More

    ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಮೇಲೆ ಸಂಘಟಿತ ಒತ್ತಡ ಹಾಕಿ: ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಗಣ್ಯರ ಕರೆ

    ಬೆಂಗಳೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನವನ್ನು ಆಚರಣೆ ಮಾಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಪತ್ರಿಕಾ ವಿತರಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸುದ್ದಿ ಹೊತ್ತ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಶ್ರೇಷ್ಠ ಕಾಯಕ ಮಾಡುತ್ತಿರುವ ವಿತರಕರ ಬಗ್ಗೆ ಸರ್ಕಾರ ಕಾಳಜಿ ವಹಿಸಿ‌ ಅವರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ವಿತರಕರು ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಹೇಶ ಜೋಶಿ, ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಿಕಾ ವಿತರಕರ ಬಗ್ಗೆ, ಕೋವಿಡ್ ಸಂದರ್ಭದಲ್ಲಿನ ಸಂಕಷ್ಟಗಳ ಬಗ್ಗೆ ಒಂದು ಗೋಷ್ಠಿ ಏರ್ಪಡಿಸಲಾಗುವುದು ಎಂದರು. ಕಸಾಪ ಸದಸ್ಯತ್ವ ಅಭಿಯಾನದಲ್ಲಿ ಒಂದು ಕನ್ನಡ ಪತ್ರಿಕೆಯನ್ನು ಕಡ್ಡಾಯವಾಗಿ ಮನೆಗೆ ತರಿಸಬೇಕು ಎಂದು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

    ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ಇ-ಶ್ರಮ್ ಕಾರ್ಡ್​​ ಎಲ್ಲ ಪತ್ರಿಕಾ ವಿತರಕರಿಗೆ ಸಿಗುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ನಾನು ಪತ್ರಿಕೆ ಹಾಕುತ್ತಲೇ ಬೆಳೆದವನು. ಹಾಗಾಗಿ ವಿತರಕರ ಬಗ್ಗೆ ವಿಶೇಷ ಕಾಳಜಿ ಇದೆ. ನೀವು ಸಂಘಟಿತರಾದರೆ ಮಾತ್ರ ಸರ್ಕಾರ ನಿಮ್ಮ ಬೇಡಿಕೆ ಈಡೇರಿಕೆ ಕಡೆಗೆ ಗಮನ ನೀಡುತ್ತದೆ ಎಂದರು.

    ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್. ಹರ್ಷ ಮಾತನಾಡಿ, ಪತ್ರಿಕಾ ವಿತರಕರ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಈಡೇರಿಸಲು ಅಗತ್ಯವಾದ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

    ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಮೇಲೆ ಸಂಘಟಿತ ಒತ್ತಡ ಹಾಕಿ: ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಗಣ್ಯರ ಕರೆ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕಳೆದೊಂದು ವರ್ಷದಲ್ಲಿ ಸಂಘಟನೆ ಸಾಕಷ್ಟು ಬೆಳೆದಿದೆ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಸಾಗಿದರೆ ಮಾತ್ರ ನಿಮ್ಮ ಬೇಡಿಕೆ ಈಡೇರಲು ಸಾಧ್ಯ. ಆದ್ದರಿಂದ ಸಂಘಟನೆಗೆ ಮೊದಲು ಆದ್ಯತೆ ನೀಡಿ ಎಂದರು. ಕೆಯುಡಬ್ಲ್ಯುಜೆ ನಿಮಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಎಲ್ಲ ಜಿಲ್ಲೆ ಮತ್ತು ತಾಲೂಕುಗಳ ವಿತರಕರನ್ನು ಗುರುತಿಸಿ ಗೌರವಿಸಲಾಗಿದ್ದು, ಈ ಸಂಪ್ರದಾಯ ಮುಂದುವರಿಯಲಿದೆ ಎಂದರು.

    ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಐಎಫ್​ಡಬ್ಲ್ಯುಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿತರಕರ ಒಕ್ಕೂಟದ ಲಾಂಛನವುಳ್ಳ ಬಾವುಟವನ್ನು ಅನಾವರಣ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳು, ಹಿರಿಯ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು.

    ಮಗನ ಉದ್ಯೋಗಕ್ಕಾಗಿ ಸಂಸದೆಯ ಕಾಲಿಗೆ ಬಿದ್ದ ಮಹಿಳೆ; ಹೈಕೋರ್ಟ್ ತೀರ್ಪಿಗೂ ಬಗ್ಗದ ಆಡಳಿತ ಮಂಡಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts