More

    ವಿಶ್ವದಲ್ಲೇ ಮೊದಲ ಬಾರಿಗೆ ಕಾವೇರಿ ವನ್ಯಜೀವಿಧಾಮದಲ್ಲಿ ಪತ್ತೆಯಾಯ್ತು ಬಿಳಿ ಸೀಳು ನಾಯಿ!

    ಬೆಂಗಳೂರು: ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಭಾಗಶಃ ಬಿಳಿ ಬಣ್ಣದ (ಅಲ್ಬಿನೊ) ಸೀಳು ನಾಯಿಯೊಂದು ರಾಜ್ಯದ ಕಾವೇರಿ ವನ್ಯಜೀವಿಧಾಮದಲ್ಲಿ ಕಾಣಿಸಿಕೊಂಡಿದೆ. ಚಿರತೆಗಳ ಕುರಿತ ಅಧ್ಯಯನಕ್ಕಾಗಿ ನೇಚರ್ ಕನ್ಸರ್ವೇಷನ್ ಫೌಂಡೇಶನ್ ಮತ್ತು ಹೊಳೆಮತ್ತಿ ನೇಚರ್ ಫೌಂಡೇಶನ್‌ನ ಡಾ.ಸಂಜಯ್ ಗುಬ್ಬಿ ಮತ್ತು ಅವರ ತಂಡ ಅಳವಡಿಸಿದ್ದ ಕ್ಯಾಮರ ಟ್ರ್ಯಾಪ್‌ಗಳಲ್ಲಿ, ಈ ಅಲ್ಬಿನೊ ಸೀಳು ನಾಯಿಯ ಚಿತ್ರಗಳು ಸೆರೆಯಾಗಿದೆ.

    ಹಿಂದೆ ಕಾವೇರಿ ವನ್ಯಜೀವಿಧಾಮದ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ಈ ಅಲ್ಬಿನೊ ಸೀಳು ನಾಯಿಯನ್ನು ಕಾಡಿನಲ್ಲಿ ಗಮನಿಸಿದ್ದಾರೆ. ಆಲ್ಬಿನಿಸಂ ಎನ್ನುವುದು ಕೂದಲು, ಚರ್ಮ ಮತ್ತು ಕಣ್ಣುಗಳಿಗೆ ಬಣ್ಣ ಕೊಡುವ ಮೆಲನಿನ್ ಅನುಪಸ್ಥಿತಿಯಿಂದ ಆಗುವ ಪರಿಸ್ಥಿತಿ. ಇದು ಪ್ರಾಣಿ, ಪಕ್ಷಿ, ಸರೀಸೃಪಗಳಲ್ಲಿ ಕಂಡುಬರುತ್ತದೆ. ಸೀಳು ನಾಯಿಗಳಲ್ಲಿ ಇದು ವಿಶ್ವದಲ್ಲೇ ಮೊದಲ ಬಾರಿಗೆ ದಾಖಲಾಗಿದೆ.

    ಈ ಅಲ್ಬಿನೊ ಸೀಳು ನಾಯಿ, ಸಾಮಾನ್ಯವಾಗಿ ಕಂಡು ಬರುವ (ಕಂದು ಬಣ್ಣದ) ಇತರೆ ಆರು ಸೀಳು ನಾಯಿಗಳಿರುವ ಗುಂಪಿನಲ್ಲಿದೆ. ಇಲ್ಲಿಯವರೆಗೆ ಅಲ್ಬಿನೊ ಸೀಳು ನಾಯಿ ಕಾವೇರಿ ವನ್ಯಜೀವಿಧಾಮದ ಸಂಗಮ ವಲಯದಲ್ಲೇ ನಾಲ್ಕು ಕಡೆ ಕ್ಯಾಮೆರ ಟ್ರ್ಯಾಪ್ ನಲ್ಲಿ ಸೆರೆಯಾಗಿದೆ. ಕಾವೇರಿ ವನ್ಯಜೀವಿಧಾಮ ಹಲವು ಕುತೂಹಲಕಾರಿ ಅಂಶಗಳನ್ನು ಹೊರಹಾಕುತ್ತಿದ್ದು, ಈ ಹಿಂದೆ (2014ರಲ್ಲಿ) ಇದೇ ತಂಡ ರಾಜ್ಯದಲ್ಲೇ ಪ್ರಥಮ ಬಾರಿಗೆ, ಈ ಪ್ರದೇಶದಲ್ಲಿ ತರ ಕರಡಿ (ಹನಿ ಬ್ಯಾಡ್ಜರ್) ಇರುವುದನ್ನು ಪತ್ತೆಮಾಡಿತ್ತು. ಆದರೆ ಈ ಅಲ್ಬಿನೊ ಸೀಳು ನಾಯಿ, ಬೀದಿ ನಾಯಿಯೊಡನೆ ಬೆರೆಕೆಯಾಗಿ ಹುಟ್ಟಿರುವ ಸಾಧ್ಯತೆಯೂ ಇದ್ದು, ಇದರ ಡಿಎನ್‌ಎ ಮಾದರಿ ವಿಶ್ಲೇಷಿಸಿದರೆ ಹೆಚ್ಚು ಮಾಹಿತಿ ಕಲೆಹಾಕಬಹುದು ಎಂದು ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ.

    11 ದೇಶಗಳಲ್ಲಿ ಕಂಡು ಬರುತ್ತವೆ:
    ಕನ್ನಡದಲ್ಲಿ ಸೀಳು ನಾಯಿ, ಕಾಡು ನಾಯಿ, ಕೆನ್ನಾಯಿ ಎಂದೆಲ್ಲ ಕರೆಯಲ್ಪಡುವ ಈ ಪ್ರಾಣಿ, ಏಷ್ಯಾದ 11 ದೇಶಗಳಲ್ಲಿ ಕಂಡು ಬರುತ್ತವೆ. ಭಾರತ ಬಿಟ್ಟರೆ ನೇಪಾಳ, ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯ, ಚೈನಾ, ಇಂಡೋನೇಷ್ಯಾ ಮತ್ತಿತರ ದೇಶಗಳಲ್ಲಿ ಕಂಡುಬರುತ್ತವೆ. ಆದರೆ ಇವುಗಳ ಮೇಲಿನ ಹಿಂದಿನ ಅಧ್ಯಯನಗಳು ಅಲ್ಬಿನೊ ಸೀಳು ನಾಯಿಯನ್ನು ದಾಖಲಿಸಿಲ್ಲ. ಪ್ರಾಣಿಗಳ ಕೊರತೆ, ನೈಸರ್ಗಿಕ ಆವಾಸಸ್ಥಾನದ ನಾಶ, ರೋಗ ಮತ್ತು ಬೀದಿ ನಾಯಿಗಳಿಂದ ಇವುಗಳು ಅಪಾಯ ಎದುರಿಸುತ್ತಿವೆ. ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ಸೀಳು ನಾಯಿಗಳು ಆಗಲೇ ಅಫ್ಘಾನಿಸ್ಥಾನ, ರಿಪಬ್ಲಿಕ್ ಆಫ್ ಕೊರಿಯಾ, ಮೊಂಗೋಲಿಯಾ ಮತ್ತಿತರ ದೇಶಗಳಿಂದ ಕಣ್ಮರೆಯಾಗಿವೆ ಎಂದು ಹೇಳುತ್ತದೆ. ಭಾರತದಲ್ಲಿ ಸೀಳು ನಾಯಿಗಳು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಅಧಿನಿಯಮ 2ರಲ್ಲಿ ಸಂರಕ್ಷಿತಗೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts