯನ್ನು ಸೋಲಿಸಬೇಕು ಎಂದರು.
    ಸಮಿತಿ ಜಿಲ್ಲಾ ಸಂಚಾಲಕ ಅರುಣ ಪಟೇಲ್, ಅಶೋಕ ಗಾಯಕವಾಡ, ರಾಜು ವಾಘಮಾರೆ, ರಮೇಶ ಬೆಲ್ದಾರ್, ಝರೆಪ್ಪ ವರ್ಮಾ, ರಾಹುಲ್ ಹಾಲಹಿಪ್ಪರ್ಗಾ, ಶಿವರಾಜ ತಡಪಳ್ಳಿ, ವಾಮನ್ ಮೈಸಲಗಿ, ಸತೀಶ್ ರತ್ನಾಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts