More

    ವಿಭಜಿಸುವ ಸಾಹಿತ್ಯದ ನಿಲುವನ್ನು ಪ್ರಶ್ನಿಸೋಣ: ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ ಸಲಹೆ

    ಮಂಡ್ಯ: ಒಂದು ಕೃತಿ ಯಾರು ಬರೆದದ್ದು ಎನ್ನುವ ಕಾರಣಕ್ಕಾಗಿ ಒಳ್ಳೆಯದೋ, ಕೆಟ್ಟದ್ದೋ, ಅತ್ಯುತ್ತಮವೋ, ಓದಬಾರದೆನ್ನುವ ತೀರ್ಮಾನ ಮಾಡುವ ಕಾಲಘಟ್ಟದಲ್ಲಿದ್ದೇವೆ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ ಅಭಿಪ್ರಾಯಪಟ್ಟರು.
    ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಲೇಖಕಿಯರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ‘ಮಹಿಳೆ ಮತ್ತು ಸಾಹಿತ್ಯ’ ಕುರಿತು ವಿಷಯ ಮಂಡಿಸಿದರು. ಶೃಂಗಾರಕ್ಕೆ ಸಂಬಂಧಿಸಿದ ಕೃತಿಯನ್ನು ಪುರುಷ ಬರೆದರೆ ರಸಿಕ ಎನ್ನುವ ಸಮಾಜ, ಸ್ತ್ರೀ ಬರೆದರೆ ಆಕೆಯ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಕೆಲಸ ಮಾಡುತ್ತದೆ. ಇಂತಹ ವಿಭಜಿಸುವ ಪ್ರಧಾನ ಸಾಹಿತ್ಯದ ನಿಲುವಿನ ಬಗ್ಗೆ ಪ್ರಶ್ನೆ ಮಾಡಬೇಕು ಎಂದರು.
    ನೂರು ವರ್ಷಗಳ ಹಿಂದೆ ಲೇಖಕಿಯರು ಸಾಹಿತ್ಯ ರಚನೆ ಆರಂಭಿಸಿದಾಗ ಅನೇಕ ಪ್ರತಿರೋಧಗಳನ್ನು ಕೌಟುಂಬಿಕ, ಸಾಮಾಜಿಕ ಹಾಗೂ ಶಿಕ್ಷಣದ ಕಾರಣಕ್ಕೆ ಎದುರಿಸಿಯೂ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈಗ ಅವರಿಗಿಂತ ಎಲ್ಲ ರೀತಿಯಲ್ಲಿಯೂ ಅನುಕೂಲಕರ ವಾತಾವರಣ ಸಿಕ್ಕಿದೆ. ಮಹಿಳಾ ಬರಹಗಾರರು ಸುತ್ತಲಿನ ಜನ ಸಮುದಾಯದ ಸಂವೇದನೆಗೆ ಸ್ಪಂದಿಸಬೇಕು. ಅವರ ಅಂತರಂಗವನ್ನು ಪ್ರವೇಶಿಸಬೇಕು. ಇಲ್ಲದಿದ್ದರೆ ದ್ವೀಪದಲ್ಲಿ ಕುಳಿತು ರಚಿಸಿದಂತ ಸಾಹಿತ್ಯ ಮೌಲಿಕ ಸಾಹಿತ್ಯ ಆಗಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.
    ಕಾರ್ಯಕ್ರಮ ಉದ್ಘಾಟಿಸಿದ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಮಾತನಾಡಿ, ಮಹಿಳಾ ಸಾಹಿತಿಗಳು ವನಿತಾ ಮಂಡಳಿ, ಮಹಿಳಾ ಸಮಾಜ ಎಂಬುದಕ್ಕೆ ಸೀಮಿತಗೊಳ್ಳದೆ ತಮ್ಮ ಮಿತಿಗಳನ್ನು ದಾಟಿ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆ ಇನ್ನೂ ಮುಕ್ತವಾಗಿ ಬರೆಯುವ ವಾತಾವರಣ ಇಲ್ಲ. ಹೇಗೆ ಬರೆಯಬೇಕು, ಹೇಗೆ ಬರೆಯಬಾರದು ಎಂಬ ಕಟ್ಟುಪಾಡುಗಳನ್ನು ವಿಧಿಸಲಾಗುತ್ತದೆ. ಮುಂದೆ ಹೊಗಳಿ ಹಿಂದೆ ಟೀಕಿಸುವ ಮನಸ್ಸುಗಳು ಇವೆ. ಅವಳ ಸಾಹಿತ್ಯದ ಮೂಲಕ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಗುಣ ಬೆಳೆದು ಬಂದಿದೆ ಎಂದರು.
    ಮಂಡ್ಯದಲ್ಲಿ ಸಾಹಿತ್ಯಕ ಸಾಂಸ್ಕೃತಿಕ ವಾತಾವರಣವಿದೆ. ಇಲ್ಲಿ ಏನೇ ನಡೆದರೂ ಗಂಭೀರವಾಗಿ ನಡೆಯುತ್ತದೆ. ತ್ರಿವೇಣಿ ಅಂತವರು ರಚಿಸಿದ ಸಾಹಿತ್ಯವನ್ನು ಮರೆಯುವ ಸಂದರ್ಭ ಇದೆ. ಹಳೆಯದನ್ನು ನೆನೆಯುತ್ತ ಹೊಸದನ್ನು ಬೆಳೆಸುವ ವಾತಾವರಣ ನಿರ್ಮಿಸಿಕೊಂಡು ಹೋಗಬೇಕು. ಸಾಹಿತ್ಯ ಎಂದರೆ ಕಲೆ, ಸಂಗೀತ, ಜನಪದ, ವೈದ್ಯಕೀಯ ಎಲ್ಲವನ್ನು ಒಳಗೊಳ್ಳುತ್ತದೆ. ಎಲ್ಲವನ್ನೂ ಗಮನಿಸಿ ಲೇಖಕಿಯ ಸಂಘ ಮುನ್ನಡೆಯಲಿ. ಜಿಲ್ಲಾಮಟ್ಟದಲ್ಲಿ ಅನುದಾನ ಪಡೆದು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ. ಮಹಿಳಾ ದಿನಾಚರಣೆ ಔಪಚಾರಿಕ ದಿನವಾಗಬಾರದು. ಮಹಿಳೆ ಕೆಲಸ ಮಾಡುವ ಸ್ಥಳಗಳಲ್ಲಿ ಆಕೆಗೆ ರಕ್ಷಣೆ ಇದೆಯೇ, ಆರೋಗ್ಯಕರ ವಾತಾವರಣ ಇದೆಯೇ, ಪುರುಷ ಪಡೆಯ ಮಧ್ಯೆ ಸಾಂವಿಧಾನಿಕ ಹಕ್ಕುಗಳು ಲಭ್ಯವಾಗುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕು ಎಂದರು.
    ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷೆ ಮೀರಾ ಶಿವಲಿಂಗಯ್ಯ ವಹಿಸಿದ್ದರು. ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಸಂಘದ ಜಿಲ್ಲಾ ಪದಾಧಿಕಾರಿಗಳಾದ ಡಾ.ಎಂ.ಕೆಂಪಮ್ಮ. ಡಾ.ಛಾಯಾ ಆರ್.ಪಿ.ಸುಮಾರಾಣಿ, ಬಿ.ಜಿ.ಉಮಾ ಇತರರಿದ್ದರು.
    ಇದೇ ವೇಳೆ ಹಿರಿಯ ಲೇಖಕಿಯರಾದ ಪ್ರಮೀಳ ಧರಣೇಂದ್ರಯ್ಯ, ಬಿ.ಆರ್.ಉಮಾ ಅವರನ್ನು ಅಭಿನಂದಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts