More

    ಜಗಲಿ ಮೇಲಿಟ್ಟು ಹಸ್ತಪ್ರತಿ ಪೂಜಿಸಿದರೆ ಉಪಯೋಗವಿಲ್ಲ

    ಗದಗ: ಹಸ್ತಪ್ರತಿಗಳು ಬದುಕಿನ ಭಾಗವಾಗಿದ್ದು ಅವುಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಹಿರಿಯ ವಿದ್ವಾಂಸ ಡಾ. ಆರ್.ಎಸ್. ಗುಂಜಾಳ ಹೇಳಿದರು.

    ಬೆಟಗೇರಿಯ ನರಸಾಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಹಂಪಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಅಖಿಲ ಕರ್ನಾಟಕ 17ನೇ ಹಸ್ತಪ್ರತಿ ಸಮ್ಮೇಳನ ಕಾರ್ಯಕ್ರಮಕ್ಕೆ ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

    ‘ಜ್ಞಾನ ಭಂಡಾರ ಎನಿಸಿರುವ ಹಸ್ತಪ್ರತಿಗಳನ್ನು ಜನರು ಮೂಢನಂಬಿಕೆಗೆ ಒಳಗಾಗಿ ಸುಟ್ಟುಹಾಕುವುದು, ನೀರಿನಲ್ಲಿ ತೋಯಿಸಿ ನಾಶ ಮಾಡುವುದು ತರವಲ್ಲ. ಜನರು ತಮ್ಮ ಮನೆಯಲ್ಲಿರುವ ಹಸ್ತಪ್ರತಿಗಳನ್ನು ಸಂಶೋಧನೆಗಾಗಿ ನೀಡಿದರೆ ಇದಕ್ಕಿಂತ ದೊಡ್ಡ ಉಪಕಾರ ಮತ್ತೊಂದಿಲ್ಲ. ಮನೆಯ ಜಗಲಿಯ ಮೇಲೆ ಹಸ್ತಪ್ರತಿಗಳ ಕಟ್ಟುಗಳನ್ನಿಟ್ಟು ಪೂಜಿಸಿದರೆ ಫಲವಿಲ್ಲ. ಅವುಗಳನ್ನು ಸಂಶೋಧನೆಗೆ ನೀಡಿದರೆ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ’ ಎಂದರು.

    ರೆ. ಉತ್ತಂಗಿ ಚನ್ನಪ್ಪ ಹಾಗೂ ಫ.ಗು. ಹಳಕಟ್ಟಿ ಅವರು ಶ್ರಮಿಸದಿದ್ದರೆ ಇಂದು ನಮಗೆ ಅತ್ಯಮೂಲ್ಯ ಎನಿಸಿರುವ ಸರ್ವಜ್ಞ ಹಾಗೂ ಬಸವಣ್ಣನ ವಚನಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿರುವ ಹಸ್ತಪ್ರತಿಗಳನ್ನು ನೀಡಿದರೆ ನಮಗೆ ಕೇಡಾಗುತ್ತದೆ ಎಂಬ ಮೂಢನಂಬಿಕೆಯಿಂದ ಜನರು ಹೊರಬರಬೇಕು ಎಂದು ಸಲಹೆ ನೀಡಿದರು.

    ಸರ್ಕಾರ ಅಪ್ರಕಟಿತ ಹಸ್ತಪ್ರತಿಗಳನ್ನು ಮುದ್ರಿಸಲು ಮುಂದೆ ಬರಬೇಕು ಹಾಗೂ ಅಂತರ್ಜಾಲಕ್ಕೆ ಅಳವಡಿಸಿ ಸರ್ವಕಾಲಕ್ಕೂ ಅದು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಹಂಪಿ ವಿಶ್ವವಿದ್ಯಾಲಯವು ಹಸ್ತಪ್ರತಿ ಶಾಸ್ತ್ರದಲ್ಲಿ ಮಾಡುತ್ತಿರುವ ಸೇವೆ ಸ್ಮರಣೀಯ. ಹಸ್ತಪ್ರತಿಗಳ ವಿಷಯವಾಗಿ ಇದುವರೆಗೆ ನಡೆದ ಅಧ್ಯಯನ ಸಮೀಕ್ಷೆ, ವಿಮರ್ಶೆ, ಹೊಸ ವಿಷಯಗಳ ಕುರಿತು ಕ್ರಿಯಾಶೀಲವಾಗಿ ಕಾರ್ಯ ಕೈಗೊಂಡು ಹಸ್ತಪ್ರತಿ ವಿಭಾಗದಿಂದ 50ಕ್ಕೂ ಹೆಚ್ಚೂ ಮೌಲಿಕ ಗ್ರಂಥಗಳು ಪ್ರಕಟಗೊಂಡಿರುವುದು ಅಭಿಮಾನದ ಸಂಗತಿ ಎಂದರು.

    ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಜ್ಞಾನಾರ್ಜನೆ ಮೂಲವಾಗಿರುವ ಹಸ್ತಪ್ರತಿಗಳ ಮೂಲಕ ಮನುಷ್ಯನ ಸಾಂಸ್ಕೃತಿಕ ಪ್ರಜ್ಞೆಯನ್ನು ಕಂಡುಕೊಳ್ಳಬಹುದು. ಹೀಗಾಗಿ ಸರ್ಕಾರ ಅಪ್ರಕಟಿತ ಹಸ್ತಪ್ರತಿಗಳನ್ನು ಬೆಳಕಿಗೆ ತರುವ ಕೆಲಸ ಮಾಡಬೇಕು. ಹಂಪಿ ವಿಶ್ವವಿದ್ಯಾಲಯದಲ್ಲಿ ಹಸ್ತಪ್ರತಿ ಶಾಸ್ತ್ರ ವಿಭಾಗದವರು ಉತ್ತಮ ಕೆಲಸ ಮಾಡುತ್ತಿದ್ದು, ಅವರ ಕಾರ್ಯ ಇನ್ನಷ್ಟು ವೇಗ ಪಡೆದುಕೊಳ್ಳಬೇಕು. ಜತೆಗೆ ಹಸ್ತಪ್ರತಿ ಕುರಿತು ಜನರಲ್ಲಿರುವ ಮೂಢನಂಬಿಕೆ ಹೋಗಲಾಡಿಸಬೇಕು ಎಂದರು.

    ಬೆಂಗಳೂರಿನ ನಾ. ಗೀತಾಚಾರ್ಯ ಮಾತನಾಡಿದರು. ಹಂಪಿ ಕನ್ನಡ ವಿವಿ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಂಪಿ ವಿವಿ ವತಿಯಿಂದ ಡಾ. ಆರ್.ಎಸ್. ಗುಂಜಾಳ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಹನುಮಂತಗೌಡ ಕಲ್ಮನಿ, ಡಾ. ಎಸ್.ಜಿ. ಶ್ರೀಧರ, ಡಾ. ಎಫ್.ಟಿ. ಹಳ್ಳಿಕೇರಿ, ಡಾ. ರವೀಂದ್ರನಾಥ ಇತರರು ಇದ್ದರು. ಪ್ರಾಚಾರ್ಯ ಎಸ್.ಎಫ್. ಸಿದ್ನೆಕೊಪ್ಪ ಸ್ವಾಗತಿಸಿದರು. ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ನಂತರ ಪ್ರಾಚೀನ ಕಾವ್ಯ ಓದು ಮತ್ತು ಅಗತ್ಯ ಕುರಿತು ಗೋಷ್ಠಿಗಳು ಜರುಗಿದವು.

    ಪ್ರಾಚೀನ ಹಸ್ತಪ್ರತಿಗಳಲ್ಲಿ ಸಚಿತ್ರ ಹಸ್ತಪ್ರತಿಗಳು ಕುರಿತು ಇನ್ನೂ ಅಧ್ಯಯನವಾಗಿಲ್ಲ. ಇತ್ತೀಚೆಗೆ ಹಂಪಿ ಕನ್ನಡ ವಿವಿ ಶ್ರೀತತ್ವ್ತ ನಿಧಿ, ಶ್ರೀ ಕೃಷ್ಣ ಪಾರಿಜಾತ ಎಂಬ ಎರಡು ಸಚಿತ್ರ ಹಸ್ತಪ್ರತಿಗಳನ್ನು ಪ್ರಕಟಿಸಿದೆ. ಮೈಸೂರು ಸುತ್ತೂರು ಮಠದವರು ಸಚ್ಛಿತ್ರ ವೃಷಬೇಂದ್ರ ವಿಳಾಸ ಎಂಬ ಬೃಹತ್ ಕೃತಿಯನ್ನು ಪ್ರಕಟಿಸಿದ್ದಾರೆ. ಸಾವಿರಾರು ಸಚಿತ್ರ ಹಸ್ತಪ್ರತಿಗಳು ಕುರಿತು ಅಧ್ಯಯನ ನಡೆಯಬೇಕಾಗಿದೆ. ಯುವಕರು ಹಸ್ತಪ್ರತಿಗಳ ಕುರಿತು ಆಸಕ್ತಿ ವಹಿಸಬೇಕು ಮತ್ತು ರಾಶಿ ರಾಶಿ ಬಿದ್ದಿರುವ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಸಂಪಾದನೆಗಳ ಮೂಲಕ ಮತ್ತೆ ಪುನರುಜ್ಜೀವನಗೊಳಿಸಬೇಕು.

    | ಆರ್.ಎಸ್. ಗಂಜಾಳ, ಹಿರಿಯ ವಿದ್ವಾಂಸ

    5000 ಹಸ್ತಪ್ರತಿ ಸಂಗ್ರಹ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಸ್ತಪ್ರತಿಶಾಸ್ತ್ರ ವಿಭಾಗವು ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಇದುವರೆಗೆ 5000 ಹಸ್ತಪ್ರತಿಗಳನ್ನು ಸಂಗ್ರಹಿಸಲಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಹಸ್ತಪ್ರತಿಗಳ ಸಂರಕ್ಷಣೆಗಾಗಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಶೀರ್ಘವೇ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ವಿವಿ ಕುಲಪತಿ ಡಾ. ಸ.ಚಿ. ರಮೇಶ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts