More

    ಎಳ್ಳು-ಬೆಲ್ಲ ಹಂಚಿ ಸಂಕ್ರಾಂತಿ ಆಚರಣೆ

    ಚಿಕ್ಕಮಗಳೂರು: ಮಹಿಳೆಯರು ಹೊಸ ಉಡುಪುಗಳನ್ನು ತೊಟ್ಟು ಸ್ನೇಹಿತರ ಮನೆಗಳಿಗೆ ತೆರಳಿ ಎಳ್ಳುಬೀರಿದರೆ, ತಮಿಳು ಸಮುದಾಯದವರು ಸೂರ್ಯನ ಪೂಜೆಯೊಂದಿಗೆ ಹೊಸ ದವಸ ಧಾನ್ಯಗಳನ್ನಿಟ್ಟು ವಿಶೇಷ ಪ್ರಾರ್ಥನೆಯೊಂದಿಗೆ ಪೊಂಗಲ್ ಆಚರಿಸಿ ಜಿಲ್ಲೆ ಎಲ್ಲೆಡೆ ಜನ ಎಳ್ಳುಬೆಲ್ಲ ಸವಿದು ಸಂಕ್ರಾಂತಿ ಹಬ್ಬ ಆಚರಿಸಿದರು.

    ನಗರದಲ್ಲಿ ಗುರುವಾರ ಬೆಳಗ್ಗೆ ಜನ ಅಂಗಡಿಗಳಿಂದ ತೆರಳಿ ಎಳ್ಳು-ಬೆಲ್ಲ ಖರೀದಿಸಿ, ಮನೆಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ವಿಶೇಷ ಪೂಜೆ ಪ್ರಾರ್ಥನೆಯೊಂದಿಗೆ ನೈವೇದ್ಯ ಮಾಡಿ ಎಳ್ಳು-ಬೆಲ್ಲ ಸವಿದರು. ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಧಾರ್ವಿುಕ ಕೈಂಕರ್ಯಗಳು ನೆರವೇರಿಸಿ ಪೂಜೆ ಸಲ್ಲಿಸಲಾಯಿತು. ಸಂಜೆ ನಗರದ ವಿವಿಧ ಬಡಾವಣೆಗಳಲ್ಲಿ ಸ್ನೇಹಿತರು, ಸಂಬಂಧಿಕರ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ, ಹಣ್ಣು, ಕಬ್ಬನ್ನು ಬೀರಿ ಸ್ನೇಹ ಸಂಬಂಧ ಗಟ್ಟಿಗೊಳಿಸಿದ ದೃಶ್ಯ ಸಾಮಾನ್ಯವಾಗಿತ್ತು. ನಗರದ ಮುಖ್ಯರಸ್ತೆಗಳಲ್ಲಿ ಹಾಕಲಾಗಿದ್ದ ಅಂಗಡಿಗಳಲ್ಲಿ ಎಳ್ಳು, ಕಬ್ಬಿನ ವ್ಯಾಪಾರ ತುಸು ಜೋರಾಗಿ ವ್ಯಾಪಾರಿಗಳ ಮೊಗದಲ್ಲೂ ಕೊಂಚ ಸಂತಸ ಕಂಡುಬಂತು.

    ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ಕೆಲವೆಡೆ ರೈತರು ಬೆಳೆದ ಅಕ್ಕಿ, ಬೇಳೆ, ಕಾಳು, ತರಕಾರಿ, ಹೊಸದಾಗಿ ಬಂದ ಪೈರಿಗೆ ಪೂಜೆ ಸಲ್ಲಿಸಿ ಹಬ್ಬದೂಟ ಸವಿದರು. ಗ್ರಾಮೀಣ ಪ್ರದೇಶದಲ್ಲೂ ಸಂಕ್ರಾಂತಿ ಆಚರಣೆ ಮಾಡಿ ಎಳ್ಳು-ಬೆಲ್ಲದ ರುಚಿ ಸವಿದರು.

    ತೈ ಪೊಂಗಲ್ ಆಚರಣೆ: ತಮಿಳು ಸಮುದಾಯದವರು ಆಹಾರ, ದವಸ ಧಾನ್ಯಗಳನ್ನು ಮನೆ ಮುಂದಿಟ್ಟು ಕಬ್ಬಿನಜಲ್ಲೆ ನಡುವೆ ತೋರಣ ಕಟ್ಟಿ, ಮಡಕೆಯಲ್ಲಿ ಪೊಂಗಲ್ ತಯಾರಿಸಿದರು. ಮನೆಯಲ್ಲಿ ತಯಾರಿಸಿದ ಬಗೆಬಗೆಯ ಆಹಾರವಿರಿಸಿ ನೆರೆಹೊರೆಯವರು ಒಗ್ಗೂಡಿ ದವಸ ಧಾನ್ಯಗಳಿಗೆ ಹಾಗೂ ಸೂರ್ಯನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೈ ಪೊಂಗಲ್ ಹಬ್ಬ ಆಚರಿಸಿದರು. ನಗರದ ನಾರಾಯಣಪುರದಲ್ಲಿ ರಸ್ತೆಯ ತುಂಬೆಲ್ಲೆ ಬಣ್ಣಬಣ್ಣದ ರಂಗವಲ್ಲಿ ಬಿಡಿಸಿ ಹಬ್ಬಕ್ಕೆ ಕಳೆತುಂಬಿದರು. ಬೋಗಿ ಹಬ್ಬದಿಂದ ಆರಂಭವಾದ ಸಂಕ್ರಾಂತಿ, ಗುರುವಾರ ಸೂರ್ಯಪೂಜೆ, ಜ.15 ರಂದು ಗೋವುಗಳ ಪೂಜೆ, 16 ಸ್ನೇಹಿತರು, ಬಂಧುಗಳು ಪರಸ್ಪರ ಕಂಡು ಕಷ್ಟಸುಖಗಳನ್ನು ಆಲಿಸಿ ಸಂಬಂಧ ಗಟ್ಟಿಗೊಳಿಸುವ ಕಾಣಂ ಪೊಂಗಲ್ ಮೂಲಕ ಸಂಕ್ರಾಂತಿ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ ಎಂದು ಜನರು ತಿಳಿಸಿದರು. ಕರೊನಾ ಕಾರಣದಿಂದ ಸಾಮೂಹಿಕ ಸಂಕ್ರಾಂತಿ, ಪೊಂಗಲ್ ಆಚರಣೆ ಕಂಡುಬರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts