More

    ಆತಂಕ ತಂದ ಸೋಂಕಿತರ ಬಟ್ಟೆ ಬ್ಯಾಗ್

    ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯಿಂದ ಗುಣಮುಖರಾದ ಕರೊನಾ ಸೋಂಕಿತರು ನಂತರ ಹಾಸ್ಪಿಟಲ್ ಆವರಣದಲ್ಲಿ ತಾವು ಬಳಸಿದ ಹಾಸಿಗೆ ಹಾಗೂ ಬಟ್ಟೆ ಎಸೆದು ಹೋಗಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಸೋಂಕಿತರು ಚಿಕಿತ್ಸೆ ವೇಳೆ ಧರಿಸಿದ್ದ ಬಟ್ಟೆಗಳ ಚೀಲ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು, ಮಳೆ ನೀರಿನ ಮೂಲಕ ವೈರಸ್ ಹರಡುವ ಸಾಧ್ಯತೆ ಇದೆ. ಇದಕ್ಕೆ ಬಿಮ್ಸ್ ಸಿಬ್ಬಂದಿ ನಿರ್ಲಕ್ಷೃವೇ ಕಾರಣ ಎಂಬ ಆರೋಪವೂ ಕೇಳಿಬರುತ್ತಿದೆ.

    ಮೂರು ದಿನದ ಹಿಂದೆ 38 ಕರೊನಾ ಸೋಂಕಿತರು ಗುಣಮುಖರಾಗಿ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಅವರೆಲ್ಲ ತಮ್ಮ ಬಟ್ಟೆ ಹಾಗೂ ಹಾಸಿಗೆ ಬ್ಯಾಗ್‌ಗಳನ್ನು ಆಸ್ಪತ್ರೆ ಆವರಣದಲ್ಲಿ ಬಿಟ್ಟುಹೋಗಿದ್ದಾರೆ. ಆದರೆ, ಗುಣಮುಖರಾದ ಸೋಂಕಿತರು ಬಿಟ್ಟು ಹೋದ ಈ ಬಟ್ಟೆಗಳನ್ನು ನಿರ್ವಹಣೆ ಮಾಡಬೇಕಿದ್ದ ಆಸ್ಪತ್ರೆ ಸಿಬ್ಬಂದಿ ಅಗತ್ಯ ಕ್ರಮ ಕೈಗೊಳ್ಳದಿರುವುದು ಅನೇಕ ಪ್ರಶ್ನೆಗಳಿಗೆ ದಾರಿಮಾಡಿಕೊಡುತ್ತಿದೆ.

    ನರ್ಸಿಂಗ್ ವಿದ್ಯಾರ್ಥಿಗಳಿಂದ ತಪಾಸಣೆ: ರೋಗಿಗಳು ಗುಣಮುಖರಾಗಿದ್ದಾರೆಯೇ ಎಂದು ಮತ್ತೊಮ್ಮೆ ಗಂಟಲು ದ್ರವದ ಮಾದರಿ ಸಂಗ್ರಹಕ್ಕೆ ನರ್ಸಿಂಗ್ ವಿದ್ಯಾರ್ಥಿಗಳನ್ನು ವೈದ್ಯಾಧಿಕಾರಿಗಳು ಕಳುಹಿಸುತ್ತಿದ್ದಾರೆ ಎಂದು ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯೊಬ್ಬಳು ಶುಕ್ರವಾರ ಆರೋಪಿಸಿ, ವೈದ್ಯಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಳು. ಸೋಂಕಿತ ಮಹಿಳೆಯ ಆರೋಪಕ್ಕೆ ಉತ್ತರಿಸಿದ ವೈದ್ಯಾಧಿಕಾರಿಗಳು, ಮಹಿಳೆಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಪ್ರತಿಕ್ರಿಯಿಸಿದರು. ಇದರಿಂದ ಮಹಿಳೆಯಿಂದ ಮತ್ತಷ್ಟು ಹೈಡ್ರಾಮಾ ನಡೆಯಿತು. ನಂತರ ಆಸ್ಪತ್ರೆಯ ಸಿಬ್ಬಂದಿ ಸೋಂಕಿತೆಯನ್ನು ಕರೊನಾ ವಾರ್ಡ್‌ಗೆ ಕರೆದುಕೊಂಡು ತೆರಳಿದರು.

    ಮಹಿಳೆಯಲ್ಲಿ ವೈರಸ್ ಪತ್ತೆ: ಜಿಲ್ಲೆಯಲ್ಲಿ ಶುಕ್ರವಾರ ಮಹಾರಾಷ್ಟ್ರದಿಂದ ಹಿಂತಿರುಗಿದ 32 ವರ್ಷದ ಮಹಿಳೆಗೆ ಕರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 303ಕ್ಕೆ ಏರಿಕೆಯಾಗಿದೆ. 649 ಜನರ ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿ ಬಾಕಿ ಇದೆ. ಒಟ್ಟು ಸೋಂಕಿತರ ಪೈಕಿ ಈಗಾಗಲೇ 217 ಜನರು ಗುಣಮುಖರಾಗಿ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಸೋಂಕಿನಿಂದ ಓರ್ವ ಮಹಿಳೆ ಮೃತಪಟ್ಟಿದ್ದಾಳೆ. 85 ಸೋಂಕಿತರು ಬಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಮ್ಸ್ ತಿಳಿಸಿದೆ.

    ಕರೊನಾ ವೈರಸ್ ಕಾರ್ಯಾಚರಣೆ: ಒಟ್ಟು ನಿಗಾದಲ್ಲಿದ್ದವರು-15,129, 14 ದಿನಗಳ ನಿಗಾ ಅವಧಿ ಪೂರ್ಣಗೊಳಿಸಿದವರು- 4,385, 28 ದಿನಗಳ ನಿಗಾ ಅವಧಿ ಪೂರ್ಣಗೊಳಿಸಿದವರು- 7,872, ಮನೆಯಲ್ಲಿ ನಿಗಾದಲ್ಲಿರುವವರು-2,787, ಆಸ್ಪತ್ರೆಯಲ್ಲಿ ನಿಗಾದಲ್ಲಿರುವವರು-85, ಒಟ್ಟು ಮಾದರಿ ಸಂಗ್ರಹ-13,833, ಪಾಸಿಟಿವ್-297(ಸಾವು-1), ಬೇರೆ ಜಿಲ್ಲೆಯವರಲ್ಲಿ ಸೋಂಕು ಪತ್ತೆ- 8, ನೆಗಟಿವ್- 12,879, ನಿರೀಕ್ಷೆಯಲ್ಲಿರುವ ಮಾದರಿಗಳು- 649.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts